ತುರುವೇಕೆರೆ: ತೆಂಗು ನಾರು ಅಭಿವೃದ್ಧಿ ಹಾಗೂ ತೆಂಗು ಬೆಳೆಗಾರರಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಂಡಳಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸೆ. 28ರಂದು ಗುಜರಾತ್ ರಾಜ್ಯದ ವಡೋದರದಲ್ಲಿ ನಡೆದ ಕೇಂದ್ರ ನಾರು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಇಡೀ ದೇಶದಲ್ಲಿಯೇ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರ ತೆಂಗು ನಾರು ಮಂಡಳಿಯಿಂದ ಹಲವಾರು ಯೋಜನೆಗಳ ಉಪಯೋಗವನ್ನು ತಮಿಳುನಾಡು ಹಾಗೂ ಕೇರಳದವರು ಹೆಚ್ಚಾಗಿ ಪಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸಣ್ಣ ತೆಂಗು ನಾರು ಉದ್ದಿಮೆಗಳ ಸಂಖ್ಯೆ ಬಹಳ ಕಡಿಮೆ ಇದೆ. ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಈ ಬಗ್ಗೆ ಸ್ವವಿವರವಾಗಿ ತಿಳಿಸಲಾಗಿದೆ. ಕರ್ನಾಟಕದಲ್ಲಿ ತೆಂಗಿನ ಉತ್ಪನ್ನಗಳು ಹಾಗೂ ನಾರು ಉದ್ದಿಮೆಗಳಿಗೆ ಹೆಚ್ಚಿನ ಸಹಾಯ ಅನುಕೂಲ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಾರು ಉದ್ದಿಮೆಗಳು ಕಡಿಮೆ ಪ್ರಮಾಣದಲ್ಲಿವೆ. ಉದ್ದಿಮೆ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿ ಮಾಡುವ ಸಲುವಾಗಿ ರೈತರಿಗೆ ಆದಾಯ ವೃದ್ಧಿ ಹಾಗೂ ಯುವ ಉದ್ದಿಮೆದಾರರಿಗೆ ಅನುಕೂಲವಾಗಲು ಡಿಸೆಂಬರ್‌ನಲ್ಲಿ ರಾಜ್ಯಮಟ್ಟದ ನಾರು ಉದ್ದಿಮೆ ಮೇಳ ಹಮ್ಮಿಕೊಳ್ಳಲಾಗುವುದು. ರೈತರು ಹಾಗೂ ಯುವ ಉದ್ದಿಮೆದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಕಲ್ಪತರು ಕೋಕನಟ್ ಕಂಪನಿ ಅಧ್ಯಕ್ಷ ಸೋಮಶೇಖರ್, ಹಳ್ಳಿಕಾರ್ ರೈತ ಉತ್ಪಾದಕರ ಸಂಘದ ಎಂ.ಆರ್. ಲೋಕೇಶ್, ಜೀವಜಲ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಯೋಗಿನರಸಿಂಹಯ್ಯ, ನಿರ್ದೇಶಕ ಲೋಕೇಶ್, ಟಿ. ಸುಬ್ರಮಣ್ಯಂ, ಕೋಕೋನಟ್ ಪ್ರಡ್ಯೂಜರ್ ಅಧ್ಯಕ್ಷ ಕೀರ್ತಿ, ಸ್ವರ್ಣಭೂಮಿ ರೈತ ಉತ್ಪಾದಕರ ಸಂಘದ ಸಿಇಒ ಅಮಿತ್ ಕುಮಾರ್, ಮುಖಂಡರಾದ ತಿಮ್ಮೇಗೌಡ, ಆಶೋಕ್, ಕರಿಯಪ್ಪ ಹಾಜರಿದ್ದರು.
ತೆಂಗು ನಾರು ಅಭಿವೃದ್ಧಿ ಹಾಗೂ ತೆಂಗು ಬೆಳೆಗಾರರಿಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.