ADVERTISEMENT

ಯಾವ ಪಕ್ಷಗಳೊಂದಿಗೂ ಚುನಾವಣಾ ಸಂಬಂಧ ಇಲ್ಲ: ಎಚ್.ಡಿ.ದೇವೇಗೌಡ 

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 9:28 IST
Last Updated 13 ಅಕ್ಟೋಬರ್ 2021, 9:28 IST
   

ವಿಜಯಪುರ: ಯಾವ ಪಕ್ಷಗಳೊಂದಿಗೂ ಚುನಾವಣಾ ಸಂಬಂಧವಿಲ್ಲ. ಪಕ್ಷ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಜೆಡಿಎಸ್  ಕಣಕ್ಕಿಳಿಸಿದ ಬಗ್ಗೆ ವ್ಯಕ್ತವಾಗಿರುವ ಟೀಕೆ, ಆಪಾದನೆಗಳನ್ನು ಈ ಮೂಲಕ ತಳ್ಳಿಹಾಕಿದರು.

ಪಕ್ಷದ ಕಾರ್ಯಕರ್ತರು ಹುರುಪಾಗಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದರು.

ADVERTISEMENT

2023ರ ವಿಧಾನಸಭಾ ಚುನಾವಣೆ ಸಂಬಂಧ ರಾಜ್ಯದಾದ್ಯಂತ ಪ್ರವಾಸ ಮಾಡಿ, ಹೋರಾಟ ನಡೆಸಿ, ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.

ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ  ದೃಢಸಂಕಲ್ಪ ಇದೆ ಎಂದರು.
1994ರಿಂದ ನನ್ನ ಸಹಪಾಠಿಯಾಗಿದ್ದ ಎ.ಸಿ.ಮನಗೂಳಿ ನಮ್ಮನ್ನು ಅಗಲಿದ್ದಾರೆ. ಈ ಕ್ಷೇತ್ರದ ಬೆಳವಣಿಗೆಗೆ ಹಲವಾರು ಯೋಜನೆ ಜಾರಿಗೆ ತಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಅಳಿಲು ಸೇವೆ ಸಲ್ಲಿಸಿದ್ದೇನೆ.  ಮನಗೂಳಿ ಅವರ ಜೀವನದ ಕೊನೇ ಘಟ್ಟದಲ್ಲಿ ಮಂತ್ರಿ ಮಾಡಿದೆ. ಹೀಗಾಗಿಯೇ ನನ್ನ ಮತ್ತು ಮನಗೂಳಿಯ ಮೂರ್ತಿ ಮಾಡಿದ್ದಾರೆ. ಈ ಕ್ಷೇತ್ರವನ್ನು ಜೆಡಿಎಸ್  ಉಳಿಸಿಕೊಳ್ಳಬೇಕಾಗಿದೆ ಎಂದರು.

ಸಿಂದಗಿ ಕ್ಷೇತ್ರದಲ್ಲಿ 25ರ ವರೆಗೂ ಹಳ್ಳಿ, ಹಳ್ಳಿ ಸುತ್ತಿ ಪ್ರಚಾರ ನಡೆಸುತ್ತೇನೆ.ಪಕ್ಷ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಮತದಾರರಿಗೆ ಅದರಲ್ಲೂ ಮುಖ್ಯವಾಗಿ ಯುವ ಜನರಿಗೆ ಮನವರಿಕೆ ಮಾಡಿಕೊಡುತ್ತೇನೆ. ಈ ಚುನಾವಣೆಯಲ್ಲಿ ದೃಡವಾದಂತಹ ಹೋರಾಟ ನಡೆಸುತ್ತೇವೆ ಎಂದರು.  

ಕುಮಾರಸ್ವಾಮಿ ಕೂಡ ಪ್ರಚಾರ ನಡೆಸಲಿದ್ದಾರೆ. ಮತದಾರರು ಏನು ತೀರ್ಪು ನೀಡುತ್ತಾರೋ ನೀಡಲಿ ಎಂದರು.

ಉಪ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಯಾವುದೇ ಪಕ್ಷದ ಅಸ್ತಿತ್ವ ಅಳೆಯಲಾಗದು ಎಂದರು.
ಪಕ್ಷ ಬಿಟ್ಟು ಹೋದವರ ಮೇಲೆ ಏನೂ ಆಪಾದನೆ ಮಾಡುವುದಿಲ್ಲ. ಜನ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಅನ್ನು ಉರುಳಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನಿಸುತ್ತಿವೆ. ಸಮ್ಮಿಶ್ರ ಸರ್ಕಾರ ಉರುಳಲು ಕಾರಣ ಯಾರು ಎಂದು ಎಷ್ಟು ಬಾರಿ ಹೇಳೋದೊ. ಎಲ್ಲರಿಗೂ ತಿಳಿದಿದೆ ಎಂದರು.

ಮೋದಿ ಸಮರ್ಥ ನಾಯಕರಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದ ಅವರು, ಕಾಶ್ಮೀರದಲ್ಲಿ ಏನು ನಡೆಯುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದರು.
ಆರೋಗ್ಯದ ದೃಷ್ಟಿಯಿಂದ ಹಾನಗಲ್ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಹೋಗುತ್ತಿಲ್ಲ. ಅಲ್ಲಿ ಕುಮಾರಸ್ವಾಮಿ ಮತ್ತಿತರರು ಪ್ರಚಾರ ನಡೆಸಲಿದ್ದಾರೆ ಎಂದರು.

ಸಿಂದಗಿ ಉಪ ಚುನಾವಣೆ ಅಭ್ಯರ್ಥಿ ನಾಜಿಯಾ ಅಂಗಡಿ, ಶಾಸಕರಾದ ದೇವಾನಂದ ಚವ್ಹಾಣ, ಬಂಡೆಪ್ಪ ಕಾಶಂಪುರ, ಜೆಡಿಎಸ್ ಜಿಲ್ಕಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜಾಫರ್ ಉಲ್ಲಾ ಖಾನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಾರಾಂಶ

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಜೆಡಿಎಸ್  ಕಣಕ್ಕಿಳಿಸಿದ ಬಗ್ಗೆ ವ್ಯಕ್ತವಾಗಿರುವ ಟೀಕೆ, ಆಪಾದನೆಗಳನ್ನು ಈ ಮೂಲಕ ತಳ್ಳಿಹಾಕಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.