ತುಮಕೂರು: ನೀರಾವರಿ ಯೋಜನೆಗಳು ನಿಧಾನವಾಗಿರುವುದಕ್ಕೆ ಅಧಿಕಾರಿಗಳೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಭೂಸ್ವಾಧೀನ ಅಧಿಕಾರಿಗಳು, ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಮುಂದುವರೆದ ಸಭೆಯಲ್ಲಿ ಬುಧವಾರ ಮಾತನಾಡಿ, ‘ಬಿಕ್ಕೆಗುಡ್ಡ ನೀರಾವರಿ ಯೋಜನೆಗೆ ಚಾಲನೆ ನೀಡಿ 20 ವರ್ಷಗಳೇ ಕಳೆದಿದ್ದರೂ ಈವರೆಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. 5–6 ಕಿ.ಮೀ ಭೂಸ್ವಾಧೀನಕ್ಕೆ ಎಷ್ಟು ವರ್ಷಗಳು ಬೇಕು. ಇದಕ್ಕೆಲ್ಲ ಒಂದು ರೀತಿ ನೀತಿ ಎಂಬುದು ಇದೆಯೆ’ ಎಂದು ಪ್ರಶ್ನಿಸಿದರು.
ಕೆ.ಬಿ.ಕ್ರಾಸ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಮಯದಲ್ಲಿ ಪೆಟ್ರೋಲ್ ಬಂಕ್ ಇರುವುದನ್ನೇ ತೋರಿಸಿಲ್ಲ. ಅದು ಕಣ್ಣಿಗೆ ಕಾಣುವುದಿಲ್ಲವೆ. ಪರಿಜ್ಞಾನ ಇಲ್ಲದೆ ಕೆಲಸ ಮಾಡಿದರೆ ಹೀಗಾಗುತ್ತದೆ ಎಂದು ಚುಚ್ಚಿದರು. ಮಧ್ಯೆ ಪ್ರವೇಶಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ‘ಕೆಲಸ ಮಾಡಲಾಗದಿದ್ದರೆ ಕೆಲಸ ಬಿಟ್ಟು ಹೋಗಿ. ಜಿಲ್ಲಾ ಮಂತ್ರಿ ಹೇಳಿದರೂ ಕೆಲಸ ಮಾಡುತ್ತಿಲ್ಲ. ಈ ರೀತಿ ಆಡಳಿತ ಮಾಡಿದರೆ ಕೆಲಸ ಮಾಡಿಸುವುದು ಕಷ್ಟ. ಭೂಸ್ವಾಧೀನಾಧಿಕಾರಿ, ಎಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಿ’ ಎಂದು ಸಲಹೆ ಮಾಡಿದರು.
ಹೇಮಾವತಿ ಯೋಜನೆ ವ್ಯಾಪ್ತಿಯ ಎಂಜಿನಿಯರ್, ಭೂಸ್ವಾಧೀನಾಧಿಕಾರಿಗೂ ನೀರಿಳಿಸಿದರು. 15 ವರ್ಷಗಳ ಹಿಂದೆ ಹೇಮಾವತಿ ಯೋಜನೆ ಅನುಷ್ಠಾನಕ್ಕೆ ಬಂದಿದ್ದರೂ ಈವರೆಗೂ ಕೆಲವು ಕಡೆಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಸಕಾಲಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡರು. ವೇದಿಕೆಯಲ್ಲಿದ್ದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೂ ಸಲಹೆ ಮಾಡಿದರು. ‘ನೀವು ಇಲಾಖೆ ಅಧಿಕಾರಿಯಾಗಿ ಇದನ್ನೆಲ್ಲ ನೋಡಬೇಕಿತ್ತು. ಜಿಲ್ಲೆಗೆ ಒಳ್ಳೆಯದಾಗಲಿ ಎಂದು ನಿಮ್ಮನ್ನು ಜಿಲ್ಲಾ ಉಸ್ತುವಾರಿ ಅಧಿಕಾರಿಯನ್ನಾಗಿ ಹಾಕಿಸಿಕೊಂಡು ಬಂದೆವು. ಆದರೆ ನಿಮ್ಮಿಂದ ಈ ರೀತಿಯ ಕೆಲಸವನ್ನು ನಿರೀಕ್ಷಿಸಿರಲಿಲ್ಲ’ ಎಂದು ಮೆದುಮಾತಿನಲ್ಲೇ ಪೆಟ್ಟು ನೀಡಿದರು.
ಜಿಲ್ಲೆಯ ವಿವಿಧ ಯೋಜನೆಗಳ ಭೂಸ್ವಾಧೀನ ಅಧಿಕಾರಿಗಳು ಕಳೆದ ಎರಡು–ಮೂರು ವರ್ಷಗಳಿಂದ ಏನೆಲ್ಲ ಕೆಲಸ ಮಾಡಿದ್ದರೆ ಎಂಬ ಬಗ್ಗೆ ವರದಿ ಸಿದ್ಧಪಡಿಸಿಕೊಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರಿಗೆ ಸೂಚಿಸಿದರು.
ಎತ್ತಿನಹೊಳೆ ಯೋಜನೆ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಯೋಜನೆಯ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಕಂದಾಯ ಇಲಾಖೆಗೂ ಚಾಟಿ: ಸಾಮಾಜಿಕ ಭದ್ರತೆ, ಪಿಂಚಣಿ, ಅಂತ್ಯ ಸಂಸ್ಕಾರದ ನೆರವಿನ ಹಣವನ್ನು ಸಕಾಲಕ್ಕೆ ನೀಡದಿರುವುದಕ್ಕೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಸಚಿವರು ಗುಡುಗಿದರು. ತುಮಕೂರು ತಹಶೀಲ್ದಾರ್ ಮೋಹನ್ ಕುಮಾರ್ ಅವರು 3 ಅದಾಲತ್ ನಡೆಸಿ, ದಾಖಲೆಯಲ್ಲಿ 5 ಅದಾಲತ್ ನಡೆಸಲಾಗಿದೆ ಎಂದು ನಮೂದಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. ಈ ರೀತಿ ಸುಳ್ಳು ಹೇಳಿದರೆ ಮನೆಗೆ ಕಳುಹಿಸುವುದಾಗಿ ಎಚ್ಚರಿಸಿದರು.
‘ರಾಯರ ಕುದುರೆ ಕತ್ತೆಯಾಯಿತು’ ಎಂದು ಕುಟುಕಿದರು. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಬಂದ ಅರ್ಜಿಗಳನ್ನು ಇಟ್ಟುಕೊಳ್ಳಬಾರದು. ಅದಾಲತ್ ನಡೆಸಿ ವಿಲೇವಾರಿ ಮಾಡಬೇಕು. ಅಂತ್ಯ ಸಂಸ್ಕಾರದ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು. ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ನೀರಾವರಿ ಯೋಜನೆಗಳು ನಿಧಾನವಾಗಿರುವುದಕ್ಕೆ ಅಧಿಕಾರಿಗಳೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಭೂಸ್ವಾಧೀನ ಅಧಿಕಾರಿಗಳು, ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.