ADVERTISEMENT

ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನ

ಕುಣಿಗಲ್‌ ದೊಡ್ಡಕೆರೆ ಏರಿ ಅವ್ಯವಸ್ಥೆಯ ಆಗರ

ಟಿ.ಎಚ್.ಗುರುಚರಣ್ ಸಿಂಗ್
Published 18 ಅಕ್ಟೋಬರ್ 2021, 6:48 IST
Last Updated 18 ಅಕ್ಟೋಬರ್ 2021, 6:48 IST
ಕುಣಿಗಲ್ ದೊಡ್ಡಕೆರೆ ಏರಿಯಲ್ಲಿ ನಾಗರಿಕರು ಸಂಚರಿಸುವ ಮಾರ್ಗ, ವಿದ್ಯುತ್ ದೀಪಗಳ ಕಂಬ ಮತ್ತು ತಂತಿಬೇಲಿಗೆ ಹಬ್ಬಿರುವ ಬಳ್ಳಿಗಳು
ಕುಣಿಗಲ್ ದೊಡ್ಡಕೆರೆ ಏರಿಯಲ್ಲಿ ನಾಗರಿಕರು ಸಂಚರಿಸುವ ಮಾರ್ಗ, ವಿದ್ಯುತ್ ದೀಪಗಳ ಕಂಬ ಮತ್ತು ತಂತಿಬೇಲಿಗೆ ಹಬ್ಬಿರುವ ಬಳ್ಳಿಗಳು   

ಕುಣಿಗಲ್: ಸಮರ್ಪಕ ನಿರ್ವಹಣೆಯ ಕೊರತೆಯಿಂದ ಇತಿಹಾಸ ಪ್ರಸಿದ್ಧ ಮೂಡಲು ಕುಣಿಗಲ್ ದೊಡ್ಡಕೆರೆಯ ಏರಿ ಮೇಲಿನ ಉದ್ಯಾನ ಸೊರಗಿದೆ. 

ದೊಡ್ಡಕೆರೆ ಏರಿ ಮೇಲೆ ಸೋಮೇಶ್ವರಸ್ವಾಮಿ, ಪಂಚಲಿಂಗೇಶ್ವರ, ಪದ್ಮೇಶ್ವರ ದೇವಾಲಯಗಳ ಜತೆಗೆ ನಾಗರಕಟ್ಟೆಗಳು ಇವೆ. ಇವುಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನಹರಿಸದ ಕಾರಣ ಪಾಳುಬಿದ್ದ ಕೊಂಪೆಯಂತಾಗಿವೆ.  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಕೆರೆಯ ಸುಂದರ ಪರಿಸರದ ಅಭಿವೃದ್ಧಿಗೆ ₹ 5 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾದರು.

2016ರಲ್ಲಿ ಸಂಸದರ ನಿಧಿಯಿಂದ ₹ 2 ಕೋಟಿ ಮಂಜೂರಾಗಿದ್ದು, ₹ 1.5 ಕೋಟಿ ವೆಚ್ಚದಲ್ಲಿ ಸುಮಾರು 5 ಕಿ.ಮೀ ಉದ್ದದ ಕೆರೆ ಏರಿಯ ಭಾಗಕ್ಕೆ ತಂತಿ ಬೇಲಿ ನಿರ್ಮಾಣ ಮಾಡಲಾಗಿತ್ತು. ₹ 25 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಗಳ ಅಳವಡಿಸಲಾಗಿತ್ತು. ಈ ದೀಪಗಳು ಕೆಲವು ದಿನಗಳಷ್ಟೇ ಬೆಳಗಿದವು.

ADVERTISEMENT

ಪದ್ಮೇಶ್ವರ ದೇವಾಲಯದಿಂದ ಸೋಮೇಶ್ವರ ದೇವಾಲಯದ ವರೆಗೆ ಅಲಂಕಾರಿಕ ಪುಷ್ಪಗಳಿಂದ ಕೂಡಿದ ಉದ್ಯಾನ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ದೊರೆದಿತ್ತು. ಈ ಉದ್ಯಾನವನ್ನು 2017ರಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.

ಇದೇ ಸಮಯದಲ್ಲಿ ಪಟ್ಟಣದ ಬಣ್ಣದಲೋಕ ಸಾಂಸ್ಕೃತಿಕ ವೇದಿಕೆಯಿಂದ ಕುಣಿಗಲ್ ಇತಿಹಾಸ ಬಿಂಬಿಸುವ ಸಿಮೆಂಟ್ ಕಲಾಕೃತಿಗಳಾದ ಗಂಗಾಮಾತಾ, ಕುದುರೆ, ಭೃಗು ಮಹರ್ಷಿ ಕಲ್ಲುಗಳ ಮೇಲೆ ನರ್ತನ ಮಾಡುತ್ತಿರುವ ಶಿವನ ಮೂರ್ತಿ ಮತ್ತು ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಶ್ರಮಿಸಿದ ಹುಚ್ಚಮಾಸ್ತಿಗೌಡ ಮತ್ತು ವೈ.ಕೆ. ರಾಮಯ್ಯ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮತ್ತಷ್ಟು ಮೆರುಗು ನೀಡಲಾಯಿತು. ಇದರಿಂದ ಕೆರೆ ಏರಿ ಮೇಲೆ ವೀಕ್ಷಕರ ಸಂಖ್ಯೆ ಹೆಚ್ಚಾಯಿತು.

ಏರಿ ಮೇಲೆ ಮುಂಜಾನೆ ಮತ್ತು ಸಂಜೆ ನೂರಾರು ನಾಗರಿಕರು ವಾಯುವಿಹಾರ ನಡೆಸುತ್ತಿದ್ದರು. ಮತ್ತೊಂದೆಡೆ ಈ ಉದ್ಯಾನ ಪ್ರೇಮಿಗಳ ಸಂಪರ್ಕ ಕೇಂದ್ರವಾಗಿಯೂ ಪರಿವರ್ತನೆಗೊಂಡಿತ್ತು. ನಂತರ ಕೊರೊನಾ ಹಾವಳಿಯಿಂದಾಗಿ ಏರಿ ಭಾಗಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಯಿತು.

‘ನಾಗರಿಕರನ್ನು ಸೆಳೆಯುತ್ತಿದ್ದ ಕೆರೆ ಏರಿ ಪ್ರದೇಶವು ನಿರ್ವಹಣೆಯ ಕೊರತೆಯಿಂದಾಗಿ ಈಗ ಮತ್ತೆ ಪಾಳುಬಿದ್ದಿದೆ. ಮುಳ್ಳಿನ ಗಿಡಗಳು ಮತ್ತು ಬಳ್ಳಿಗಳು ಬೆಳೆದು ಇಡೀ ವಾತಾವರಣವನ್ನೇ ಆವರಿಸಿಕೊಂಡಿವೆ. ಹುಳಹುಪ್ಪಟೆಗಳು ಸೇರಿಕೊಂಡು ಭಯದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ’ ಎಂದು ಅಂದಾನಯ್ಯ ಬಡಾವಣೆ ನಿವಾಸಿ ರಂಗಸ್ವಾಮಿ ದೂರುತ್ತಾರೆ.

ಕೆರೆ ಮತ್ತು ಉದ್ಯಾನದ ನಿರ್ವಹಣೆಯು ಹೇಮಾವತಿ ನಾಲಾ ವಲಯಕ್ಕೆ ಸೇರಿದ್ದರೂ ಅಭಿವೃದ್ಧಿಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಸಂಸದರ ಪ್ರಯತ್ನದಿಂದಾಗಿ ಅಭಿವೃದ್ಧಿಯಾಗಿದ್ದರೂ ಹೇಮಾವತಿ ನಾಲಾ ಅಧಿಕಾರಿಗಳು ನಿರ್ವಹಣೆಯ ನೆಪದಲ್ಲಿ ಪ್ರತಿವರ್ಷ ಹಣವನ್ನು ಸರ್ಕಾರದಿಂದ ಪಡೆದು ಕಾಟಾಚಾರಕ್ಕಾಗಿ ಕೆಲ ಗಿಡಗಳನ್ನು ತೆರವು ಮಾಡಿ ಬಿಲ್ ಮಾಡಿಕೊಂಡಿದ್ದಾರೆ. ವ್ಯವಸ್ಥಿತವಾಗಿ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಆರೋಪಿಸುತ್ತಾರೆ.

ಉದ್ಯಾನದ ನಿರ್ವಹಣೆಯನ್ನು ಅಂಚೇಪಾಳ್ಯದ ಕೈಗಾರಿಕೆ ಪ್ರದೇಶದಲ್ಲಿರುವ ಯಾವುದಾದರೂ ಕೈಗಾರಿಕೆಗೆ ವಹಿಸಲು ಶಾಸಕರಿಗೆ ಮನವಿ ಮಾಡಲಾಗಿದೆ ಎನ್ನುತ್ತಾರೆ ಅವರು.

‘ಕಾರ್ತಿಕ ಮಾಸ ಬರುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿಗೆ ಭಕ್ತರು ಭೇಟಿ ನೀಡುವುದರಿಂದ ದೊಡ್ಡಕೆರೆ ಏರಿ ಉದ್ಯಾನವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ದೇವಾಲಯಗಳ ಅಸ್ತಿತ್ವಕ್ಕೆ ಮೆರುಗು ತರಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು’ ಎಂಬುದು ಸೋಮೇಶ್ವರ ದೇವಾಲಯದ ಅರ್ಚಕರ ವಿಜಯ ಶಂಕರ್ ಅವರ ಮನವಿ.

ಸಾರಾಂಶ

ಸಮರ್ಪಕ ನಿರ್ವಹಣೆಯ ಕೊರತೆಯಿಂದ ಇತಿಹಾಸ ಪ್ರಸಿದ್ಧ ಮೂಡಲು ಕುಣಿಗಲ್ ದೊಡ್ಡಕೆರೆಯ ಏರಿ ಮೇಲಿನ ಉದ್ಯಾನ ಸೊರಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.