ADVERTISEMENT

ರಾಮೇಶ್ವರ ದೇವಸ್ಥಾನ ಸಮಿತಿ ಪುನರ್‌ರಚನೆ

ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಿದ ರಾಜ್ಯ ಧಾರ್ಮಿಕ ಪರಿಷತ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:24 IST
Last Updated 17 ಅಕ್ಟೋಬರ್ 2021, 4:24 IST
ತೀರ್ಥಹಳ್ಳಿ ಪಟ್ಟಣದ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ
ತೀರ್ಥಹಳ್ಳಿ ಪಟ್ಟಣದ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ   

ತೀರ್ಥಹಳ್ಳಿ: ರಾಜ್ಯ ಧಾರ್ಮಿಕ ಪರಿಷತ್ ಆದೇಶದಂತೆ ಇಲ್ಲಿನ ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಡಿ.ಎಸ್. ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಪುನರ್ ರಚನೆಗೊಂಡಿದೆ.

2021ರ ಸೆಪ್ಟೆಂಬರ್ 17ರಂದು ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ ಆದೇಶದಂತೆ ಸಮಿತಿ ರಚನೆಗೆ ಅವಕಾಶ ದೊರಕಿದೆ. ಅದರಂತೆ ಶನಿವಾರ ದೇವಸ್ಥಾನದಲ್ಲಿ ವಿಶ್ವನಾಥ ಶೆಟ್ಟಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಮುಖ್ಯಸ್ಥರಾದ ಜಿಲ್ಲಾಧಿಕಾರಿ 2019 ಫೆಬ್ರವರಿ 18ರಂದು ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ 9 ಸದಸ್ಯರ ಸಮಿತಿ ರಚಿಸಿ ಆದೇಶ ಹೊರಡಿಸಿದ್ದರು.

ADVERTISEMENT

ಆದರೆ, ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಬಳಿಕ ಉಳಿದ ನಾಟ ವಿಲೇವಾರಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ತಹಶೀಲ್ದಾರ್ ಅವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 16ರಂದು ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ಸಮಿತಿ ಅಮಾನತು ಮಾಡಿದ್ದರು.

ಜಿಲ್ಲಾಧಿಕಾರಿ ನಿಯಮ ಬಾಹಿರವಾಗಿ ದೇವಸ್ಥಾನದ ಸಮಿತಿಯನ್ನು ಅಮಾನತು ಮಾಡಿದ್ದಾರೆ. ಜಿಲ್ಲಾಧಿಕಾರಿ ಆದೇಶ ರದ್ದು ಪಡಿಸಬೇಕು ಎಂದು ಕೋರಿ ವಿಶ್ವನಾಥ ಶೆಟ್ಟಿ ಹಾಗೂ ಸಮಿತಿಯ 7 ಸದಸ್ಯರು ರಾಜ್ಯ ಧಾರ್ಮಿಕ ಪರಿಷತ್‌ಗೆ ಆಕ್ಷೇಪಣೆ ಸಲ್ಲಿಸಿದ್ದರು.

ಈ ಪ್ರಕರಣ ತೀವ್ರ ವಿವಾದ ಸೃಷ್ಟಿಸಿತ್ತು. ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಸಮಿತಿ ಅಮಾನತು ಹಾಗೂ ನಾಟಾ ವಿಲೇವಾರಿ ಅಕ್ರಮ ಕುರಿತು ಪರ, ವಿರೋಧ ಪ್ರತಿಭಟನೆಗಳೂ ನಡೆದಿದ್ದವು.

ಸಮಿತಿ ಅಮಾನತು ಆದೇಶದ ವಿರುದ್ಧ ಸಲ್ಲಿಸಿದ್ದ ಆಕ್ಷೇಪಣೆ ಕುರಿತು ದೀರ್ಘಾವಧಿ ವಿಚಾರಣೆ ನಡೆಸಿದ ಧಾರ್ಮಿಕ ಪರಿಷತ್‌, ಸಮಿತಿ ರಚನೆಗೆ ಅವಕಾಶ ನೀಡಿತ್ತು. ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಇದೀಗ ವ್ಯವಸ್ಥಾಪನ ಸಮಿತಿ ಪುನರ್ ಸ್ಥಾಪನೆಗೊಂಡಿದೆ.

ಸಾರಾಂಶ

ತೀರ್ಥಹಳ್ಳಿ: ರಾಜ್ಯ ಧಾರ್ಮಿಕ ಪರಿಷತ್ ಆದೇಶದಂತೆ ಇಲ್ಲಿನ ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಡಿ.ಎಸ್. ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಪುನರ್ ರಚನೆಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.