ಯಾದಗಿರಿ: ಹಣ್ಣುಗಳ ರಾಜ ಎಂದೇ ಖ್ಯಾತಿ ಹೊಂದಿರುವ ಮಾವಿನ ಬೆಳೆಯು ಹೂವು ಬಿಡದ ಕಾರಣ ಜಿಲ್ಲೆಯ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ 155 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಕಳೆದ ಬಾರಿ 1,082 ಟನ್ ಮಾವು ಉತ್ಪನ್ನವಾಗಿತ್ತು.
ಸೆಪ್ಟೆಂಬರ್–ಅಕ್ಟೋಬರ್ ತಿಂಗಳಲ್ಲಿ ಮಾವು ಹೂವು ಕಟ್ಟಲು ಸೂಕ್ತ ಸಮಯ, ಆದರೆ, ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ತೇವಾಂಶದಿಂದ ಹೂವು ಕಟ್ಟಲು ಸಾಧ್ಯವಾಗಿಲ್ಲ. ಉಷ್ಣಾಂಶ ಜಾಸ್ತಿ ಇದ್ದರೆ ಹೂವು ಕಟ್ಟಿ ಕಾಯಿ ಹೆಚ್ಚಾಗಲು ಸಾಧ್ಯ ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.
ಉಷ್ಣಾಂಶ ಸಂದರ್ಭದಲ್ಲಿ ಮಾವಿನ ಗಿಡಗಳು ಹೂಗಳನ್ನು ಬಿಡಲು ಶುರು ಮಾಡುತ್ತವೆ. ಆದರೆ, ನಮ್ಮಲ್ಲಿ ತೇವಾಂಶ ಜಾಸ್ತಿಯಾಗಿತ್ತು. ಅಲ್ಲದೇ ಕೆಲ ಜಾತಿಯ ತಳಿಗಳು ಒಂದು ವರ್ಷ ಫಲ ನೀಡಿದರೆ ಮತ್ತೊಂದು ವರ್ಷ ಫಸಲು ಬರುವುದಿಲ್ಲ. ಇದರಿಂದಲೂ ಈ ಬಾರಿ ಹೂವು ಬಿಟ್ಟಿಲ್ಲ ಎನ್ನುವುದು ಕವಡಿಮಟ್ಟಿ ಕೃಷಿ ಕೇಂದ್ರದ ಮಾಹಿತಿಯಾಗಿದೆ.
ಜಿಲ್ಲೆಯಲ್ಲಿ ಬೆಳೆಯುವ ತಳಿಗಳು: ಕೇಸರ್, ಬೆನ್‌ಶಾನ್, ದಶೆರಿ, ಮಲ್ಲಿಕಾ, ಅಲ್ಫಾನ್ಸೋ, ಖಾದರ್ ಎನ್ನುವ ತಳಿಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಉಳಿದಂತೆ ರಸಪುರಿ, ಬಾದಾಮ್, ತೊತಾಪುರಿ ಹಣ್ಣುಗಳನ್ನು ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಸುರಪುರದಲ್ಲಿ ಹೆಚ್ಚು, ಹುಣಸಗಿಯಲ್ಲಿ ಕಡಿಮೆ: ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಸುರಪುರ ತಾಲ್ಲೂಕಿನಲ್ಲಿ ಮಾವು ಪ್ರದೇಶವಿದೆ. ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ಬೆಳೆಗಳಿಗೆ ಸೂಕ್ತ ವಾತಾವರಣ ಇರುವುದರಿಂದ ಹೆಚ್ಚು ಬೆಳೆಯಲಾಗಿದೆ. 45 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹುಣಸಗಿ ತಾಲ್ಲೂಕಿನಲ್ಲಿ ಕೇವಲ 8 ಹೆಕ್ಟೇರ್‌ನಲ್ಲಿ ಮಾವು ಬೆಳೆ ಇದೆ.
1,082 ಟನ್ ಉತ್ಪನ್ನ: ಜಿಲ್ಲೆಯಲ್ಲಿ 2021ರ ವರ್ಷದಲ್ಲಿ 1,082 ಟನ್ ಮಾವು ಉತ್ಪನ್ನವಾಗಿದೆ. ಇನ್ನೂ ಯಾದಗಿರಿ ತಾಲ್ಲೂಕಿನಲ್ಲಿ 172 ಟನ್, ಗುರುಮಠಕಲ್ ತಾಲ್ಲೂಕಿನಲ್ಲಿ 206, ಶಹಾಪುರ ತಾಲ್ಲೂಕಿನಲ್ಲಿ 149, ವಡಗೇರಾ ತಾಲ್ಲೂಕಿನಲ್ಲಿ 130, ಸುರಪುರ ತಾಲ್ಲೂಕಿನಲ್ಲಿ 345, ಹುಣಸಗಿ ತಾಲ್ಲೂಕಿನಲ್ಲಿ 57 ಟನ್ ಮಾವು ಉತ್ಪನ್ನವಾಗಿದೆ.
ಬೆಳೆಗಾರರಿಗೆ ವಿಜ್ಞಾನಿಗಳ ಸಲಹೆ
ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ವಿವಿಧ ಸಲಹೆ ನೀಡಿದ್ದಾರೆ.
ಮಾವಿನ ಬೆಳೆಯಲ್ಲಿ ಲಘು ಪೋಷಕಾಂಶಗಳ ನಿರ್ವಹಣೆಗಾಗಿ ಮಾವು ಸ್ಪೆಷಲ್ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಸಿಂಪಡಣೆ ಮಾಡಬೇಕು.
ಬೂದು ರೋಗದ ಹತೋಟಿಗಾಗಿ ಥಿಯಾಮಿಥಾಕ್ಸಂ 0.5 ಗ್ರಾಂ ಮತ್ತು ಹೆಕ್ಸಾಕೋನೋಜೋಲ್ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹೂವಾಡುವ ಸಮಯದಲ್ಲಿ ಹೂವಾಡಿದ ನಂತರ ಮತ್ತು ಮಾವು ಕಾಯಿ ಬಟಾಣಿ ಗಾತ್ರದ ಹಂತದಲ್ಲಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮಾವು ಹೂ ಬಿಟ್ಟಾಗ ಪರಾಗ ಸ್ಪರ್ಶ ಆಗುತ್ತಿರುವ ವೇಳೆ ಗಂಧಕವನ್ನು ಸಿಂಪಡಿಸಬಾರದು. ಕಚ್ಚಿದ ಕಾಯಿಗಳು ಉದರದಂತೆ ಸಸ್ಯ ಬೆಳೆವಣಿಗೆ ಚೋದಕ ಎನ್‌ಎಎ (ಪ್ಲನೊಫಿಕ್ಸ್) 50 ಪಿಪಿಎಂ ಪ್ರಮಾಣದಲ್ಲಿ ಸಿಂಪಡಿಸಬೇಕು. 0.5 ಎಂಎಲ್ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಯಾವುದೇ ಕೀಟ ನಾಶಕಗಳನ್ನು ಒಂದು ಅಥವಾ ಎರಡು ಬಾರಿಗಿಂತ ಹೆಚ್ಚಾಗಿ ಸಿಂಪಡಿಸಬಾರದು ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸತೀಶಕುಮಾರ ಕಾಳೆ ತಿಳಿಸುತ್ತಾರೆ.
***
ದಶೇರಿ ಮಾವು ತಳಿ ಒಂದು ವರ್ಷ ಫಸಲು ಬರುತ್ತದೆ. ಮತ್ತೊಂದು ವರ್ಷ ಬರುವುದಿಲ್ಲ. ಅಧಿಕ ಮಳೆಯಿಂದಲೂ ಈ ವರ್ಷ ಇಳುವರಿ ಕುಂಠಿತವಾಗಿರುವ ಸಾಧ್ಯತೆ ಇದೆ.
-ಸಂತೋಷ ಶೇಷುಲು, ತೋಟಗಾರಿಕೆ ಪ್ರಭಾರಿ ಉಪನಿರ್ದೇಶಕ
***
ನಮ್ಮ ಜಮೀನಿನಲ್ಲಿ 7 ಮಾವಿನ ಮರಗಳು ಇದ್ದು, ಒಂದು ಗಿಡ ಮಾತ್ರ ಹೂವು ಬಿಟ್ಟಿದೆ. ಆರು ಮರಗಳಲ್ಲಿ ಹೂವು ಇಲ್ಲ. ಕಳೆದ ವರ್ಷ ಉತ್ತಮ ಫಸಲು ಬಂದು ₹20 ಸಾವಿರ ಲಾಭವಾಗಿತ್ತು.
-ಸತ್ಯಪ್ಪ ಅಂಬಿಗೇರಾ, ಮಾವು ಬೆಳೆಗಾರ
***
ಜಿಲ್ಲೆಯ ಹಲವು ಕಡೆ ಈ ಬಾರಿ ಮಾವು ಹೂ ಬಿಟ್ಟಿಲ್ಲ. ಪೋಟ್ಯಾಸಿಯಂ, ನೈಟ್ರೇಟ್ ಸಿಂಪಡಿಸಿದರೆ ಮೊಗ್ಗು ಅರಳಲು, ಏಕರೂಪದ ಹೂ ಬಿಡುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
-ಡಾ. ಸತೀಶಕುಮಾರ ಕಾಳೆ, ಕೃಷಿ ವಿಜ್ಞಾನಿ
ಹಣ್ಣುಗಳ ರಾಜ ಎಂದೇ ಖ್ಯಾತಿ ಹೊಂದಿರುವ ಮಾವಿನ ಬೆಳೆಯು ಹೂವು ಬಿಡದ ಕಾರಣ ಜಿಲ್ಲೆಯ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.