ತುಮಕೂರು: ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿ ಕಾರ್ಯ ವಿಳಂಬವಾಗಿರುವುದಕ್ಕೆ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು. ‘ಬ್ಲೆಡಿ ಫೆಲೋಸ್’ ಏನಂದುಕೊಂಡಿದ್ದೀರಿ ಎಂದು ಅಧಿಕಾರಿಗಳಿಗೆ ಬೆವರಿಳಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿಗಳು ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ‘ಕಟ್ಟಡ ಕಟ್ಟುತ್ತಿರೊ ಇಲ್ಲವೊ ಗೊತ್ತಿಲ್ಲ. ಹಣವನ್ನು ತಿಂದು ಹಾಕುವ ಕೆಲಸವನ್ನಾದರೂ ಮಾಡಿ’ ಎಂದು ಚಾಟಿ ಬೀಸಿದರು.
‘ಹಣ ನೀಡಿದ್ದರೂ ಕಳೆದ ಮೂರು ವರ್ಷಗಳಿಂದಲೂ ಶಾಲಾ ಕಟ್ಟಡ ಕಟ್ಟುತ್ತಲೇ ಇದ್ದೀರಿ. ಕೋವಿಡ್ ಸಮಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೆಲಸ ಪೂರ್ಣಗೊಳಿಸಿಲ್ಲ. ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಜಡ್ಡುಗಟ್ಟಿದ ಅಧಿಕಾರಿಗಳಿಗೆ ಏನು ಹೇಳಿದರೂ ಪ್ರಯೋಜನವಿಲ್ಲ. ಇನ್ನು ಮುಂದೆ ಜಿ.ಪಂ ಎಂಜಿನಿಯರಿಂಗ್ ವಿಭಾಗದವರಿಗೆ ಕೆಲಸ ಕೊಡಬೇಡಿ. ಸಂಬಂಧಿಸಿದವರನ್ನು ಅಮಾನತುಮಾಡಿ. ಆಗಲೇ ಇವರಿಗೆ ಬುದ್ದಿ ಬರುವುದು’ ಎಂದು ಜಿ.ಪಂ ಸಿಇಒಗೆ ಸೂಚಿಸಿದರು.
150 ಭವನ:ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ಸಮುದಾಯ ಭವನ, ಹಾಸ್ಟೆಲ್, ಇತರೆ ಕಟ್ಟಡಗಳ ನಿರ್ಮಾಣದಲ್ಲೂ ‘ಕ್ರೈಸ್’ ಸಂಸ್ಥೆ ತಡ ಮಾಡಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. 2017–18ನೇ ಸಾಲಿನಿಂದ ಈವರೆಗೆ ಜಿಲ್ಲೆಯಲ್ಲಿ ಸುಮಾರು 150 ವಿವಿಧ ಭವನಗಳನ್ನು ನಿರ್ಮಿಸಲು ಬಾಕಿ ಇದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಭವನಗಳನ್ನು ಕಟ್ಟದೆ ಏನು ಮಾಡುತ್ತಿದ್ದೀರಿ. ಇವರಿಗೆ ಎಷ್ಟು ಹೇಳಿದರೂ ಕೆಲಸ ಮಾಡುತ್ತಿಲ್ಲ. ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
ಸಿಗದ ಸಬ್ಸಿಡಿ: ಫಲಾನುಭವಿಗಳನ್ನು ಆಯ್ಕೆಮಾಡಿ ಬ್ಯಾಂಕ್‌ಗಳಿಗೆ ಕಳುಹಿಸಿದರೂ ಸಾಲ ಹಾಗೂ ಸಬ್ಸಿಡಿ ಹಣ ಸಿಗುತ್ತಿಲ್ಲ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಬುಧವಾರವೇ ಪಟ್ಟಿ ನೀಡಬೇಕು. ಸ್ಪಂದಿಸದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ರೈತರಿಗೆ ತಲುಪದ ಪ್ರಧಾನಿ ಹಣ: ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ ₹6 ಸಾವಿರ ಹಾಗೂ ಅದಕ್ಕೆ ರಾಜ್ಯ ಸರ್ಕಾರದಿಂದ ₹4 ಸಾವಿರ ಸೇರಿಸಿ ಒಟ್ಟು ₹10 ಸಾವಿರ ಕೊಡುತ್ತಿದ್ದರೂ ಇನ್ನೂ ಸಾಕಷ್ಟು ರೈತರಿಗೆ ತಲುಪಿಲ್ಲ. ರೈತರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದರೂ ಅರ್ಹ ಕೃಷಿಕರಿಗೆ ಯೋಜನೆ ತಲುಪುವಂತೆ ಮಾಡಿಲ್ಲ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.
‘ಈವರೆಗೆ 3.55 ಲಕ್ಷ ರೈತರಿಗೆ ಹಣ ಕೊಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ನನಗೆ ತಿಳಿದ ಮಟ್ಟಿಗೆ 5 ಲಕ್ಷಕ್ಕೂ ಹೆಚ್ಚು ರೈತರು ಇದ್ದಾರೆ. ಕಡಿಮೆ ಸಂಖ್ಯೆಯ ರೈತರಿಗೆ ಸೌಲಭ್ಯ ಸಿಗುತ್ತಿದೆ. ಎಲ್ಲ ಅರ್ಹರಿಗೂ ಯೋಜನೆಯ ಫಲ ಸಿಗದಿದ್ದರೆ ಹೇಗೆ ಎಂದು ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಈ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಬೇಕು. ಇಲ್ಲವಾದರೆ ಕಾರಣ ನೀಡಬೇಕು ಎಂದು ಎಚ್ಚರಿಸಿದರು.
ಶೇಂಗಾ: ಮಳೆ ಇಲ್ಲದೆ ಶೇಂಗಾ ಬೆಳೆ ಹಾಳಾಗಿದ್ದು, ಎಷ್ಟು ನಷ್ಟವಾಗಿದೆ, ಪರಿಹಾರ ನೀಡಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.
ರೋಗ ತಡೆಯಿರಿ: ತೆಂಗಿಗೆ ರೋಗ ಬಾಧೆ ಹೆಚ್ಚಾಗಿದ್ದು, ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗೆ
ಆದೇಶಿಸಿದರು.
ಹೆಚ್ಚಿದ ಶಿಶು ಮರಣ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಶಿಶು ಮರಣ ಹೆಚ್ಚುತ್ತಿರುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ನಾಗೇಂದ್ರಪ್ಪ ವಿರುದ್ಧ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮೂರು ತಿಂಗಳಲ್ಲಿ 154 ಮಕ್ಕಳು ಸಾವನ್ನಪ್ಪಿವೆ. ಜಿಲ್ಲಾ ಆಸ್ಪತ್ರೆಯೊಂದರಲ್ಲೇ 79, ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ 17, ತಿಪಟೂರಿನಲ್ಲಿ 11 ಮಕ್ಕಳು ಅಸುನೀಗಿವೆ. ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ‘ಸರ್ಕಾರಿ ಆಸ್ಪತ್ರೆಗೆ ತೀರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇದ್ದವರು ಹೆರಿಗೆಗೆ ಬರುತ್ತಾರೆ. ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ’ ಎಂದು ನಾಗೇಂದ್ರಪ್ಪ ಸಮಜಾಯಿಸಿ ನೀಡಿದರು. ಇದನ್ನು ಸಚಿವರು ಒಪ್ಪಲಿಲ್ಲ. ವೈದ್ಯರು ಸರಿಯಾಗಿ ಗಮನವಿಟ್ಟು ಕೆಲಸ ಮಾಡಿದರೆ, ಆಸಕ್ತಿ ವಹಿಸಿದರೆ ಶಿಶು ಮರಣ ಕಡಿಮೆ ಮಾಡಬಹುದು. ಮುಂದಿನ ದಿನಗಳಲ್ಲಿ ಸಾವು ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಯಾವ ಆಸ್ಪತ್ರೆಯಲ್ಲೂ ವೈದ್ಯರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆದರೂ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರ ಸೌಲಭ್ಯ ಕೊಟ್ಟರೂ ಅದನ್ನು ತಲುಪಿಸಬೇಕು ಎಂಬ ಮನೋಭಾವ ಒಬ್ಬ ಅಧಿಕಾರಿಗೂ ಇಲ್ಲವಾಗಿದೆ ಎಂದು ಬೇಸರಿಸಿದರು.
ತುಮಕೂರು ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿ ಕಾರ್ಯ ವಿಳಂಬವಾಗಿರುವುದಕ್ಕೆ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು. ‘ಬ್ಲೆಡಿ ಫೆಲೋಸ್’ ಏನಂದುಕೊಂಡಿದ್ದೀರಿ ಎಂದು ಅಧಿಕಾರಿಗಳಿಗೆ ಬೆವರಿಳಿಸಿದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.