ADVERTISEMENT

ನಮ್ಮ ಜನ ನಮ್ಮ ಧ್ವನಿ: ಯಾದಗಿರಿ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಅಪಘಾತ ವಲಯ ಗುರುತು

ನಿರ್ವಹಣೆ ಇಲ್ಲದ ಬ್ಯಾರಿಕೇಡ್‌ಗಳು; ಜಿಲ್ಲೆಯಲ್ಲಿ 65 ಬ್ಲ್ಯಾಕ್‌ಸ್ಪಾಟ್

ಬಿ.ಜಿ.ಪ್ರವೀಣಕುಮಾರ
Published 17 ಅಕ್ಟೋಬರ್ 2021, 16:23 IST
Last Updated 17 ಅಕ್ಟೋಬರ್ 2021, 16:23 IST
ಶಹಾಪುರ ತಾಲ್ಲೂಕಿನ ರಸ್ತಾಪುರ ಕ್ರಾಸ್ ಬಳಿ ಅಳವಡಿಸಿದ ನಾಮಫಲಕ
ಶಹಾಪುರ ತಾಲ್ಲೂಕಿನ ರಸ್ತಾಪುರ ಕ್ರಾಸ್ ಬಳಿ ಅಳವಡಿಸಿದ ನಾಮಫಲಕ   

ಯಾದಗಿರಿ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಜಿಲ್ಲೆಯ ವಿವಿಧೆಡೆ ಪದೇ ಪದೇ ಅಪಘಾತ ಸಂಭವಿಸುವ ಅಪಘಾತ ವಲಯವನ್ನು (ಬ್ಲ್ಯಾಕ್‌ಸ್ಪಾಟ್‌) ಗುರುತಿಸಲಾಗಿದೆ.

ಜಿಲ್ಲೆಯಲ್ಲಿ 2019ರಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ತಂಡದಿಂದ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತ ಸಂಭವಿಸುವಂತಹ 65 ಅಪಘಾತ ವಲಯ (ಬ್ಲ್ಯಾಕ್‌ಸ್ಪಾಟ್)ಗಳನ್ನು ಗುರುತಿಸಲಾಗಿದೆ.

ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳ ವತಿಯಿಂದ ಜಂಟಿ ಸಮೀಕ್ಷೆ ಕೈಗೊಂಡು ಬ್ಲ್ಯಾಕ್‌ಸ್ಪಾಟ್‌ಗಳ ವರದಿ ಸಿದ್ಧಪಡಿಸಲಾಗಿದೆ. ಆ ಸ್ಥಳಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಸೂಚನಾ ಫಲಕಗಳನ್ನು ಅಳವಡಿಸುವುದು, ಸ್ಪೀಡ್ ಬ್ರೇಕರ್ ಅಳವಡಿಸುವುದು, ಜಂಗಲ್ ಕಟಿಂಗ್ ಮಾಡಿಸುವುದು, ಝೀಬ್ರಾ ಕ್ರಾಸಿಂಗ್, ರಸ್ತೆಯನ್ನು ನೇರವಾಗಿ ಸರಿಪಡಿಸುವ ಅಂಶಗಳಿವೆ. ಆದರೆ, ಕೆಲ ಕಡೆ ಮಾತ್ರ ಇವುಗಳನ್ನು ಪಾಲಿಸಲಾಗಿದೆ.

ಅವೈಜ್ಞಾನಿಕ ರಸ್ತೆ ಹಂಪ್‌ಗಳು: ಜಿಲ್ಲೆಯ ರಸ್ತೆಗಳಲ್ಲಿರುವ ಹಂಪ್ಸ್‌ಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬಣ್ಣ ಬಳಿದು, ರಸ್ತೆ ಉಬ್ಬು ಇರುವ ಎಚ್ಚರಿಕೆಯ ಫಲಕಗಳನ್ನು ಹಾಕಬೇಕು. ರಸ್ತೆ ಹಂಪ್‌ಗಳಿಗೆ ಬಿಳಿ ಬಣ್ಣ ಬಳಿದು ಮಾಹಿತಿ ನೀಡಬೇಕು. ಆದರೆ, ರಸ್ತೆಗಳನ್ನು ಬೇಕಾಬಿಟ್ಟಿ ತಗ್ಗು ದಿನ್ನೆಗಳನ್ನಾಗಿ ಮಾಡಲಾಗಿದೆ. ಕೆಲವರು ತಮ್ಮ ಮನೆಗಳ ಎದುರೇ ಅನವಶ್ಯಕವಾಗಿ ಹಂಪ್ಸ್‌ ಹಾಕಿಸಿದ್ದಾರೆ. ಆದರೆ, ವಾಹನ ಸವಾರರು ಇದನ್ನು ಅರಿಯದೇ ಅಪಘಾತಕ್ಕೀಡಾಗುತ್ತಿದ್ದಾರೆ.

ADVERTISEMENT

‘ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್ ಎಂಜಿನಿಯರಿಂಗ್ ವಿಭಾಗ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇತರೆ ಇಲಾಖೆಗಳಿಂದ ನಿರ್ಮಾಣವಾಗುವ ವಿವಿಧ ರೀತಿಯ ರಸ್ತೆಗಳಲ್ಲಿ ಹಾಕಲಾದ ಹಂಪ್ಸ್‌ಗಳು ಸಂಚಾರದ ವೇಳೆ ವಾಹನ ಸವಾರರ ಗಮನಕ್ಕೆ ಬರಬೇಕು. ಇಲ್ಲದಿದ್ದಲ್ಲಿ ಅವಘಡಗಳು ಸಂಭವಿಸುತ್ತವೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂಬ ಆರೋಪ ಕೇಳಿ ಬರುತ್ತದೆ.

ಅಪಘಾತಕ್ಕೆ ಕಾರಣಗಳು: ಮೂರು ಇಲಾಖೆಗಳಿಂದ ಅಪಘಾತ ವಲಯ ಗುರುತಿಸಿದ್ದರೂ ಮತ್ತೆ ಅಲ್ಲೇ ಅಪಘಾತಗಳು ಸಂಭವಿಸಲು ಪೊಲೀಸ್‌ ಇಲಾಖೆ ಕೆಲವು ಕಾರಣಗಳನ್ನು ನೀಡಿದೆ.

ವಾಹನ ಸವಾರರು ರಸ್ತೆ ತಿರುವಿನಲ್ಲಿ ನಿಧಾನವಾಗಿ ಸಾಗದೇ ಅಥವಾ ಶಬ್ದ (ಹಾರ್ನ್‌) ಮಾಡದೇ ವೇಗವಾಗಿ ತೆರಳುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತಿ ವೇಗ ಮತ್ತು ಅಲಕ್ಷ್ಯತನದಿಂದ ವಾಹನ ಓಡಿಸುವುದು, ಮೊಬೈಲ್‌ನಲ್ಲಿ ಮಾತಾಡಿಕೊಂಡು ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.

ಅಂಕಿ ಅಂಶ
2017ರಿಂದ 2021ರ ಸೆಪ್ಟೆಂಬರ್‌ವರೆಗಿನ ಅಪಘಾತಗಳ ವಿವರ
ವರ್ಷ;ಮಾರಕ ಅಪಘಾತ;ಮಾರಕವಲ್ಲದ;ಮೃತಪಟ್ಟವರು;ಗಾಯಗೊಂಡವರು
2017;139;280;163;701
2018;132;299;157;732
2019;152;260;163;672
2020;134;271;150;699
2021 (ಸೆ.);114;203;123;504
ಒಟ್ಟು;671;1,313;756;3,308
ಆಧಾರ: ಪೊಲೀಸ್ ಇಲಾಖೆ

********
ಏನಿದು ಬ್ಲ್ಯಾಕ್‌ ಸ್ಪಾಟ್‌?

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾರ್ಗಸೂಚಿ ನಿಯಮಗಳನ್ನು ಅಳವಡಿಸುವ ಸಲುವಾಗಿ ನಾಲ್ಕು ವರ್ಷಗಳ ಹಿಂದೆ ಕಂದಾಯ, ಲೋಕೋಪಯೋಗಿ, ಸಾರಿಗೆ, ಪೊಲೀಸ್‌ ಇಲಾಖೆಯು ಜಂಟಿಯಾಗಿ ಸಮೀಕ್ಷೆ ನಡೆಸಿದ್ದವು. ಅದರಲ್ಲಿ ಮುಖ್ಯವಾಗಿ ಮೂರು ವರ್ಷಗಳಲ್ಲಿ ಐದಕ್ಕಿಂತ ಹೆಚ್ಚು ಜನ ಮೃತಪಟ್ಟ ಸ್ಥಳವನ್ನು ಬ್ಲ್ಯಾಕ್‌ಸ್ಪಾಟ್‌ ಎಂದು ಗುರುತಿಸಲಾಯಿತು.

ಅಲ್ಲದೆ 3 ರಿಂದ 5 ಜನ ಮೃತಪಟ್ಟ ಸ್ಥಳವನ್ನು ಅಪಘಾತವಲಯ ಎಂದು ನಿರ್ಧರಿಸಲಾಗಿತ್ತು. ಅದರಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾಮಫಲಕ ಅಳವಡಿಸುವುದು ಹಾಗೂ ವಾಹನದ ವೇಗವನ್ನು ತಗ್ಗಿಸಲು ಹೆದ್ದಾರಿ ಮೇಲೆ ಡೊಂಕಾಗಿ ಬ್ಯಾರಿಕೇಡ್ ಸ್ಥಾಪಿಸಲಾಗಿತ್ತು. ಆದರೆ, ಅವೆಲ್ಲವು ನಿರ್ವಹಣೆ ಇಲ್ಲದೆ ನೆಲಕ್ಕುರಳಿವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
*****
ನಿರ್ವಹಣೆ ಇಲ್ಲದೆ ಪಾಳು ಬಿದ್ದ ಬ್ಯಾರಿಕೇಡ್

ಶಹಾಪುರ: ನಗರದಲ್ಲಿ ಹಾದು ಹೋಗಿರುವ ಬೀದರ್‌-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಮೇಲೆ ಆಗುತ್ತಿರುವ ರಸ್ತೆ ಅಪಘಾತವನ್ನು ತಡೆಯುವ ಉದ್ದೇಶದಿಂದ ಬ್ಲ್ಯಾಕ್‌ಸ್ಪಾಟ್‌ ಗುರುತಿಸಿದ್ದು, ಅವುಗಳಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ.

ತಾಲ್ಲೂಕಿನ ಭೀಮರಾಯನಗುಡಿ ಠಾಣಾ ಅಧೀನದ ಬಾಪುಗೌಡ ವೃತ್ತ, ಕೃಷಿ ಮಹಾವಿದ್ಯಾಲಯ ಕಾಲೇಜು ಹತ್ತಿರ, ಮದ್ರಿಕಿ ಕ್ರಾಸ್, ಶಹಾಪುರ ಠಾಣಾ ವ್ಯಾಪ್ತಿಯ ವಿಭೂತಿಹಳ್ಳಿ ಕ್ರಾಸ್, ಶಹಾಪುರ-ಹತ್ತಿಗೂಡೂರ ಹೆದ್ದಾರಿ ಮಧ್ಯದ ರಸ್ತಾಪುರ ಕಮಾನ, ಹತ್ತಿಗೂಡೂರ ಸಮೀಪದ ಕೆಇಬಿ ಎದುರುಗಡೆ, ಶಹಾಪುರ-ಯಾದಗಿರಿ ಹೆದ್ದಾರಿಯ ದೋರನಹಳ್ಳಿ ಹತ್ತಿರ, ಅಲ್ಲದೆ ಗೋಗಿ ಠಾಣೆ ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಮಂಜುನಾಥ ಕಾಟನ್‌ ಮಿಲ್, ದೊರಿ ಗುಡ್ಡ ಕ್ರಾಸ್ ಅನ್ನು ಪೊಲೀಸ್‌ ಇಲಾಖೆಯು ರಸ್ತೆ ಅಪಘಾತ ವಲಯ (ಬ್ಲಾಕ್ ಸ್ಪಾಟ್) ಎಂದು ಗುರುತಿಸಿ ವಾಹನದ ವೇಗವನ್ನು ತಗ್ಗಿಸುವ ಉದ್ದೇಶದಿಂದ ಅಗತ್ಯ ಕ್ರಮಗಳನ್ನು ಎರಡು ವರ್ಷಗಳ ಹಿಂದೆ ತೆಗೆದುಕೊಳ್ಳಲಾಗಿತ್ತು.

ರಸ್ತೆ ಅಪಘಾತ ವಲಯದ ಹಾಗೂ ಬ್ಲಾಕ್ ಸ್ಪಾಟ್ ಪ್ರದೇಶದಲ್ಲಿ ಎಚ್ಚರಿಕೆಯ ನಾಮಫಲಕಗಳನ್ನು ಆರು ತಿಂಗಳ ಹಿಂದೆ ಅಳವಡಿಸಿದ್ದಾರೆ. ಹೆದ್ದಾರಿ ಮೇಲೆ ವೇಗವನ್ನು ತಡೆಯಲು ಸಣ್ಣದಾದ ಉಬ್ಬುಗಳನ್ನು ನಿರ್ಮಿಸಿದ್ದಾರೆ. ಆದರೆ, ವಾಹನದ ವೇಗವನ್ನು ತಗ್ಗಿಸುವ ಉದ್ದೇಶದಿಂದ ಸ್ಥಾಪಿಸಿದ ಬ್ಯಾರಿಕೇಡ್‌ಗಳನ್ನು ದೂರ ತಳ್ಳಿದ್ದಾರೆ.

‘ಬ್ಯಾರಲ್‌ನಲ್ಲಿ ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ಸ್ಥಾಪಿಸಿದ ಬ್ಯಾರಿಕೇಡ್‌ಗಳ ಉದ್ದೇಶ ಈಡೇರಿಲ್ಲ. ವೇಗ ತಡೆಗೆ ಶಾಶ್ವತ ಬ್ಯಾರಿಕೇಡ್ ಅಳವಡಿಸಿದರೆ ಹೆಚ್ಚು ಉಪಯುಕ್ತವಾಗುತ್ತದೆ’ ಎನ್ನುತ್ತಾರೆ ವಾಹನ ಸವಾರರು.

ಬ್ಯಾರಿಕೇಡ್ ಅಳವಡಿಸಿ:

ಶಹಾಪುರ ತಾಲ್ಲೂಕಿನ ರಸ್ತಾಪುರ ಕಮಾನಿನಿಂದ ಹತ್ತಿಗೂಡೂರ ಸಮೀಪದ ಕೆಇಬಿ ಎದುರುಗಡೆಯ ರಸ್ತೆ ನೇರವಾಗಿದೆ. ವಾಹನವನ್ನು ವೇಗವಾಗಿ ಓಡಿಸಿಕೊಂಡು ತೆರಳುವುದರಿಂದ ಅಪಘಾತ ಹೆಚ್ಚು ಸಂಭವಿಸುತ್ತವೆ. ರಸ್ತೆ ಅಪಘಾತದಲ್ಲಿ ಮತ್ತೊಬ್ಬರ ಜೀವ ಉಳಿಸಬೇಕಾದರೆ ವಾಹನದ ವೇಗ ತಡೆಗೆ ತಕ್ಷಣ ಬ್ಯಾರಿಕೇಡ್ ಅಳವಡಿಸಬೇಕಾದ ತುರ್ತು ಕೆಲಸವಾಗಬೇಕು.
****
ಸುರಪುರ: ಅಪಘಾತ ವಲಯ ಕಡಿಮೆ

ಸುರಪುರ: ನಗರಕ್ಕೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತವನ್ನು ಅಪಘಾತ ವಲಯವೆಂದು ಪೊಲೀಸರು ಗುರುತಿಸಿದ್ದಾರೆ. ಅಲ್ಲಿ ಕ್ಯಾಟ್ ಐ, ಮತ್ತು ರಸ್ತೆ ಗುರುತುಗಳನ್ನು ಹಾಕಲಾಗಿದೆ.

ಲೋಕೋಪಯೋಗಿ ಇಲಾಖೆ ನಗರಕ್ಕೆ ಹತ್ತಿರವಿರುವ ಗುಡ್ಡದರಾಯನ ಗುಡಿ ಮತ್ತು ಸಿದ್ದಾಪುರ ಕೆರೆಯ ರಸ್ತೆಯನ್ನು ಅಪಘಾತ ವಲಯವೆಂದು ಗುರುತಿಸಿದೆ. ಎರಡು ಕಡೆ ರಸ್ತೆ ವಿಸ್ತರಣೆ ಮಾಡಲಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ತಾಲ್ಲೂಕಿನ ಶೆಳ್ಳಗಿ ಕ್ರಾಸ್‌ ಅನ್ನು ಅಪಘಾತ ವಲಯವೆಂದು ಗುರುತಿಸಿದ್ದು, ಅಲ್ಲಿ ಸುಧಾರಣೆ ಕೆಲಸ ಕೈಗೆತ್ತಿಕೊಳ್ಳಲಾಗಿದೆ.

ಕುಂಬಾರಪೇಟೆ ತಿರುವು:

ನಗರದ ಕುಂಬಾರ ಪೇಟೆಯ ಕೋಟೆಯ ಹತ್ತಿರದ ರಾಜ್ಯ ಹೆದ್ದಾರಿ ಅಪಾಯಕಾರಿ ತಿರುವು ಮತ್ತು ಇಳಿಜಾರಿನಿಂದ ಕೂಡಿದೆ. ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಆದರೂ ಈ ಸ್ಥಳವನ್ನು ಅಪಘಾತ ವಲಯಕ್ಕೆ ಸೇರಿಸಿಲ್ಲ.

****

ಜಿಲ್ಲೆಯಲ್ಲಿ ಒಂದೇ ಕಡೆ ಅಪಘಾತ ಸಂಭವಿಸಲು ಹಲವು ಕಾರಣಗಳಿವೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದರಿಂದ ಇಂಥ ಘಟನೆಗಳು ನಡೆಯುತ್ತವೆ
ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ಪೊಲೀಸ್‌ ಇಲಾಖೆಯವರು ಅಪಘಾತ ವಲಯ (ಬ್ಲ್ಯಾಕ್‌ಸ್ಪಾಟ್‌)ಗಳನ್ನು ಗುರುತಿಸುತ್ತಾರೆ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಸವಾರರು ಸಹಕಾರ ನೀಡಬೇಕು
ದಾಮೋದರ ಕೆ, ಪ್ರಾದೇಶಿಕ ಸಾರಿಗೆ ಅಧಿಕಾರಿ

***

ಆಗಾಗ ಒಂದೇ ಸ್ಥಳದಲ್ಲಿ ಅಪಘಾತ ಸಂಭವಿಸಿದರೆ ಆ ಸ್ಥಳವನ್ನು ಅಪಘಾತ ವಲಯವೆಂದು ಗುರುತಿಸಿ ಸುಧಾರಣೆ ಕಾಮಗಾರಿ ಕೈಗೊಳ್ಳುತ್ತೇವೆ
ಎಸ್.ಜಿ.ಪಾಟೀಲ ಇಇಇ, ಪಿಡಬ್ಲ್ಯುಡಿ ಸುರಪುರ

***

ಸುರಪುರ ತಾಲ್ಲೂಕಿನ ಬಹುತೇಕ ಕಡೆ ಅಪಘಾತಗಳು ಸಂಭವಿಸುತ್ತಿವೆ. ಆ ಸ್ಥಳಗಳಲ್ಲಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು
ಮಲ್ಲೇಶಿ ನಾಗರಾಳ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ಸಾರಾಂಶ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಜಿಲ್ಲೆಯ ವಿವಿಧೆಡೆ ಪದೇ ಪದೇ ಅಪಘಾತ ಸಂಭವಿಸುವ ಅಪಘಾತ ವಲಯವನ್ನು (ಬ್ಲ್ಯಾಕ್‌ಸ್ಪಾಟ್‌) ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.