ADVERTISEMENT

ಎಚ್‌ಡಿಕೆ ಹೇಳಿಕೆ: ಜೆಡಿಎಸ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 6:54 IST
Last Updated 18 ಅಕ್ಟೋಬರ್ 2021, 6:54 IST

ಮಧುಗಿರಿ: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ವಿರೋಧ ಪಕ್ಷದ ಅಧ್ಯಕ್ಷ ಸ್ಥಾನ ಕುರಿತು ಪುಟಗೋಸಿ ಎಂದು ಪದ ಬಳಕೆ ಮಾಡಿರುವುದಕ್ಕೆ ಕ್ಷಮೆ ಕೇಳುವ ಅಗತ್ಯ ಇಲ್ಲ’ ಎಂದು ತಾಲ್ಲೂಕು ಜೆಡಿಎಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ರವಿ ಸಮರ್ಥಿಸಿಕೊಂಡರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರು ಆಡುಭಾಷೆಯಲ್ಲಿ ಪುಟಗೋಸಿ ಎಂಬ ಪದ ಬಳಸುತ್ತಾರೆ. ಅದಕ್ಕೆ ವಿಶೇಷವಾದ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವ ಮೂಲಕ ನಿಜವಾದ ಅಹಿಂದ ನಾಯಕರಾಗಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅಹಿಂದ ಮತ ಪಡೆಯಲು ಅಹಿಂದ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಅಹಿಂದ ಸಮುದಾಯಗಳಿಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ADVERTISEMENT

ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ ಅವರು ಕುಮಾರಸ್ವಾಮಿ ಅವರಿಗೆ ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿರುವಷ್ಟು ದೊಡ್ಡಮಟ್ಟದ ನಾಯಕರಲ್ಲ ಎಂದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಲ್ಲಾಬಕಾಷ್ ಮಾತನಾಡಿ, ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದವರನ್ನು ಬೆಳೆಸಿಲ್ಲ. ಆದರೆ ಬಳಸಿಕೊಂಡು ರಾಜಕಾರಣ ಮಾಡುತ್ತಿದೆ. ನಿಜವಾಗಿಯೂ ಅಲ್ಪಸಂಖ್ಯಾತರನ್ನು ಬೆಳೆಸಿದ್ದು, ಜೆಡಿಎಸ್ ಪಕ್ಷ ಎಂದರು.

ಜೆಡಿಎಸ್ ಮುಖಂಡ ಎಚ್.ಎಂ. ಹನುಮಂತರಾಯಪ್ಪ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಅವರೊಬ್ಬರನ್ನೇ ಅಹಿಂದ ನಾಯಕ ಎನ್ನುವುದು ತಪ್ಪು. ರಾಜ್ಯದಲ್ಲಿ ದೇವೇಗೌಡ ಅವರು ನಿಜವಾದ ಅಹಿಂದ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಬಾಬಣ್ಣ , ಮುಖಂಡರಾದ ಮಿಲ್ ಚಂದ್ರಣ್ಣ, ಗುಂಡಗಲ್ ಶಿವಣ್ಣ, ರಾಮಚಂದ್ರಪ್ಪ, ಮರಿತಿಮ್ಮನಹಳ್ಳಿ ಶಿವಕುಮಾರ್, ರವಿ ಯಾದವ್, ತಿಮ್ಮಯ್ಯ, ಶಫಿ ಅಹಮದ್, ಜಬೀವುಲ್ಲಾ ಇದ್ದರು.

ಸಾರಾಂಶ

‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ವಿರೋಧ ಪಕ್ಷದ ಅಧ್ಯಕ್ಷ ಸ್ಥಾನ ಕುರಿತು ಪುಟಗೋಸಿ ಎಂದು ಪದ ಬಳಕೆ ಮಾಡಿರುವುದಕ್ಕೆ ಕ್ಷಮೆ ಕೇಳುವ ಅಗತ್ಯ ಇಲ್ಲ’ ಎಂದು ತಾಲ್ಲೂಕು ಜೆಡಿಎಸ್ ಪರಿಶಿಷ್ಟ ಪಂಗಡದ ಅಧ್ಯಕ್ಷ ರವಿ ಸಮರ್ಥಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.