ADVERTISEMENT

ಹಿಜಾಬ್ ಪರ ಕಾನೂನು ಹೋರಾಟ ಎಂದ ಎನ್‌ಎಸ್‌ಯುಐ

ಹಿಜಾಜ್‌ಗೆ ಅವಕಾಶ ಕೊಟ್ಟರೆ ಕೇಸರಿ ಶಾಲಿನ ಉತ್ತರ: ಹಿಂಜಾವೇ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 13:23 IST
Last Updated 21 ಜನವರಿ 2022, 13:23 IST

ಉಡುಪಿ: ‘ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಸರ್ಕಾರ ಅನುಮತಿ ನೀಡಿದರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಶಾಲಾ ಕಾಲೇಜುಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ನೀಡಿದರು.

ನಗರದ ಸರ್ಕಾರಿ ಪದವಿಪೂರ್ವ ಮಹಿಳಾ ಕಾಲೇಜು ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು ‘ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮೂಲಭೂತವಾದಿಗಳ ಹಾಗೂ ಮತೀಯ ಸಂಘಟನೆಗಳ ಒತ್ತಡಕ್ಕೆ ಮಣಿದು ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

‘ಒಂದೂವರೆ ವರ್ಷದಿಂದ ಹಿಜಾಬ್ ಧರಿಸದ ವಿದ್ಯಾರ್ಥಿನಿಯರು ಏಕಾಏಕಿ ಹಿಜಾಬ್ ಧರಿಸಲೇಬೇಕು ಎಂದು ಪಟ್ಟುಹಿಡಿದಿರುವುದನ್ನು ನೋಡಿದರೆ ಹಿಜಾಬ್ ವಿವಾದವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ದೇಶದ ಘನತೆಗೆ ಧಕ್ಕೆ ತರುವ ಪ್ರಯತ್ನದಂತೆ ಕಾಣುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಶಾಲಾ ಕಾಲೇಜುಗಳಲ್ಲಿ ಜಾತಿ, ಮತ, ಧರ್ಮ ಒಳ ನುಸುಳಬಾರದು. ಆದರೆ, ಕೆಲವು ಮತೀಯ ಸಂಘಟನೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕಾಲೇಜು ಶೈಕ್ಷಣಿಕ ವಾತಾವರಣವನ್ನು ಕೆಡಿಸುವ ಯತ್ನ ನಡೆಸುತ್ತಿವೆ. ಕಾಲೇಜಿನಲ್ಲಿ 100 ಮುಸ್ಲಿ ವಿದ್ಯಾರ್ಥಿನಿಯರಿದ್ದರೂ ನಾಲ್ಕೈದು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಲು ಅನುಮತಿಗೆ ಒತ್ತಾಯಿಸುತ್ತಿರುವುದು ಏಕೆ ಎಂದು ಪ್ರಕಾಶ್ ಕುಕ್ಕೆಹಳ್ಳಿ ಪ್ರಶ್ನಿಸಿದರು.

ಎನ್‌ಎಸ್‌ಐಯು ರಾಜ್ಯ ಉಪಾಧ್ಯಕ್ಷ ಫಾರೂಖ್‌ ಮಾತನಾಡಿ, ‘ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡದೆ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳ ನಡುವೆ ತಾರತಮ್ಯ ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಲು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಎನ್‌ಎಸ್‌ಯುಐ ನಿರ್ಧರಿಸಿದೆ’ ಎಂದರು.

‘ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮುನ್ನ ಕಾಲೇಜಿನ ಪ್ರಾಂಶುಪಾಲರೊಂದಿಗೆ ಚರ್ಚಿಸಲು ಬಂದರೆ ಕಾಲೇಜಿಗೆ ರಜೆ ನೀಡುವ ಮೂಲಕ ಪ್ರಾಂಶುಪಾಲರು ವಿದ್ಯಾರ್ಥಿ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ. ಮತೀಯ ಸಂಘಟನೆಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿವೆ’ ಎಂದು ದೂರಿದರು.

ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಮಾತನಾಡಿ, ‘ಹಿಜಾಬ್ ಧರಿಸಲು ಅನುಮತಿ ಕೋರಿ ಮೂರು ವಾರಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಹೊರಗೆ ಪ್ರತಿಭಟಿಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಒಂದು ಸಮುದಾಯದ ವಿರುದ್ಧವಾಗಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಾಂಶ

‘ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಸರ್ಕಾರ ಅನುಮತಿ ನೀಡಿದರೆ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಶಾಲಾ ಕಾಲೇಜುಗಳಿಗೆ ಕಳುಹಿಸಬೇಕಾಗುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.