ಯಾದಗಿರಿ: ವಾರಾಂತ್ಯ ಕರ್ಪ್ಯೂ ಕಾರಣ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಭಾನುವಾರ ಬೆಳಿಗ್ಗೆ ನಗರದಲ್ಲಿ ಸಂಚಾರ ಮಾಡಿ, ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನಗರದ ಜನನಿಬಿಡ ಸ್ಥಳಗಳಿಗೆ ತೆರಳಿದ ಅಧಿಕಾರಿಗಳು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಮಾಸ್ಕ್ ನೀಡಿದರು.
ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಜನದಟ್ಟಣೆ ತಡೆಯಲು ಬಹುತೇಕ ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಹೀಗಾಗಿ, ನಗರದಲ್ಲಿ ಬ್ಯಾರಿಕೇಡ್ ಹಾಕಿಲ್ಲ. ಸಿಬ್ಬಂದಿ ಕೂಡ ಕಡಿಮೆ ಇದ್ದಾರೆ. ಜನರು ಅನಗತ್ಯವಾಗಿ ಓಡಾಡುತ್ತಿದ್ದು, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುತ್ತಿರುವುದು ಕಂಡುಬಂತು.
ಖುದ್ದಾಗಿ ರಸ್ತೆಗಿಳಿದ ಜಿಲ್ಲಾಧಿಕಾರಿ, ಎಸ್‌ಪಿ ಅವರು ನಗರದ ಶಾಸ್ತ್ರಿ ವೃತ್ತ, ಸುಭಾಷ್ ವೃತ್ತ, ಹಳೆ ಬಸ್ ನಿಲ್ದಾಣ, ಪದವಿ ಕಾಲೇಜು, ಕಾಡ್ಲೂರ್ ಪೆಟ್ರೋಲ್ ಬಂಕ್, ಸಿಟಿ ಮಾರ್ಕೆಟ್, ಗಾಂಧಿಚೌಕ್, ಚಕ್ಕರ್‌ಕಟ್ಟ, ಗಂಜ್ ಏರಿಯಾ, ಮುದ್ನಾಳ ಪೆಟ್ರೋಲ್ ಬಂಕ್ ಬಳಿಕ ಮೀನು ಮಾರ್ಕೆಟ್ ಪ್ರದೇಶಗಳಿಗೆ ಭೇಟಿ ನೀಡಿದರು.
ಸಾರ್ವಜನಿಕರ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲಿಸಿ, ನಿಯಮ ಪಾಲಿಸದವರಿಗೆ ದಂಡ ವಿಧಿಸಿದರು.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಿ. ಅಗತ್ಯ ಮತ್ತು ತುರ್ತು ಚಟುವಟಿಕೆ ಹೊರತುಪಡಿಸಿ ವಿನಾಃಕಾರಣ ಮನೆಯಿಂದ ಹೊರ ಬರಬಾರದು. ಕೋವಿಡ್ 3ನೇ ಅಲೆ ತಡೆಗಟ್ಟಲು ವಾರಾಂತ್ಯದ ಕರ್ಫ್ಯೂಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಕೋರಿದರು.
ಈ ವೇಳೆ ಅಂಗಡಿಗಳ ಮುಂದೆ ಮುಖಕ್ಕೆ ಟವೆಲ್ ಮುಚ್ಚಿಕೊಳ್ಳಲು ವಾಪಾರಸ್ಥರು ಮುಂದಾದರು. ಆಗ, ಜಿಲ್ಲಾಧಿಕಾರಿ ಟವೆಲ್ ಸುತ್ತಿಕೊಳ್ಳಬೇಡಿ. ಮಾಸ್ಕ್ ಧರಿಸಿ ಎಂದು ಮಾಸ್ಕ್ ನೀಡಿದ್ದು ಕಂಡುಬಂತು.
ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ಬಿಗಿಗೊಳಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಂದ ಪಾರ್ಸೆಲ್ ತೆಗೆದುಕೊಂಡು ಹೋಗಬೇಕು. ಆಹಾರ ಪದಾರ್ಥಗಳನ್ನು ಮನೆಗೆ ತಲುಪಿಸಲು ಮಾತ್ರ ಅವಕಾಶ ನೀಡಿ. ನಿಯಮ ಉಲ್ಲಂಘಿಸಿದವರಿಗೆ ಕಡ್ಡಾಯವಾಗಿ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರ ಸಭೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯವರು ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟನಿಟ್ಟಿನ ತಪಾಸಣೆ ನಡೆಸಬೇಕು. ರೈಲ್ವೆ, ಬಸ್ ನಿಲ್ದಾಣ, ಸಾರ್ವಜನಿಕ ಸಾರಿಗೆ, ಖಾಸಗಿ ವಾಹನ, ರಸ್ತೆಯ ಮೂಲಕ ಬರುವ ಪ್ರಯಾಣಿಕರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆ ತೋರಿಸಿ, ಕೋವಿಡ್ ಮಾರ್ಗಸೂಚಿ ಅನುಸರಿಸುವವರಿಗೆ ಮಾತ್ರ ಅನುಮತಿಸಿ ಎಂದು ವರು ತಿಳಿಸಿದರು.
ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಗರ ಠಾಣೆ ಪಿಎಸ್ಐ ಚಂದ್ರಶೇಖರ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.
ನಗರದ ಜನನಿಬಿಡ ಸ್ಥಳಗಳಿಗೆ ತೆರಳಿದ ಅಧಿಕಾರಿಗಳು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಮಾಸ್ಕ್ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.