ವಿಜಯಪುರ: ಅ.30ರಂದು ನಡೆಯಲಿರುವ ಸಿಂದಗಿ ವಿಧಾನಸಭಾ ಉಪ ಚುನಾವಣೆ ಮತದಾನಕ್ಕೆ ದಿನಗಳು ಸಮೀಪಿಸುತ್ತಿರುವ ಹೊತ್ತಿನಲ್ಲೇ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಮುಗಿಲು ಮುಟ್ಟಿದೆ.
ರಾಜ್ಯ ಸಚಿವ ಸಂಪುಟದ ಅರ್ಧದಷ್ಟು ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖ ಮುಖಂಡರು ಸಿಂದಗಿ ಕ್ಷೇತ್ರದಲ್ಲೇ ಬೀಡು ಬಿಟ್ಟು ಬಿಜೆಪಿ ಅಭ್ಯರ್ಥಿ ಪ್ರಚಾರ ನಡೆಸತೊಡಗಿದ್ದಾರೆ. ಇನ್ನೊಂದೆಡೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರಮುಖ ನಾಯಕರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿವಾರು, ವಾರ್ಡ್‌ವಾರು ಮುಖಂಡರನ್ನು ಪ್ರಚಾರಕ್ಕೆ ನಿಯೋಜಿಸಿವೆ. ಯಾವಾವ ಜಾತಿ, ಸಮಾಜದ ಜನ ಯಾವ ಪ್ರದೇಶದಲ್ಲಿ ಹೆಚ್ಚಿದ್ದಾರೋ ಆ ಜಾತಿ, ಸಮಾಜಕ್ಕೆ ಸೇರಿದ ರಾಜ್ಯ ನಾಯಕರು, ಶಾಸಕರು, ಸಚಿವರನ್ನು ಅಲ್ಲಿಗೆ ಕರೆಯಿಸಿ ಪ್ರಚಾರ ನಡೆಸತೊಡಗಿದ್ದಾರೆ.
ದಸರಾ ಮುಗಿಯುತ್ತಿರುವಂತೆ ಸಿಂದಗಿಯತ್ತ ಧಾವಿಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ರಾಜ್ಯ ನಾಯಕರು ಹಳ್ಳಿ, ಹಳ್ಳಿಗಳನ್ನು ಸುತ್ತಿ, ಮನೆ, ಮನೆ ತೆರಳಿ ಮತಯಾಚಿಸುತ್ತಿದ್ದಾರೆ. ಜೊತೆಗೆ ಬೃಹತ್ ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ.
ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ದಿನದಂದು ಪಾದಯಾತ್ರೆ, ರ‍್ಯಾಲಿ, ಸಮಾವೇಶ ನಡೆಸಿ ತೆರಳಿದ್ದ ಮುಂಖಡರು ಒಂದು ವಾರದ ಬಳಿಕ ಮತ್ತೆ ಮುಖಮಾಡಿದ್ದು, ಮತದಾರರ ಎದುರು ಭರವಸೆಯ ಮಳೆ ಸುರಿಸುತ್ತಿದ್ದಾರೆ.
ಸಚಿವರಾದ ವಿ.ಸೋಮಣ್ಣ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಹಾಲಪ್ಪ ಆಚಾರ್ ಮತ್ತು ಶಾಸಕರು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿ, ಮತಯಾಚಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಶಾಸಕರು ಎರಡು ದಿನಗಳಿಂದ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಈಗಾಗಲೇ ಎರಡು ದಿನ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಚುನಾವಣಾ ಪ್ರಚಾರ, ಸಭೆ ನಡೆಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಭಾನುವಾರ ಮರಳಿ ಆಗಮಿಸಿದ್ದಾರೆ. ಅ.25ರ ವರೆಗೂ ಕ್ಷೇತ್ರದಲ್ಲೇ ಇದ್ದು, ಪ್ರಚಾರ ನಡೆಸಲಿದ್ದಾರೆ.
ಸಿದ್ದರಾಮಯ್ಯ, ಖರ್ಗೆ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅ.18 ಮತ್ತು 19 ರಂದು ಕ್ಷೇತ್ರದ ಹಲವೆಡೆ ಬಹಿರಂಗ ಸಭೆ ಹಾಗೂ ವಿವಿಧ ಸಮಾಜದ ಮುಖಂಡರ ಸಭೆಯನ್ನು ನಡೆಸಲಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಅ.19ರಂದು ಸಿಂದಗಿಗೆ ಬರಲಿದ್ದು, ಸಾರ್ವಜನಿಕ ಸಭೆ, ಪಕ್ಷದ ಚುನಾವಣಾ ವೀಕ್ಷಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಯಡಿಯೂರಪ್ಪ ಪ್ರಚಾರ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ.20 ಮತ್ತು 21ರಂದು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ. 23 ಮತ್ತು 24ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಡಾ. ಸುನೀಲಕುಮಾರ್ ಹೆಬ್ಬಿ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಜೀಲಾನಿ ಗುಡುಸಾಬ್ ಮುಲ್ಲಾ ಹಾಗೂ ಪಕ್ಷೇತರ ಅಭ್ಯರ್ಥಿಯಾದ ದೀಪಿಕಾ ಎಸ್. ಪಡಸಲಗಿ ಅವರೂ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ವಿಜಯಪುರ: ಅ.30ರಂದು ನಡೆಯಲಿರುವ ಸಿಂದಗಿ ವಿಧಾನಸಭಾ ಉಪ ಚುನಾವಣೆ ಮತದಾನಕ್ಕೆ ದಿನಗಳು ಸಮೀಪಿಸುತ್ತಿರುವ ಹೊತ್ತಿನಲ್ಲೇ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಮುಗಿಲು ಮುಟ್ಟಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.