ADVERTISEMENT

ವಿಜಯಪುರ: ಸಿದ್ರಾಮಪ್ಪ ಕಂಬಾರಗೆ ಜಾನಪದ ಅಕಾಡೆಮಿ ಗೌರವ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 15:14 IST
Last Updated 21 ಜನವರಿ 2022, 15:14 IST
ಸಿದ್ರಾಮಪ್ಪ ಕಂಬಾರ
ಸಿದ್ರಾಮಪ್ಪ ಕಂಬಾರ   

ವಿಜಯಪುರ: ತಾಳಿಕೋಟೆ ತಾಲ್ಲೂಕಿನ ಪೀರಾಪುರ ಗ್ರಾಮದ ಕಲಾವಿದ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ ಅವರಿಗೆ 2021ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ನನ್ನ ಜವಾಬ್ದಾರಿ ಹೆಚ್ಚಿಸಿದೆ. ಸರ್ಕಾರ ನನ್ನನ್ನು ಗುರುತಿಸಿ, ಗೌರವಿಸುತ್ತಿರುವುದಕ್ಕೆ ಧನ್ಯವಾದಗಳು‘ ಎಂದು ಹೇಳಿದರು.

ಗ್ರಾಮೀಣ ಭಾಗದ ಕಲಾವಿದರಾದ ನಾಗಲಿಂಗಪ್ಪ ಕಂಬಾರ ತಮ್ಮ ಬಹುಮುಖಿ ವ್ಯಕ್ತಿತ್ವದಿಂದ ಗಮನ ಸೆಳೆದವರು. ಅಭಿಜಾತ ಕಲಾವಿದರಾದ ಅವರಿಗೆ ಕೈಯ್ಯಲ್ಲಿ ಉಳಿ ಸಿಕ್ಕರೆ ಚೆಂದದ ವಿನ್ಯಾಸದ ಬಾಗಿಲು, ಹೊಸ್ತಿಲು ಚೌಕಟ್ಟಿನ ಮೇಲೆ ಬಿಡಿಸುವ ಚಿತ್ತಾರಗಳು ಚಿತ್ತಾಪಹಾರಿ. ಲಕ್ಷ್ಮೀ, ಗಣಪತಿ, ಪರಮೇಶ್ವರ, ಕೃಷ್ಣ ಹೀಗೆ ಅವರು ಬಯಸಿದ ಚಿತ್ರವನ್ನು ಅದು ಜೀವಂತವಾಗಿದೆ ಎನ್ನುವಂತೆ ರಚಿಸುತ್ತಾರೆ.

ADVERTISEMENT

ಕಟ್ಟಿಗೆ, ಕಬ್ಬಿಣ, ಕಲ್ಲುಗಳಲ್ಲಿ ಗ್ರಾಹಕ ಬಯಸಿದಂತೆ ಆಕೃತಿಗಳನ್ನು ನಿರ್ಮಿಸಿಕೊಡಬಲ್ಲ ನಿಷ್ಣಾತರು. ದೇವರ ಮೂರ್ತಿಗಳು, ಸಿಂಹಾಸನ, ಪಲ್ಲಕ್ಕಿ, ಎತ್ತಿನ ಬಂಡಿ, ತೊಟ್ಟಿಲು, ಗುಮಣಿ, ತೊಲೆಬಾಗಿಲು, ಮನೆ ಪಡಸಾಲೆಗಳನ್ನು ನಿರ್ಮಿಸಿ ಹೆಸರಾಗಿದ್ದಾರೆ.

ಪಾರಿಜಾತ ಕಲಾವಿದರಾಗಿರುವ ಇವರು ಕೃಷ್ಣ ಪಾತ್ರದಲ್ಲಿ ತಮ್ಮ 60 ವಯಸ್ಸಿನಲ್ಲೂ ರಂಗೇರಿಸಬಲ್ಲವರು. ಹಾರ್ಮೋನಿಯಂ ನುಡಿಸುತ್ತ ಭಜನೆಗೆ ಇಳಿದರೆ ಎದುರಾಳಿ ಹಾಡುಗಾರ, ಕೇಳುಗರು ಮೂಕರಾಗುವಂತೆ ಮೋಡಿ ಮಾಡಬಲ್ಲರು.

ಸಾರಾಂಶ

ತಾಳಿಕೋಟೆ ತಾಲ್ಲೂಕಿನ ಪೀರಾಪುರ ಗ್ರಾಮದ ಕಲಾವಿದ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ ಅವರಿಗೆ 2021ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.