ADVERTISEMENT

ವಿಜಯಪುರ: ಇಬ್ರಾಹಿಂಪುರದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಗೆ ಹಸಿರು ನಿಶಾನೆ

ಪ್ರಯಾಣಿಕರ ದಶಕದ ಬೇಡಿಕೆಗೆ ಸ್ಪಂದಿಸಿದ ನೈರುತ್ಯ ರೈಲ್ವೆ

ಬಸವರಾಜ್‌ ಸಂಪಳ್ಳಿ
Published 17 ಜನವರಿ 2022, 19:30 IST
Last Updated 17 ಜನವರಿ 2022, 19:30 IST
ವಿಜಯಪುರ ನಗರದ ಇಬ್ರಾಹಿಂಪುರ ನಿಲ್ದಾಣದಲ್ಲಿ ನಿಂತಿರುವ ಇಂಟರ್‌ಸಿಟಿ ರೈಲು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಇಬ್ರಾಹಿಂಪುರ ನಿಲ್ದಾಣದಲ್ಲಿ ನಿಂತಿರುವ ಇಂಟರ್‌ಸಿಟಿ ರೈಲು–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಗುಮ್ಮಟನಗರಿಯ ಪ್ರಯಾಣಿಕರ ದಶಕದ ಹೋರಾಟಕ್ಕೆ ಸ್ಪಂದಿಸಿರುವ ನೈರುತ್ಯ ರೈಲ್ವೆಯು ನಗರದ ಇಬ್ರಾಹಿಂಪುರ ನಿಲ್ದಾಣದಲ್ಲೂ ವಿಜಯಪುರ–ಹುಬ್ಬಳ್ಳಿ ಇಂಟರ್‌ಸಿಟಿ ರೈಲನ್ನು ನಿಲ್ಲಿಸಲು ಹಸಿರು ನಿಶಾನೆ ತೋರಿಸಿದೆ.

ಕೋವಿಡ್‌ನಿಂದ ಸ್ಥಗಿತವಾಗಿದ್ದ ವಿಜಯಪುರ–ಹುಬ್ಬಳ್ಳಿ ಇಂಟರ್‌ಸಿಟಿ ರೈಲು ಸಂಚಾರ ಜನವರಿ 11ರಿಂದ ಪುನರಾರಂಭವಾಗಿದ್ದು, ಅಂದಿನಿಂದಲೇ ಇಬ್ರಾಹಿಂಪುರ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತಿದ್ದು, ಈ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ.

ಪ್ರತಿದಿನ ಬೆಳಿಗ್ಗೆ5.45ಕ್ಕೆ ವಿಜಯಪುರ  ರೈಲು ನಿಲ್ದಾಣದಿಂದ ಹೊರಡುವ ಇಂಟರ್‌ಸಿಟಿ ರೈಲು 5.53ಕ್ಕೆ ಇಬ್ರಾಹಿಂಪುರ ನಿಲ್ದಾಣಕ್ಕೆ ಆಗಮಿಸಲಿದೆ. ಒಂದು ನಿಮಿಷ ನಿಂತು ಬಳಿಕ ಪ್ರಯಾಣ ಮುಂದುವರಿಸಲಿದೆ. ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ ಮಾರ್ಗವಾಗಿ ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣ ತಲುಪಲಿದೆ.

ADVERTISEMENT

ಹುಬ್ಬಳ್ಳಿಯಿಂದ ಪ್ರತಿದಿನ ಬೆಳಿಗ್ಗೆ 4.45ಕ್ಕೆ ಹೊರಡುವ ಈ ರೈಲು ಬೆಳಿಗ್ಗೆ 9.20ಕ್ಕೆ ಇಬ್ರಾಹಿಂಪುರ ನಿಲ್ದಾಣಕ್ಕೆ ಆಗಮಿಸಲಿದೆ. ಬಳಿಕ 9.21ಕ್ಕೆ ಹೊರಟು ವಿಜಯಪುರ ನಿಲ್ದಾಣವನ್ನು 10.10ಕ್ಕೆ ತಲುಪಲಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಾ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ದಶಕದ ಬೇಡಿಕೆ:

ಇಬ್ರಾಹಿಂಪುರದಲ್ಲಿ ರೈಲು ನಿಲುಗಡೆ ಮಾಡಬೇಕು ಎಂಬುದು ಒಂದು ದಶಕದ ಬೇಡಿಕೆಯಾಗಿತ್ತು. ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಅನೇಕ  ಜನಪ್ರತಿನಿಧಿಗಳು, ಹೋರಾಟಗಾರರು ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಎಲ್ಲರ ಶ್ರಮದ ಫಲವಾಗಿ ಇದೀಗ ರೈಲು ನಿಲುಗಡೆಯಾಗತೊಡಗಿದೆ.

‘ಇಬ್ರಾಹಿಂಪುರ ಸುತ್ತಮುತ್ತ ನಗರ ಸಾಕಷ್ಟು ಅಭಿವೃದ್ಧಿಯಾಗಿದೆ. ದಿನದಿಂದ ದಿನಕ್ಕೆ ಈ ಭಾಗ ಹೆಚ್ಚು ವಿಸ್ತಾರವಾಗುತ್ತಿದೆ. ಈ ಭಾಗದ ಜನರು ಬಾಗಲಕೋಟೆ, ಗದಗ, ಹುಬ್ಬಳ್ಳಿಗೆ ಹೋಗಲು ವಿಜಯಪುರ ಮುಖ್ಯ ರೈಲು ನಿಲ್ದಾಣಕ್ಕೆ(ಗೋಳಗುಮ್ಮಟ ಬಳಿ) ಹೋಗಬೇಕೆಂದರೆ ಅರ್ಧ ತಾಸು ಮೊದಲೇ ಮನೆ ಬಿಡಬೇಕಿತ್ತು. ಮುಂಜಾನೆ ಅಷ್ಟು ದೂರ ಹೋಗಲು ಸರಿಯಾದ ವಾಹನ ವ್ಯವಸ್ಥೆ ಇಲ್ಲ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿತ್ತು’ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂಟರ್‌ ಸಿಟಿ ರೈಲನ್ನು ಇಬ್ರಾಹಿಂಪುರದಲ್ಲಿ ನಿಲ್ಲಿಸುವಂತೆ ಜಲನಗರದ ಹಿರಿಯರಾದ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಲಾಗಿತ್ತು. ಜೊತೆಗೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರೂ ಸಹ ನೈರುತ್ಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದು ಇಬ್ರಾಹಿಂಪುರದಲ್ಲಿ ರೈಲು ನಿಲುಗಡೆ ಬಗ್ಗೆ ಮನವಿ ಮಾಡಿದ್ದರು. ಈ ಎಲ್ಲರ ಪ್ರಯತ್ನದಿಂದ ಇದೀಗ ರೈಲು ಇಬ್ರಾಹಿಂಪುರದಲ್ಲಿ ನಿಲ್ಲುವಂತಾಗಿರುವುದು ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದೆ‘ ಎಂದರು.

ಇತರೆ ರೈಲುಗಳು ನಿಲ್ಲಲಿ:

ಇಂಟರ್‌ಸಿಟಿ ಜೊತೆಗೆ ಈ ಮಾರ್ಗವಾಗಿ ಸಂಚರಿಸುವ ಇತರೆ ರೈಲುಗಳು ಸಹ ಇಬ್ರಾಹಿಂಪುರದಲ್ಲಿ ನಿಲ್ಲುವಂತಾದರೆ ಈ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದರು.

ಸಾರಾಂಶ

ಗುಮ್ಮಟನಗರಿಯ ಪ್ರಯಾಣಿಕರ ದಶಕದ ಹೋರಾಟಕ್ಕೆ ಸ್ಪಂದಿಸಿರುವ ನೈರುತ್ಯ ರೈಲ್ವೆಯು ನಗರದ ಇಬ್ರಾಹಿಂಪುರ ನಿಲ್ದಾಣದಲ್ಲೂ ವಿಜಯಪುರ–ಹುಬ್ಬಳ್ಳಿ ಇಂಟರ್‌ಸಿಟಿ ರೈಲನ್ನು ನಿಲ್ಲಿಸಲು ಹಸಿರು ನಿಶಾನೆ ತೋರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.