ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕು ಸಾಂಸ್ಕೃತಿಕ, ಧಾರ್ಮಿಕ ಮತ್ತು ಪ್ರಾಗೈತಿಹಾಸಿಕ ಸ್ಥಳಗಳನ್ನು ಹೊಂದಿರುವ ವಿಶಿಷ್ಟ ತಾಣವಾಗಿದೆ.
ರಾಜನಕೋಳೂರು ಗ್ರಾಮದ ಬುಡ್ಡರ ಮನೆಗಳು, ಹಗರಟಗಿ ಗ್ರಾಮದ 101 ದೇವಸ್ಥಾನ ಮತ್ತು 101 ಬಾವಿಗಳಿರುವ ಊರು ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.
ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ನೆಲೆಗಳಲ್ಲಿ ಹುಣಸಗಿ ತಾಲ್ಲೂಕು ಪ್ರಮುಖವಾಗಿದೆ. ಸುಮಾರು 3 ಲಕ್ಷ ವರ್ಷಗಳ ಹಿಂದಿನ ಜೀವ ಸಂಕುಲಗಳ ನೆಲೆಯಾಗಿದ್ದ ಹುಣಸಗಿ ಈಗ ವಿಶ್ವದ್ಯಾಂತ ಗುರುತಿಸಲ್ಪಟ್ಟಿದೆ. ಹುಣಸಗಿ ಸುತ್ತಲಿನ ಗ್ರಾಮಗಳಲ್ಲಿ ಶೋಧಿತ ಆದಿ ಮಾನವನ ನೆಲೆಗಳು ಪ್ರಾಗೈಸಿಹಾಸಿಕವಾಗಿ ಮಹತ್ವಾಗಿವೆ.
ಹುಣಸಗಿ ಪಟ್ಟಣ ಪಂಚಾಯಿತಿಯಲ್ಲಿ ಇರುವ ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯದಲ್ಲಿ 3 ಲಕ್ಷ ವರ್ಷಗಳ ಹಿಂದಿನ ಕಾಲದಲ್ಲಿ ಆದಿ ಮಾನವರು ಬಳಸಿದ ಆಯುಧಗಳು, ಹಳೆ ಮತ್ತು ಹೊಸ ಶಿಲಾಯುಗ, ಪ್ರಾಚೀನ ಕಾಲದ ಕುರುಹುಗಳಿವೆ
ಪದ್ಮಶ್ರೀ ಪುರಸ್ಕೃತ, ಸಂಶೋಧಕ ಡಾ.ಕೆ.ಪದ್ದಯ್ಯರ ಅವಿರತ ಶ್ರಮದಿಂದ ವಸ್ತು ಸಂಗ್ರಹಾಲಯ ಅಸ್ತಿತ್ವಕ್ಕೆ ಬಂದಿದೆ. 1965ರಿಂದ ಎರಡು ದಶಕಗಳ ನಿರಂತರ ಸಂಶೋಧನೆ, ಉತ್ಖತನದ ಮೂಲಕ ಪ್ರಾಗೈತಿಹಾಸಿಕ ಕಾಲದ ಜನ ವಸತಿ ಬಗ್ಗೆ ಕುರುಹು ಪತ್ತೆ ಮಾಡಲಾಗಿದೆ.
ಹುಣಸಗಿ ತಾಲ್ಲೂಕಿನ ಬೂದಿಹಾಳ, ವಜ್ಜಲ್, ಕಲ್ಲದೇವನಹಳ್ಳಿ, ಕೊಡೆಕಲ್ಲ, ಅಗ್ನಿ, ಅರಕೇರಾ, ಮುದನೂರ, ಸದಬ, ತೆಗ್ಗಳ್ಳಿ, ರಾಜನಕೋಳೂರು ಸೇರಿದಂತೆ ವಿವಿಧೆಡೆ ಸಂಶೋಧನೆ ಮಾಡಿದ್ದಾರೆ. ಮೂರು ಲಕ್ಷ ವರ್ಷದಷ್ಟು ಹಿಂದೆಯೇ ಈ ಭಾಗದಲ್ಲಿ ಜನವಸತಿ ಇತ್ತು ಎಂಬುದನ್ನು ದಾಖಲಿಸಿದ್ದಾರೆ.
‘ಅಶೋಲಿಯನ್ ಸಂಸ್ಕೃತಿ, ಹಳೆಯ ಶಿಲಾಯುಗದಲ್ಲಿಯೇ ಇಲ್ಲಿ ಜನ ವಸತಿ ಇತ್ತು ಎಂದು ಇಲ್ಲಿ ದೊರೆತ ನೂರಾರು ವಸ್ತುಗಳು ಸಾಕ್ಷೀಕರಿಸುತ್ತವೆ. ಯುರೋಪಿನ ಫ್ರಾನ್ಸ್ ರಾಷ್ಟ್ರದ ‘ಸೇಂಟ್ ಅಶೂಲ್’ ಎಂಬ ನೆಲೆಯಲ್ಲಿ ಪ್ರಥಮವಾಗಿ ಕಂಡು ಬಂದ ಶಿಲಾಯುಧಗಳಿಗೂ ಹೋಲುವುದರಿಂದ ಇಂಥ ಶಿಲಾಯುಗದ ಸಂಸ್ಕೃತಿಯ ನೆಲೆಗಳಿಗೆ ‘ಅಶೋಲಿಯನ್ ಸಂಸ್ಕೃತಿ ತಾಣ’ ಎಂದು ಪ್ರಕ್ತನ ತಜ್ಞರು ಹೇಳುತ್ತಾರೆ.
ವಸ್ತು ಸಂಗ್ರಹಾಲಯದಲ್ಲಿ ಪ್ರಾಣಿಗಳ ಎಲುಬು, ಹಲ್ಲುಗಳು, ದಿನಬಳಕೆಗೆ ವಸ್ತುಗಳು, ಬ್ಲೇಡ್ ಆಕಾರದ ನುಣುಪಾದ ಕಲ್ಲಿನ ಹರಿತ ಚೂರು, ಕುಡಿಕೆ, ಮಡಿಕೆಗಳನ್ನು ಕಾಣಬಹುದು.
ಕಚೇರಿ ಆವರಣದಲ್ಲಿ ಗತಕಾಲದ ಇತಿಹಾಸ ಸಾರುವ ಶಿಲಾ ಶಾಸನಗಳು ಇವೆ. ವಿವಿಧ ಕಾಲಘಟ್ಟದ ಆಯುಧಗಳಾದ ಕೈ ಕೊಡಲಿ, ಪಾತ್ರೆಗಳು, ಅಡುಗೆ ಮಾಡುತ್ತಿದ್ದ ವಸ್ತುಗಳು, ಬಳೆ, ಹಳೆ-ನವ ಶಿಲಾಯುಗದ ಸಮಾಧಿ, ವಾಸಸ್ಥಳಗಳ ಫೋಟೊ ದೃಶ್ಯ, ಹಲವಾರು ಪ್ರಾಣಿಗಳ ಎಲುಬು, ಹಲ್ಲು ಸೇರಿದಂತೆ ಅಸ್ಥಿಪಂಜರಗಳು ಇವೆ.
ರಾಜನಕೋಳೂರು ಗ್ರಾಮದಲ್ಲಿ 2 ಸಾವಿರ ವರ್ಷಗಳ ಹಿಂದೆ ನಿರ್ಮಿಸಿರುವ ಶಿಲಾಸಮಾಧಿಗಳಿದ್ದು, ಇವುಗಳನ್ನು ಬುಡ್ಡರ ಮನೆಗಳೂ ಎಂದೂ ಕರೆಯಲಾಗುತ್ತದೆ. 4 ಎಕರೆಯಲ್ಲಿ 92 ಸ್ಮಾರಕಗಳಿದ್ದವು. ಈಗ 49 ಮಾತ್ರ ಉಳಿದಿವೆ. ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬುಡ್ಡರ ಮನೆಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ.
ಶಿಕ್ಷಕರು ಮಕ್ಕಳನ್ನು ಇಲ್ಲಿಗೆ ಕರೆತಂದು ಚರಿತ್ರೆಯ ಪಾಠ ಹೇಳುತ್ತಾರೆ. ಸಾಕಷ್ಟು ಪ್ರವಾಸಿಗರೂ ಭೇಟಿ ನೀಡುತ್ತಾರೆ.
ಹಗರಟಗಿ ಗ್ರಾಮ
ಪುರಾಣ ಪ್ರಸಿದ್ಧವಾದ ಹಗರಟಗಿ ಗ್ರಾಮದಲ್ಲಿ 101 ದೇವಸ್ಥಾನ ಹಾಗೂ 101 ಬಾವಿಗಳಿವೆ. ಅಲ್ಲದೇ ಪಾಂಡವರಾದ ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ ಮತ್ತು ಕುಂತಿ ದೇವಸ್ಥಾನಗಳನ್ನು ಕಾಣಬಹುದು. ವನವಾಸದ ಸಂದರ್ಭದಲ್ಲಿ ಪಾಂಡವರು ಈ ಮಾರ್ಗವಾಗಿ ತೆರಳಿದ್ದಕ್ಕೆ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ ಎಂಬ ಪ್ರತೀತಿ ಇದೆ. ಧರ್ಮರಾಯ, ಗಂಗಾಧರೇಶ್ವರ, ಖುಷಿಗುಂಡ ದೇವಸ್ಥಾನಗಳು ಸುಸ್ಥಿತಿಯಲ್ಲಿವೆ. ಉಳಿದ ದೇವಸ್ಥಾನಗಳು ಶಿಥಿಲಗೊಂಡಿದ್ದು ಕೆಲ ದೇವಸ್ಥಾನಗಳಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಧರ್ಮರಾಯ ದೇವಸ್ಥಾನದಲ್ಲಿ ಪ್ರತಿ ಯುಗಾದಿ ಹಬ್ಬದ ವೇಳೆ ಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯುತ್ತದೆ. ಗಂಗಾಧೇಶ್ವರ, ಖುಷಿಗುಂಡ ದೇವಸ್ಥಾನಗಳ ಎದುರು ಇರುವ ಬಾವಿಗಳ ನೀರನ್ನು ಈಗಲೂ ಜನರು ಕುಡಿಯಲು ಬಳಸುತ್ತಾರೆ. ಬಹುತೇಕ ಬಾವಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಸ್ವಚ್ಛಗೊಳಿಸಬೇಕಿದೆ.
***
ಹುಣಸಗಿಯಲ್ಲಿ ಸ್ವಾಭಾವಿಕ ಜಲಬುಗ್ಗೆಗಳಿರುವ ಕಾರಣ ಆದಿ ಮಾನವರು ಇಲ್ಲಿ ನೆಲೆಸಿದ್ದರು. ಜಗತ್ತಿನ ಬೇರೆಯಲ್ಲಿಯೂ ಹಳೆ ಶಿಲಾಯುಗದ ಆಯುಧಗಳನ್ನು ಮೃದುವಾದ ಸುಣ್ಣದ ಕಲ್ಲಿನಲ್ಲಿ ಮಾಡಿರುವುದು ಬೆಳಕಿಗೆ ಬಂದಿಲ್ಲ
-ಪಾಟೀಲ ಬಸನಗೌಡ ಎಸ್ ಹುಣಸಗಿ, ಸಂಶೋಧಕ
***
ಸಂಶೋಧಕ ಡಾ.ಕೆ.ಪದ್ದಯ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವಸ್ತುಗಳನ್ನು ಸಂಗ್ರಹಿಸಿದಾಗ ನಮ್ಮಲ್ಲಿ ಈ ವಸ್ತುಗಳನ್ನು ನೋಡವಂತಾಗಲು ಅವರನ್ನು ಕೇಳಿಕೊಂಡಾಗ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ
-ನಾಗಪ್ಪ ಅಡಕಿಹಾಳ, ನಿವೃತ್ತ ಅಧಿಕಾರಿ
***
ಗ್ರಾಮದಲ್ಲಿರುವ ಬುಡ್ಡರ ಮನೆಗಳನ್ನು ಉತ್ಖನನ ಮಾಡಿದ ನಂತರ ಇವು ಶಿಲಾ ಸಮಾಧಿಗಳು ಎಂದು ತಿಳಿದುಬಂದಿದೆ. ಪುರಾತತ್ವ ಇಲಾಖೆಯಿಂದ ಆವರಣ ಗೋಡೆ, ನಿರ್ಮಾಣ ಮಾಡಲಾಗಿದೆ
ಧನರೆಡ್ಡಿ ಸಂಗಾರೆಡ್ಡಿ, ರಾಜನಕೋಳೂರು ಗ್ರಾಮಸ್ಥ
***
ಪಾಂಡವರು ವನವಾಸದಲ್ಲಿರುವ ವೇಳೆ ಹಗರಟಗಿ ಗ್ರಾಮದಲ್ಲಿ ವಾಸವಾಗಿದ್ದರು ಎನ್ನಲಾಗುತ್ತಿದೆ. 101 ದೇವಸ್ಥಾನ, 101 ಬಾವಿಗಳಿರುವುದು ವಿಶೇಷವಾಗಿದೆ
-ಭಾಗಣ್ಣ ಅರೆನಾಡ, ಶಿಕ್ಷಕ
ಜಿಲ್ಲೆಯ ಹುಣಸಗಿ ತಾಲ್ಲೂಕು ಸಾಂಸ್ಕೃತಿಕ, ಧಾರ್ಮಿಕ ಮತ್ತು ಪ್ರಾಗೈತಿಹಾಸಿಕ ಸ್ಥಳಗಳನ್ನು ಹೊಂದಿರುವ ವಿಶಿಷ್ಟ ತಾಣವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.