ADVERTISEMENT

2 ಲಕ್ಷ ರೈತರಿಗೆ ₹ 3 ಲಕ್ಷದವರೆಗೆ ಸಾಲ: ಸುರೇಶ ಸಜ್ಜನ್

ರೈತರು ಯೋಜನೆಗಳ ಲಾಭ ಪಡೆದು ಸ್ವಾವಲಂಬನೆ ಸಾಧಿಸಿ: ಸಜ್ಜನ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 14:49 IST
Last Updated 17 ಅಕ್ಟೋಬರ್ 2021, 14:49 IST
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆವರಣದಲ್ಲಿ ಸಂಘವು ಹಮ್ಮಿಕೊಂಡಿದ್ದ 2020-21 ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳನ್ನು, ಹಣ ಸಂಗ್ರಹಗಾರರನ್ನು ಮತ್ತು ಠೇವಣಿದಾರರನ್ನು ಸನ್ಮಾನಿಸಲಾಯಿತು
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆವರಣದಲ್ಲಿ ಸಂಘವು ಹಮ್ಮಿಕೊಂಡಿದ್ದ 2020-21 ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳನ್ನು, ಹಣ ಸಂಗ್ರಹಗಾರರನ್ನು ಮತ್ತು ಠೇವಣಿದಾರರನ್ನು ಸನ್ಮಾನಿಸಲಾಯಿತು   

ಯಾದಗಿರಿ: ’ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಎರಡೂ ಜಿಲ್ಲೆಗಳಲ್ಲಿರುವ ಸಣ್ಣ ಮತ್ತು ಮಧ್ಯಮ ವರ್ಗದ 2 ಲಕ್ಷ ಹೊಸ ರೈತರಿಗೆ ₹3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವ ಗುರಿಯೆಡೆಗೆ ಸಾಗಿದೆ‘ ಎಂದು ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.

ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆವರಣದಲ್ಲಿ ಸಂಘವು ಹಮ್ಮಿಕೊಂಡಿದ್ದ 2020-21 ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಇಲಾಖೆಯಿಂದ ಗ್ರಾಮೀಣ ಭಾಗದ ರೈತರ ಅಭಿವೃದ್ಧಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ಅದರ ಲಾಭ ಪಡೆದು ಆರ್ಥಿಕವಾಗಿ ಬದಲಾವಣೆ ಸಾಧಿಸಬೇಕೆಂದು ಹೇಳಿದರು.

ADVERTISEMENT

ಈ ಹಿಂದೆ ಕೇಂದ್ರ ಬ್ಯಾಂಕ್ ₹56 ಕೋಟಿ ನಷ್ಟದಲ್ಲಿತ್ತು. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲಾ ಶಾಸಕರ ಒಳಗೊಂಡ ನಿಯೋಗವು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ರೈತರ ವಾಸ್ತವಿಕ ಪರಿಸ್ಥಿತಿ ವಿವರಿಸಿದ ನಂತರ ತಕ್ಷಣ ಅಪೆಕ್ಸ್ ಬ್ಯಾಂಕ್‌ನಿಂದ ₹200 ಕೋಟಿ ಬಿಡುಗಡೆ ಮಾಡಿದರು. ಇದರಿಂದ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ರೈತರು ಕೃಷಿ ಜೊತೆಗೆ ಉಪಕಸುಬಗಳಾದ ಹೈನುಗಾರಿಗೆ, ಕೋಳಿ ಸಾಕಾಣಿಕೆ, ಮಾಡಿಕೊಳ್ಳಲು ಸಂಘಗಳ ಮೂಲಕ ಅಗತ್ಯ ಸಾಲ ಸೌಲಭ್ಯ ಸಿಗಲಿದೆ. ಈ ಭಾಗದಲ್ಲಿ ನೀರಾವರಿ ಸೌಲಭ್ಯ ಇರುವುದರಿಂದ ಪ್ರತಿಯೊಂದು ಕುಟುಂಬ ಹಸು-ಎಮ್ಮೆ ಸಾಕಾಣಿಕೆ ಮಾಡುವ ಮೂಲಕ ಸ್ವಾವಲಂಬನೆ ಬದುಕು ಸಾಗಿಸಬೇಕು ಎಂದು ಸಲಹೆ ನೀಡಿ, ವಿವಿಧ ಯೋಜನೆಗಳನ್ನು ವಿವರಿಸಿದರು.

ಈ ಸಂಘವು ಜಿಲ್ಲೆಯಲ್ಲಿಯೇ ಕ್ರಿಯಾಶೀಲವಾಗಿ ಕೆಲಸ ಮಾಡಿಕೊಂಡು ಬಂದಿದೆ. ಈ ವರ್ಷ ₹19 ಲಕ್ಷ ಆದಾಯ ಗಳಿಸಿರುವುದು ಸಂತಸ. ಕೇಂದ್ರ ಬ್ಯಾಂಕ್‌ನಿಂದ 199 ರೈತರಿಗೆ ₹1.14 ಕೋಟಿ ಬೆಳೆ ಸಾಲ ನೀಡಲಾಗಿದೆ. ರೈತರು ಸಕಾಲಕ್ಕೆ ಸಾಲ ಮರು ಪಾವತಿಸಬೇಕು. ಅಂದಾಗ ಮಾತ್ರ ಸಂಘಗಳು ಆರ್ಥಿಕವಾಗಿ ಬದಲಾವಣೆಯಾಗುವ ಜೊತೆಗೆ ಇತರ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಂಬಿಕೆ ಮೇಲೆ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಮುಂಬರುವ ದಿನಗಳಲ್ಲಿ ಈ ಭಾಗದ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಬ್ಯಾಂಕ್ ನಿರ್ದೇಶಕ ಸಿದ್ರಾಮರೆಡ್ಡಿ ಪಾಟೀಲ ಕೌಳೂರ ಮಾತನಾಡಿ, ಎರಡು ತಾಲ್ಲೂಕುಗಳ ರೈತರಿಗೆ ಆರ್ಥಿಕ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೇ ಇನ್ನೂ ಅಗತ್ಯ ಇರುವ ಕಡೆ ಸಹಕಾರ ಸಂಘಗಳ ಸ್ಥಾಪನೆಗೆ ಗಮನ ಹರಿಸಲಾಗುವುದು. ಇದರಿಂದ ಆ ಭಾಗದ ರೈತರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ, ಎಲ್ಲರ ಸಹಕಾರದಿಂದ ಸರ್ಕಾರದ ಯೋಜನೆಗಳ ಲಾಭ ರೈತರಿಗೆ ತಲುಪಿಸಿದ್ದೇವೆ. ಸಂಘದ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಪುಟಗಿ ವಾರ್ಷಿಕ ವರದಿ ವಾಚಿಸಿದರು.

ಸಮಾರಂಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳನ್ನು, ಹಣ ಸಂಗ್ರಹಗಾರರನ್ನು ಮತ್ತು ಠೇವಣಿದಾರರನ್ನು ಸನ್ಮಾನಿಸಲಾಯಿತು. ಸಾಬಣ್ಣ ಯಾದಗಿರಿ ಸ್ವಾಗತಿಸಿ, ವಂದಿಸಿದರು.

ಸಂಘದ ಉಪಾಧ್ಯಕ್ಷ ತಿಮ್ಮಣ್ಣ ಇದ್ಲಿ, ಸಂಘದ ನಿರ್ದೇಶಕ ಶರಣಪ್ಪಗೌಡ ಮಾಲಿಪಾಟೀಲ, ಅಮೀನರಡ್ಡಿ ಬಿಳ್ಹಾರ, ಶರಣಪ್ಪ ಸೋಮಣೋರ, ಬೋಜನಗೌಡ ಯಡ್ಡಳ್ಳಿ, ದೇವಿಂದ್ರಪ್ಪಗೌಡ ಪಾಟೀಲ, ಸಾಬರಡ್ಡಿ ತಮ್ಮಣೋರ, ಹಣಮವ್ವ ಸಾಬಣ್ಣ, ಗ್ರಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ, ಶರಣಪ್ಪ ಸಾಹು ಗಡೇದ್, ಬಸವರಾಜಪ್ಪ ನಾಯಕ, ಭೀಮರೆಡ್ಡಿ ರಾಂಪುರಳ್ಳಿ, ಬಸವರಾಜ ಬಾಚವಾರ್, ಖುದಾನ ಸಾಬ್, ಕೆವೈಡಿಸಿಸಿ ಯಾದಗಿರಿ ವ್ಯವಸ್ಥಾಪಕ ಮಹ್ಮದ್ ರಫೀಕ್, ಸಹಕಾರ ಇಲಾಖೆ ಉಪನಿರ್ದೇಶಕ ಗೋವಿಂದಪ್ಪ ಸೇಡಂ ಇದ್ದರು.

*****

ಸಹಕಾರ ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಎರಡು ಜಿಲ್ಲೆಗಳಿಗೆ ಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಕೇಂದ್ರ ಬ್ಯಾಂಕ್‌ಗೆ ಹೆಚ್ಚಿನ ಹಣ ಬಿಡುಗಡೆಯಾಗಲಿದೆ
ಸುರೇಶ ಸಜ್ಜನ್, ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷ 

ಸಾರಾಂಶ

ಸಹಕಾರ ಇಲಾಖೆಯಿಂದ ಗ್ರಾಮೀಣ ಭಾಗದ ರೈತರ ಅಭಿವೃದ್ಧಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆರ್ಥಿಕ ಸಹಾಯ ನೀಡುವ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.