ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಯುಧ ಪೂಜೆ, ವಿಜಯದಶಮಿಯನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಕೋವಿಡ್ ಕರಿಛಾಯೆಯಿಂದ ಹೊರಬಂದ ಜಿಲ್ಲೆಯ ಜನತೆ ಎರಡು ವರ್ಷಗಳ ತರುವಾಯ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಗುರುವಾರ ಜನ ಮನೆಯಲ್ಲಿರುವ ವಸ್ತುಗಳು, ವಾಹನಗಳು, ಆಯುಧಗಳನ್ನು ಅಲಂಕರಿಸಿ, ಪೂಜೆ ಸಲ್ಲಿಸಿದರು. ಮಳಿಗೆಗಳಿಗೂ ಅಲಂಕರಿಸಿ ಪೂಜಿಸಲಾಯಿತು. ನಗರದ ಏಳುಕೇರಿಗಳಲ್ಲಿ ಹಬ್ಬದ ಸಂಭ್ರಮ ಮೇರೆ ಮೀರಿತ್ತು. ನಗರದ ಎಲ್ಲ ಏಳು ಕೇರಿಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲರ ಮನೆ ಮುಂದೆ ರಂಗೋಲಿ ಕಂಗೊಳಿಸಿತು.
ನಗರದ ಮ್ಯಾಸಕೇರಿಯಲ್ಲಿ ಹುಲಿಗೆಮ್ಮ–ಕೊಂಗಮ್ಮ ದೇವಿ, ಉಕ್ಕಡಕೇರಿ–ಜಲದುರ್ಗಮ್ಮ, ತಳವಾರಕೇರಿ–ರಾಂಪುರ ದುರ್ಗಮ್ಮ, ಬಾಣದಕೇರಿ–ನಿಜಲಿಂಗಮ್ಮ, ಚಿತ್ರಕೇರಿ–ತಾಯಮ್ಮ, ಹರಿಜನಕೇರಿ–ಹುಲಿಗೆಮ್ಮ, ಮಾಯಮ್ಮ ಹಾಗೂ ರಾಂಪುರ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಎಲ್ಲ ದೇವತೆಗಳು ಊರು ಸುತ್ತಿದವು. ಶ್ರದ್ಧಾ, ಭಕ್ತಿಯ ನಡುವೆ ಭಕ್ತರು ದೇವರ ಪಲ್ಲಕ್ಕಿಯನ್ನು ಹೊತ್ತು ತಾಲ್ಲೂಕಿನ ಧರ್ಮದಗುಡ್ಡಕ್ಕೆ ಹೆಜ್ಜೆ ಹಾಕಿದರು.
ಧರ್ಮದಗುಡ್ಡದಲ್ಲಿ ಚೆನ್ನಬಸವಣ್ಣನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಗುಡ್ಡದ ಕೆಳಗೆ ಇರುವ ಬನ್ನಿ ಗಿಡದ ಸುತ್ತಲೂ ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆ ಮಾಡಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಸಾವಿರಾರು ಜನ ಬಂದಿದ್ದರು. ಮೆರವಣಿಗೆ ನಂತರ ಬನ್ನಿ ಮುಡಿದು, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪೂಜೆ ಮುಗಿದ ಬಳಿಕ ಪುನಃ ಎಲ್ಲ ದೇವರುಗಳು ಧರ್ಮದಗುಡ್ಡದಿಂದ ನಾಗೇನಹಳ್ಳಿ, ಭಟ್ರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ, ಹಂಪಿ ರಸ್ತೆ, ಮೂರಂಗಡಿ ವೃತ್ತ, ರಾಮ ಟಾಕೀಸ್ ಮೂಲಕ ಆಯಾ ಕೇರಿ ತಲುಪಿದವು. ಆಯಾ ಕೇರಿಯ ಯುವಕರು ಬಣ್ಣ ಬಣ್ಣದ ಟೀ ಶರ್ಟ್ ಧರಿಸಿದ್ದರು. ಭಕ್ತಿಭಾವದಿಂದ ಪಲ್ಲಕ್ಕಿ ಹೊತ್ತು ಹೆಜ್ಜೆ ಹಾಕಿದರು. ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ದೇವರಿಗೆ ಜಯಘೋಷ ಹಾಕಿದರು. ಮೆರವಣಿಗೆ ಹಾದು ಹೋದ ಮಾರ್ಗದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಧರ್ಮದಗುಡ್ಡದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್, ಕೇರಿಯ ಯಜಮಾನರು ಸಾಕ್ಷಿಯಾದರು.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಯುಧ ಪೂಜೆ, ವಿಜಯದಶಮಿಯನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.