ADVERTISEMENT

ವಿಜಯನಗರ: ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣ ಕಾಯ್ದೆ ವಾಪಸಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 10:59 IST
Last Updated 17 ಜನವರಿ 2022, 10:59 IST
ಸಿಪಿಎಂ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು
ಸಿಪಿಎಂ ಮುಖಂಡರು ಸೋಮವಾರ ಹೊಸಪೇಟೆಯಲ್ಲಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಮತಾಂಧ, ಜಾತಿವಾದಿಗಳಿಗೆ ನೆರವಾಗುವ ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣ ಕಾಯ್ದೆ ವಾಪಸ್‌ ಪಡೆಯಬೇಕೆಂದು ಸಿಪಿಎಂ ಆಗ್ರಹಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರಿಗೆ ಬರೆದ ಮನವಿ ಪತ್ರವನ್ನು ಸೋಮವಾರ ನಗರದಲ್ಲಿ ತಹಶೀಲ್ದಾರ್‌ಗೆ ಸಲ್ಲಿಸಿ ಒತ್ತಾಯಿಸಿದರು.

ರಾಜ್ಯ ಸರ್ಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣ ವಿಧೇಯಕವು ಆಳುವ ವರ್ಗಗಳು ಬಯಸಿದಾಗ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ನೆರವಾಗುತ್ತದೆ. ಇಡೀ ಕಾಯ್ದೆಯನ್ನು ದುರುದ್ದೇಶದಿಂದ ಹೆಣೆಯಲಾಗಿದೆ ಎಂದು ಆರೋಪಿಸಿದರು.

ADVERTISEMENT

ಬಲವಂತದ ಮತಾಂತರವನ್ನು ತಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲಾಗುವುದೆಂದು ಪ್ರಚಾರ ಮಾಡಲಾಗಿತ್ತು. ಬಲವಂತವಾಗಿ ಮತಾಂತರ ಹಾಗೂ ಮರು ಮತಾಂತರ ಮಾಡುವ ದೌರ್ಜನ್ಯದ ಕ್ರಮಗಳನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ. ಆದರೆ, ಈ ವಿಧೇಯಕವು ವ್ಯಕ್ತಿಯು ತನಗಿಷ್ಟವಾದ ಮತವನ್ನು ಆಚರಿಸುವುದಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದರು.

ಈಗಾಗಲೇ ಮತಾಂತರಗೊಂಡಿರುವ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳ ಮೇಲೆ ಮತಾಂಧರು ದಾಳಿ ನಡೆಸಲು ಈ ಕಾಯ್ದೆ ಕುಮ್ಮಕ್ಕು ನೀಡುತ್ತದೆ. ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅಂತರ್ಜಾತಿ ವಿವಾಹ ಕೂಡ ನಿರ್ಬಂಧಿಸುತ್ತದೆ. ತಕ್ಷಣ ಕಾಯ್ದೆ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್‌ ರೆಡ್ಡಿ, ಜಿಲ್ಲಾ ಸಮಿತಿ ಸದಸ್ಯರಾದ ಕೆ. ನಾಗರತ್ನಮ್ಮ, ಮರಡಿ ಜಂಬಯ್ಯ ನಾಯಕ, ತಾಲ್ಲೂಕು ಕಾರ್ಯದರ್ಶಿ ವಿ. ಸ್ವಾಮಿ ಇದ್ದರು.

ಸಾರಾಂಶ

ಮತಾಂಧ, ಜಾತಿವಾದಿಗಳಿಗೆ ನೆರವಾಗುವ ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣ ಕಾಯ್ದೆ ವಾಪಸ್‌ ಪಡೆಯಬೇಕೆಂದು ಸಿಪಿಎಂ ಆಗ್ರಹಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.