ತಿಪಟೂರು: ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಅಧಿಕಾರಾವಧಿ ತಿಂಗಳ ಲೆಕ್ಕದಲ್ಲಿ ಬದಲಾವಣೆಯಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕುಂಠಿತವಾಗುವ ಮುನ್ಸೂಚನೆ ಎದುರಾಗಿದೆ.
ಗ್ರಾಮ ಪಂಚಾಯಿತಿಗಳು ಸಾಂವಿಧಾನಾತ್ಮಕ ಪ್ರಾಥಮಿಕ ಘಟಕಗಳಾಗಿವೆ. ಗ್ರಾಮಗಳ ಅಭಿವೃದ್ಧಿಗೆ ವಿಕೇಂದ್ರಿಕರಣ ವ್ಯವಸ್ಥೆ ಮೂಲಕ ಅಧಿಕಾರ ಹಂಚಿಕೆಯಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು ತಿಂಗಳುಗಳ ಲೆಕ್ಕದಲ್ಲಿ ಅಧಿಕಾರ ಹಂಚಿಕೆ ನಡೆಯುತ್ತಿರುವುದು ಹಾಸ್ಯಾಸ್ಪದ.
ಗ್ರಾಮೀಣ ಭಾಗದ ಅಭಿವೃದ್ಧಿಗಾಗಿಯೇ ಹಲವು ಯೋಜನೆ ಜಾರಿಗೆ ತರಲು ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲಾಗಿದೆ. ತಿಪಟೂರು ತಾಲ್ಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯಿತಿಗಳಿವೆ. ಅವುಗಳಲ್ಲಿ ಈಗಾಗಲೇ ಮೀಸಲಾತಿಯ ಆಧಾರದಲ್ಲಿ (ಎರಡೂವರೆ ವರ್ಷಕ್ಕೆ) 30 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿದೆ.
ಆದರೆ, ಚುನಾಯಿತರಾದ ಕೇವಲ 6 ತಿಂಗಳ ಅವಧಿ ಒಳಗೆ ತಾಲ್ಲೂಕಿನ ಕುಪ್ಪಾಳು ಹಾಗೂ ಮತ್ತೀಹಳ್ಳಿ ಪಂಚಾಯಿತಿ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ. ಕುಪ್ಪಾಳುನಲ್ಲಿ ಕಳೆದ ತಿಂಗಳೇ ಮತ್ತೊಬ್ಬ ಸದಸ್ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತೀಹಳ್ಳಿ ಗ್ರಾ.ಪಂ.ನಲ್ಲಿ ಇತ್ತೀಚೆಗೆ ಅಧ್ಯಕ್ಷರ ಅವಿರೋಧ ಆಯ್ಕೆ ಆಗಿದೆ. ಅಲ್ಲದೇ ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿಯೂ ಅನೇಕ ಅಧ್ಯಕ್ಷರು ಅಧಿಕಾರ ಹಂಚಿಕೆ ಸೂತ್ರದ ಅನ್ವಯ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾದ ಮೇಲೆ ತಮ್ಮ ಅಧಿಕಾರ, ಕಾರ್ಯ ನಿರ್ವಹಣೆ ಬಗ್ಗೆ ಅರಿಯಲು ವರ್ಷಗಳೇ ಬೇಕಿದೆ. 6 ತಿಂಗಳಲ್ಲಿ ಎಷ್ಟರಮಟ್ಟಿಗೆ ಅಧ್ಯಕ್ಷರ ಅಧಿಕಾರ ನಡೆಸಿದ್ದಾರೆ ಎಂಬುದರ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಗಿದೆ.
ಗ್ರಾ.ಪಂ. ಅಧ್ಯಕ್ಷರ ಬದಲಾವಣೆಗೆ ಹಲವಾರು ಕಟ್ಟುಪಾಡುಗಳಿದ್ದು ಅವುಗಳನ್ನು ಅನುಸರಿಸಲು ಹಲವು ತಿಂಗಳುಗಳ ಸಮಯ ಹಿಡಿಯಲಿದೆ. ಅಲ್ಲಿಯವರೆವಿಗೂ ಗ್ರಾ.ಪಂ. ಅಭಿವೃದ್ಧಿ ಕುಠಿತವಾಗಲಿದೆ. ಇನ್ನೂ ಅಧ್ಯಕ್ಷ ಗಾದಿಯೂ ಹಣಕ್ಕಾಗಿ ಅಥವಾ ಬೇರೆ ಉದ್ದೇಶಗಳಿಗೆ ಬಿಕರಿಯಾಗುತ್ತಿದೆಯೇ ಎಂಬ ಅನುಮಾನ ಮತದಾರರ ಮನದಲ್ಲಿ ಮೂಡಿದೆ.
ಜನರು ಸದಸ್ಯರನ್ನು ಉತ್ತಮ ಆಡಳಿತ ನೀಡುವ ಸಲುವಾಗಿ ಗೆಲ್ಲಿಸಿ ಕಳುಹಿಸುತ್ತಾರೆ. ಆದರೆ, ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ಅಧ್ಯಕ್ಷ ಗಾದಿಗಾಗಿ ಹಂಬಲಿಸುತ್ತಿದ್ದಾರೆ. ಇನ್ನಾದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನಿಗದಿಪಡಿಸುವ 30 ತಿಂಗಳ ಅವಧಿಯನ್ನೂ ಯಾರೂ ಬದಲಾಯಿಸದಂತಹ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂಬುದು ಜನರ ಆಗ್ರಹ.
‘5-6 ತಿಂಗಳ ಲೆಕ್ಕದಲ್ಲಿ ಅಧ್ಯಕ್ಷರ ಸ್ಥಾನ ಬದಲಾವಣೆಯಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ. ಅಭಿವೃದ್ಧಿ ಚಿಂತನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರ ನೀಡಿದರೆ ಅದನ್ನು ಸ್ವಇಚ್ಛೆಗೆ ಬಳಸಿಕೊಳ್ಳುವುದು ನಿಜಕ್ಕೂ ದುರಂತದ ಸಂಗತಿ’ ಎಂದು ಹೊಸಹಳ್ಳಿ, ರಂಗಾಪುರ ಗ್ರಾ.ಪಂ. ಸದಸ್ಯ ವಿಶ್ವನಾಥ್ ವಿಷಾದಿಸಿದರು.
‘ಅಧಿಕಾರ ವಿಕೇಂದ್ರೀಕರಣದ ಆಶಯ ಈಡೇರಬೇಕಾದರೆ ಇಂತಹ ಪದ್ಧತಿಗೆ ಕಡಿವಾಣ ಬೀಳಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಬೇಕಿದೆ’ ಎಂಬುದು ಅವರ ಅಭಿಪ್ರಾಯ.
ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಅಧಿಕಾರಾವಧಿ ತಿಂಗಳ ಲೆಕ್ಕದಲ್ಲಿ ಬದಲಾವಣೆಯಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕುಂಠಿತವಾಗುವ ಮುನ್ಸೂಚನೆ ಎದುರಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.