ತುಮರಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂದು ಮುಚ್ಚುತ್ತಿರುವ ಇತ್ತೀಚಿನ ದಿನಗಳಲ್ಲೇ ಇಲ್ಲಿನ 45 ಶಾಲೆಗಳಲ್ಲಿ ಅರ್ಧದಷ್ಟು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 21 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ.
ಕರೂರು ಹೋಬಳಿಯ 45 ಶಾಲೆಗಳಲ್ಲಿ ಒಟ್ಟು 107 ಶಿಕ್ಷಕರ ಹುದ್ದೆಗಳಿದ್ದು, ಕೇವಲ 51 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬುದು ಪೋಷಕರ ಆತಂಕ.
ಸರ್ಕಾರಿ ಶಾಲೆಗಳ ಬಗೆಗಿನ ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ಸರ್ಕಾರಿ ಶಾಲೆಗಳು ನಿರ್ವಹಣೆ ಇಲ್ಲದೇ ಸೊರಗುತ್ತಿವೆ.
ಕರೂರು ಹೋಬಳಿಯಲ್ಲಿ 56 ಶಿಕ್ಷಕರ ಕೊರತೆ ಇದೆ. ಶರಾವತಿ ಹಿನ್ನೀರಿನ ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯ
ಲಾಗಿತ್ತು. ಆದರೆ ಅಗತ್ಯ ಶಿಕ್ಷಕರ ನೇಮಕಾತಿ ನಡೆದಿಲ್ಲ.
ಈ ಭಾಗದ ಹಿಂದುಳಿದ ಪ್ರದೇಶಗಳಾದ ಚನ್ನಗೊಂಡ, ಕುದರೂರು, ಎಸ್.ಎಸ್.ಭೋಗ್, ತುಮರಿ, ಬಿಳಿಗಾರು, ಕಟ್ಟಿನಕಾರು, ಮರಾಠಿ, ಸಿಗ್ಗಲು, ಕೋಗಾರ್, ಏಳಿಗೆ, ಮಾರಲಗೋಡು, ಕಾರಣಿ ಗ್ರಾಮದ ಶಾಲೆಗಳಲ್ಲಿ ಶಿಕ್ಷಕರು ಇಲ್ಲದ ಕಾರಣ ನೂರಾರು ಮಕ್ಕಳ ಶಿಕ್ಷಣದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.
ಹಲವು ತಿಂಗಳುಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಜನವರಿ 14ರಂದು ಡಿಡಿಪಿಐಗೆ ಮನವಿ ಸಲ್ಲಿಸಿದ್ದ ಈ ಭಾಗದ ಜನಪ್ರತಿನಿಧಿಗಳ ನಿಯೋಗ ಜ.20ಕ್ಕೆ ಗಡುವು ನೀಡಿತ್ತು. ಗಡುವು ಮುಗಿದ ಕಾರಣ ಜ.26ರ ಗಣರಾಜ್ಯೋತ್ಸವದಂದು ಹೊಸಕೊಪ್ಪದ ಕೇಂದ್ರ ಸ್ಥಳದಲ್ಲಿ ಈ ಭಾಗದ ಎಲ್ಲಾ ಶಾಲೆಗಳನ್ನು ಮುಚ್ಚಿ ವಿದ್ಯಾರ್ಥಿಗಳೊಂದಿಗೆ, ಪ್ರತಿಭಟನೆ ನಡೆಸಲು ಪೋಷಕರು ನಿರ್ಧರಿಸಿದ್ದಾರೆ. 70ಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳು ಧರಣಿಗೆ ಬೆಂಬಲ ಸೂಚಿಸಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ಹಾಬಿಗೆ ಹೇಳಿದರು.
ಗುಡ್ಡಗಾಡು ಪ್ರದೇಶದಲ್ಲಿ ಕೆಲಸಕ್ಕೆ ಹಿಂಜರಿಕೆ: ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಸರಿಯಾದ ರಸ್ತೆ, ವಸತಿ ಇಲ್ಲದ ಕಾರಣ ಈ ಭಾಗಕ್ಕೆ ಯಾವುದೇ ಶಿಕ್ಷಕರು ವರ್ಗಾವಣೆ ಬಯಸುತ್ತಿಲ್ಲ. ಕನಿಷ್ಠ ಪಕ್ಷ ಅತಿಥಿ ಶಿಕ್ಷಕರನ್ನು ಒದಗಿಸದೇ ಇರುವುದರಿಂದ ಬಹುತೇಕ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.
‘ಶಿಕ್ಷಕರ ಕೊರತೆ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಶಿಕ್ಷಕರಿಗೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಅದರ ನಡುವೆ ಉಳಿದ ಸಮಯ ಬೋಧನೆಗೆ ಮೀಸಲಿಡಬೇಕಿದೆ. ಇದರಿಂದಲೂ ಸಮಸ್ಯೆಯಾಗುತ್ತಿದೆ’ ಎಂದರು ಕಪ್ಪದೂರು ಎಸ್‌ಡಿಎಂಸಿ ಅಧ್ಯಕ್ಷ ರಘುಪತಿ ನೇರಿಗೆ.
ಮೂಲಸೌಲಭ್ಯವೂ ಮರೀಚಿಕೆ
ಇಲ್ಲಿನ ಚನ್ನಗೊಂಡ, ಬಿಳಿಗಾರು, ಕಾರಣಿ, ಕುದರೂರು, ಸಿಗ್ಗಲು ಶಾಲೆಗಳಲ್ಲಿ ಸಮರ್ಪಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇತ್ತೀಚೆಗೆ ಈ ಭಾಗದ ತುಮರಿಗೆ ಪಬ್ಲಿಕ್ ಸ್ಕೂಲ್ ಮಂಜೂರಾಗಿದೆ. ಈಗಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸದ ಸರ್ಕಾರ ಪಬ್ಲಿಕ್ ಶಾಲೆಯನ್ನು ಹೇಗೆ ನಿಭಾಯಿಸಲಿದೆ ಎಂಬುದು ಪ್ರಶ್ನೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂಬುದು ಪೋಷಕರ ಒತ್ತಾಯ.
ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಶೇ 60 ರಷ್ಟು ಅತಿಥಿ ಶಿಕ್ಷಕರನ್ನು ಈ ಭಾಗಕ್ಕೆ ನೀಡಲಾಗಿದೆ.
ಬಿಂಬ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ, ಸಾಗರ
ಸರ್ಕಾರವನ್ನು ನಂಬಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಸೂಕ್ತ ಶಿಕ್ಷಣ ಸಿಗುತ್ತಿಲ್ಲ. ಅವ್ಯವಸ್ಥೆ ವಿರುದ್ಧ ಜ.26ರಂದು ಪ್ರತಿಭಟನೆ ನಡೆಸಲಾಗುವುದು.
ರಾಮಚಂದ್ರ ಹಾಬಿಗೆ, ಗ್ರಾ.ಪಂ.ಸದಸ್ಯ, ಎಸ್.ಎಸ್.ಭೋಗ್
ಕಣಿವೆ ಪ್ರದೇಶದಲ್ಲಿನ ಶಿಕ್ಷಕರ ಕೊರತೆ ಕೂಡಲೇ ನಿವಾರಿಸಬೇಕು. ಇದು ಮಕ್ಕಳ ಭವಿಷ್ಯದ ಪ್ರಶ್ನೆ.
ರಘುಪತಿ ನೇರಿಗೆ, ಎಸ್‌ಡಿಎಂಸಿ ಅಧ್ಯಕ್ಷ
ತುಮರಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂದು ಮುಚ್ಚುತ್ತಿರುವ ಇತ್ತೀಚಿನ ದಿನಗಳಲ್ಲೇ ಇಲ್ಲಿನ 45 ಶಾಲೆಗಳಲ್ಲಿ ಅರ್ಧದಷ್ಟು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 21 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.