ಶಿರಸಿ: ಉತ್ತರ ಕನ್ನಡದ ಜನಪ್ರತಿನಿಧಿಗಳು ಸಮ್ಮತಿಸಿದರೆ ಈ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಅಭ್ಯಂತರವಿಲ್ಲ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.
ಇಲ್ಲಿನ ಕದಂಬ ಸೌಹಾರ್ದ ಮಾರ್ಕೆಟಿಂಗ್ ಸಂಸ್ಥೆಯ ಆವರಣದಲ್ಲಿ ಗುರುವಾರ ನಂದಿನಿ ಉತ್ಪನ್ನ ಮಳಿಗೆ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಗಡಿಭಾಗದ ರೈತರಿಗೆ ಸ್ಪರ್ಧಾತ್ಮಕ ದರ ನೀಡಿ ಹಾಲು ಖರೀದಿಸಲಾಗುವದು. ಹಾಲು ಉತ್ಪಾದಕ ಸದಸ್ಯರ ಸಂಖ್ಯೆ ವೃದ್ಧಿಸಲು ಪ್ರೋತ್ಸಾಹದಾಯಕ ಯೋಜನೆ ರೂಪಿಸಲಾಗುವದು’ ಎಂದರು.
‘ಉತ್ತರ ಕನ್ನಡದಲ್ಲಿ ಪ್ರಸ್ತುತ 249 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ 45 ರಿಂದ 47 ಸಾವಿರ ಲೀ. ಹಾಲು ಶೇಖರಣೆಯಾಗುತ್ತಿದೆ. ಏಪ್ರೀಲ್ ತಿಂಗಳ ಒಳಗಾಗಿ 30 ರಿಂದ 35 ಹೆಚ್ಚುವರಿ ಸಂಘಗಳನ್ನು ಸ್ಥಾಪನೆ ಮಾಡಿ ದಿನಕ್ಕೆ 60 ಸಾವಿರ ಲೀ. ನಷ್ಟು ಹಾಲು ಸಂಗ್ರಹಣೆ ಗುರಿ ಹೊಂದಲಾಗಿದೆ’ ಎಂದರು.
‘ನಂದಿನಿ ಉತ್ಪನ್ನಗಳ ಮಾರಾಟ ವಹಿವಾಟು ನಡೆಸಲು ಆಸಕ್ತಿ ಹೊಂದಿದವರಿಗೆ ಸಿದ್ಧ ಮಳಿಗೆಗಳನ್ನು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ. ಸ್ವಯಂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಶು ಆಹಾರಗಳ ಬೆಲೆ ಇಳಿಕೆ ಮಾಡಲಾಗಿದೆ. ರೈತರಿಂದ ಪ್ರತಿ ಲೀ.ಗೆ ₹ 25 ದರ ನೀಡಿ ಹಾಲು ಖರೀದಿಸಲಾಗುತ್ತಿದೆ. ಜೇನು ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಸಕ್ತರಿಗೆ ತರಬೇತಿ ಒದಗಿಸುವ ಕೆಲಸವನ್ನೂ ಒಕ್ಕೂಟ ಮಾಡುತ್ತಿದೆ’ ಎಂದರು.
ಒಕ್ಕೂಟದ ನಿರ್ದೇಶಕರಾದ ಶಂಕರ ಭಟ್, ಪಿ.ವಿ.ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಲೋಹಿತೇಶ್ವರ, ಕದಂಬ ಸೌಹಾರ್ದ ಮಾರ್ಕೆಟಿಂಗ್ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ, ಸಲಹೆಗಾರ ವಿಶ್ವೇಶ್ವರ ಭಟ್ ಇದ್ದರು.
ಉತ್ತರ ಕನ್ನಡದ ಜನಪ್ರತಿನಿಧಿಗಳು ಸಮ್ಮತಿಸಿದರೆ ಈ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಅಭ್ಯಂತರವಿಲ್ಲ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.