ADVERTISEMENT

ಜಾತ್ಯತೀತ ಹೆಸರಲ್ಲಿ ಕೋಮುವಾದಿಗಳಿಗೆ ಸಹಕಾರ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜೆಡಿಎಸ್‌ ವಿರುದ್ಧ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:18 IST
Last Updated 18 ಅಕ್ಟೋಬರ್ 2021, 14:18 IST
ಸಿಂದಗಿ ತಾಲ್ಲೂಕಿನ ಮೊರಟಗಿಯಲ್ಲಿ ಸೋಮವಾರ ಆಯೋಜಿಸಿದ್ದ ಉಪಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು -ಪ್ರಜಾವಾಣಿ ಚಿತ್ರ
ಸಿಂದಗಿ ತಾಲ್ಲೂಕಿನ ಮೊರಟಗಿಯಲ್ಲಿ ಸೋಮವಾರ ಆಯೋಜಿಸಿದ್ದ ಉಪಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು -ಪ್ರಜಾವಾಣಿ ಚಿತ್ರ   

ವಿಜಯಪುರ: ಜಾತ್ಯತೀತ ಎಂದು ಹೇಳಿಕೊಳ್ಳುವವರು ಕೋಮುವಾದಿ ಪಕ್ಷ ಬಿಜೆಪಿಗೆ ಉಪ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ವಿರುದ್ಧ ಹರಿಹಾಯ್ದರು.

ಸಿಂದಗಿ ತಾಲ್ಲೂಕಿನ ಮೊರಟಗಿಯಲ್ಲಿ ಸೋಮವಾರ ಆಯೋಜಿಸಿದ್ದ ಉಪಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಸಿಂದಗಿ ಉಪ ಚುನಾವಣೆ ಮಹತ್ವದ್ದಾಗಿದೆ. ಕಾಂಗ್ರೆಸ್‌ ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.

ADVERTISEMENT

ಬಿಎಸ್‌ವೈ ಕಿತ್ತು ಹಾಕಿದರು:

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಯಾವತ್ತೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. 2008, 2018ರಲ್ಲಿ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರು ಯಡಿಯೂರಪ್ಪನವರಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಖರೀದಿಸಿದರು. ಎರಡು ವರ್ಷದ ಬಳಿಕ ಬಿಜೆಪಿ ಹೈಕಮಾಂಡ್ ಅವರನ್ನು ಹೆದರಿಸಿ, ಬೆದರಿಸಿ ಕಿತ್ತು ಹಾಕಿದರು ಎಂದು ಆರೋಪಿಸಿದರು.

ಯಡಿಯೂರಪ್ಪನಂತಹ ಕೆಟ್ಟ ಸರ್ಕಾರ ಕರ್ನಾಟಕ ರಾಜ್ಯ ಹಿಂದೆಂದೂ ಕಂಡಿರಲಿಲ್ಲ. ಅಪ್ಪ-ಮಗ ಲೂಟಿ ಹೊಡೆದರು ಎಂದು ಟೀಕಿಸಿದರು.

ನಾನು ಸಿಎಂ ಆಗಿದ್ದಾಗ ಬಡವರಿಗೆ 10 ಕೆ.ಜಿ.ಅಕ್ಕಿ ನೀಡಿದೆ. ಬಡವರು ಕೆಲಸ ಮಾಡದೆ ಸೋಮಾರಿಗಳಾಗುತ್ತಾರೆ ಎಂದು ಬಿಜೆಪಿಯವರು ಟೀಕಿಸಿದರು. ಹೊಟ್ಟೆ ತುಂಬಿದವರಿಗೆ ಬಡವರ ಹಸಿವು ಎಲ್ಲಿ ಅರ್ಥವಾಗುತ್ತದೆ. ಕುಮಾರಸ್ವಾಮಿ ಅವರೂ ಇದೇ ಆರೋಪ ಮಾಡಿದರು. ಕುಮಾರಸ್ವಾಮಿ ಯಾವತ್ತಾದರೂ ಹಸಿದಿದ್ದಾರಾ ಎಂದು ಪ್ರಶ್ನಿಸಿದರು.

ಕೊಲೆಗಡುಗರು:

ಕೋವಿಡ್ ವೇಳೆ ರಾಜ್ಯದಲ್ಲಿ 4 ಲಕ್ಷ ಜನ, ದೇಶದಲ್ಲಿ 50 ಲಕ್ಷ ಜನ ಸಾವಿಗೀಡಾದರು. ಇವರು ರೋಗ ಬಂದು ಸತ್ತಿದಲ್ಲ. ಆಕ್ಸಿಜನ್, ವೆಂಟಿಲೇಟರ್, ಔಷಧ, ಬೆಡ್, ಅಂಬುಲೆನ್ಸ್ ಸಿಗದೇ ಸಾವಿಗೀಡಾದರು. ಸತ್ತವರ ಲೆಕ್ಕವನ್ನು ಸುಳ್ಳು ಹೇಳತೊಡಗಿದರು. ಇವರು ಮನುಷ್ಯರಲ್ಲ, ಕೊಲೆಗಡುಗರು. ಇಂಥ ಕೊಲೆ ಗಡುಗರಿಗೆ ವೋಟ್ ಹಾಕಬೇಡಿ. ಇಂಥವರಿಗೆ ವೋಟ್ ಹಾಕಿದರೆ ದೇಶ, ರಾಜ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ ಎಂದರು.

ಪೆಟ್ರೋಲ್, ಡೀಸೆಲ್‌, ಅಡುಗೆ ಎಣ್ಣೆ, ಸಿಮೆಂಟ್, ಕಬ್ಬಿಣ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೇನಾ ಅಚ್ಛೇ ದಿನ್ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.

ಸಾಲದ ಹೊರೆ:

ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಹಾಳು ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಸಾಲ ₹53.11 ಲಕ್ಷ ಕೋಟಿ ಇತ್ತು. ಮೋದಿ ಪ್ರಧಾನಿಯಾದ ಬಳಿಕ ₹88 ಲಕ್ಷ ಕೋಟಿ ಹೊಸದಾಗಿ ಸಾಲ ಮಾಡಿದ್ದಾರೆ. ಈಗ ದೇಶದ ಸಾಲದ ಮೊತ್ತ ₹135 ಲಕ್ಷ ಕೋಟಿಯಾಗಿದೆ. ಇವರಿಂದ ದೇಶ ಉಳಿಯಲು ಸಾಧ್ಯವೇ. ದೇಶ ಉಳಿಯಬೇಕು ಎಂದಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.

ಬಿಜೆಪಿಯವರ ಬಣ್ಣದ ಮಾತಿಗೆ ಮರುಳಾಗಬೇಡಿ. ಭ್ರಮಾಲೋಕ ನಿರ್ಮಾಣ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು. 
ರಾಜ್ಯದಲ್ಲಿ ಬಿಜೆಪಿ ಉಳಿದಿರುವುದೇ ಮೋದಿ ಹೆಸರಲ್ಲಿ. ಆದರೆ, ರಾಜ್ಯದ ಪಾಲಿನ ಜಿಎಸ್ ಟಿ ಪಾಲನ್ನು ಕೊಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು

ಸಿಂದಗಿ ಉಪಚುನಾವಣಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಧ್ರುವನಾರಾಯಣ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತ ರಾಯಗೌಡ ಪಾಟೀಲ, ಡಾ.ಎಚ್.ಸಿ.ಮಹಾದೇವಪ್ಪ, ಅಮರೇಗೌಡ ಬಯ್ಯಾಪುರ, ಪ್ರಕಾಶ ರಾಠೋಡ, ಆನಂದ ನ್ಯಾಮಗೌಡ, ಬಸವರಾಜ ರಾಯರೆಡ್ಡಿ, ಆರ್.ಬಿ.ತಿಮ್ಮಾಪುರ, ಶರಣಪ್ಪ ಸುಣಗಾರ, ಅಲ್ಲಮಪ್ರಭು ಪಾಟೀಲ, ರಾಜು ಅಲಗೂರ ಇದ್ದರು.

*****

ಸಿಂದಗಿಯಲ್ಲಿ ನೀರಾವರಿಗಾಗಿ ಹೋರಾಟ ಮಾಡಿದ ವ್ಯಕ್ತಿ ದಿ.ಎಂ.ಸಿ.ಮನಗೂಳಿ. ಆದರೆ, ಇದರ ಲಾಭ ಪಡೆಯಲು ಬೇರೆಯವರು ಹವಣಿಸುತ್ತಿದ್ದಾರೆ
–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಸಾರಾಂಶ

ವಿಜಯಪುರ: ಜಾತ್ಯತೀತ ಎಂದು ಹೇಳಿಕೊಳ್ಳುವವರು ಕೋಮುವಾದಿ ಪಕ್ಷ ಬಿಜೆಪಿಗೆ ಉಪ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ವಿರುದ್ಧ ಹರಿಹಾಯ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.