ADVERTISEMENT

ಕೋವಿಡ್ ಮೂರನೇ ಅಲೆಗೆ ನಲುಗುತ್ತಿರುವ ವಾಣಿಜ್ಯೋದ್ಯಮ

ಸಾರಿಗೆ, ಪ್ರವಾಸೋದ್ಯಮಕ್ಕೂ ಹೊಡೆತ; ಹೋಟೆಲ್‌, ಲಾಡ್ಜ್‌ಗಳು ಖಾಲಿ ಖಾಲಿ

ಚಂದ್ರಹಾಸ ಹಿರೇಮಳಲಿ
Published 17 ಜನವರಿ 2022, 5:11 IST
Last Updated 17 ಜನವರಿ 2022, 5:11 IST
ಶಿವಮೊಗ್ಗದಲ್ಲಿ ವಾರಾಂತ್ಯದ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು
ಶಿವಮೊಗ್ಗದಲ್ಲಿ ವಾರಾಂತ್ಯದ ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ರಸ್ತೆ ಜನರಿಲ್ಲದೆ ಬಿಕೋ ಎನ್ನುತ್ತಿತ್ತು   

ಶಿವಮೊಗ್ಗ: ಕೊರೊನಾ ಎರಡು ಅಲೆಗಳಿಗೆ ಸಿಲುಕಿದ್ದ ಜಿಲ್ಲೆಯ ಉದ್ಯಮಿಗಳು, ವ್ಯಾಪಾರಿಗಳು ಚೇತರಿಸಿಕೊಳ್ಳುವ ಸಮಯದಲ್ಲೇ ಮತ್ತೆ ಮೂರನೇ ಅಲೆಯ ನಿರ್ಬಂಧಗಳು ವ್ಯಾಪಾರ, ವಹಿವಾಟಿಗೆ ಪೆಟ್ಟು ನೀಡುತ್ತಿವೆ.

ಜಿಲ್ಲೆಯ ಕೈಗಾರಿಕಾ ವಲಯ, ಸಣ್ಣ ಉದ್ದಿಮೆಗಳು, ಪ್ರವಾಸೋದ್ಯಮ, ಚಿತ್ರಮಂದಿರಗಳು, ಹೋಟೆಲ್‌, ಬಾರ್ ಆ್ಯಂಡ್ ರೆಸ್ಟೋರಟ್ ಸೇರಿ ಹಲವು ವಲಯಗಳು ನಲುಗುತ್ತಿವೆ. ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಹೊಡೆತ ಬೀಳುವ ಭೀತಿ ಎದುರಾಗಿದೆ. ಮೊದಲ, ಎರಡನೇ ಲಾಕ್‌ಡೌನ್ ವೇಳೆ ಹೋಟೆಲ್ ಉದ್ಯಮ ದೊಡ್ಡ ನಷ್ಟ ಅನುಭವಿಸಿತ್ತು. ಕೊರೊನಾ ಅವಧಿಯಲ್ಲಿ ಕೆಲವು ಹೋಟೆಲ್‌ಗಳು ಶಾಶ್ವತವಾಗಿ ಮುಚ್ಚಿದ್ದವು.

ಹೋಟೆಲ್‌ಗಳು ಮಾತ್ರವಲ್ಲದೆ ವಸತಿಗೃಹಗಳು ಕೂಡ ಖಾಲಿಯಾಗಲಿವೆ. ವಾರಾಂತ್ಯದಲ್ಲಿಯೇ ಹೆಚ್ಚು ವ್ಯಾಪಾರ ನಡೆಯುತ್ತದೆ. ಇದೇ ಸಮಯದಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಇರುವ ಇಲ್ಲಿನ ವ್ಯಾಪಾರ ಬಹುಪಾಲು ನಷ್ಟವಾಗುತ್ತಿದೆ. ಚಿತ್ರಮಂದಿರಕ್ಕೆ ಬೀಗ ಬಿದ್ದಿತ್ತು. ನಂತರ ಶೇ 50ರಷ್ಟು ಸೀಟುಗಳಿಂದ ಚಿತ್ರಮಂದಿರಗಳು ಬಾಗಿಲು ತೆರೆದವು. ಮಾಲೀಕರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು. ಈಗ ಮತ್ತೆ
ಶೇ 50ರಷ್ಟು ಸೀಟುಗಳಿಗೆ ಅವಕಾಶ ನೀಡಲಾಗಿದೆ.

ADVERTISEMENT

ಸಾರಿಗೆ, ಪ್ರವಾಸೋದ್ಯಮಕ್ಕೆ ಹೊಡೆತ:

ವಾರಾಂತ್ಯದಲ್ಲಿ, ರಜೆ ಸಮಯದಲ್ಲಿ ಜನರು ನಗರ ಪ್ರದೇಶಗಳಿಗೆ, ಪ್ರವಾಸಿ ತಾಣಗಳಿಗೆ ಬರುವುದು ಹೆಚ್ಚು. ವ್ಯಾಪಾರಿಗಳು ಆಗ ಸ್ವಲ್ಪ ಲಾಭ ನಿರೀಕ್ಷೆ ಮಾಡಬಹುದು.

ಈಗ ವಾರಾಂತ್ಯದಲ್ಲೇ ಜನರ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಆದಾಯಕ್ಕೆ ಪೆಟ್ಟು ಬೀಳುತ್ತಿದೆ. ವರ್ಷಾರಂಭದ ಅವಧಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಜನರಿಂದ ಭರ್ತಿಯಾಗುತ್ತಿವೆ. ಜಿಲ್ಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ, ಸಕ್ಕರೆಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹಧಾಮ, ಕವಲೆದುರ್ಗ ಹೀಗೆ ನಾನಾ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ವಾರಾಂತ್ಯದಲ್ಲಿ ಈ ಸ್ಥಳಗಳಿಗೆ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ಹೆಚ್ಚಿನ ವ್ಯಾಪಾರ ನಡೆಯುತ್ತದೆ. ಈಗ ಜಿಲ್ಲೆಯ ಪ್ರವಾಸೋದ್ಯಮವೂ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡ ಕುಟುಂಬಗಳು ನಿತ್ಯದ ಊಟಕ್ಕೂ ಪರದಾಡುತ್ತಿವೆ.

ಪ್ರವಾಸಿ ತಾಣಗಳಿಗೆ ಬರುವ ಜನರು ಬಾಡಿಗೆಗೆ ವಾಹನಗಳನ್ನು ಪಡೆಯುತ್ತಾರೆ. ಕ್ಯಾಬ್‌, ಟ್ಯಾಕ್ಸಿ, ಆಟೊ ಸೇರಿ ಬಾಡಿಗೆ ನಂಬಿ ಬದುಕುವ ಚಾಲಕರು, ಮಾಲೀಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ಕರ್ಫೂ ವಿಧಿಸಿದ ಕಾರಣ ಜನರು ನಗರದಲ್ಲಿ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ. ಪ್ರವಾಸಿಗರ ಸಂಚಾರ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಜಿಲ್ಲೆಯಲ್ಲಿ 600 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಶಿವಮೊಗ್ಗದಿಂದ ಹೈದರಾಬಾದ್ ಮತ್ತು ಮುಂಬೈ, ಸ್ಥಳೀಯ ಮಾರ್ಗಗಳೂ ಸೇರಿ 450 ಮಾರ್ಗಗಳಲ್ಲಿ ಸಂಚರಿಸುತ್ತವೆ.

200 ಬಸ್‌ಗಳು ಅಂತರ ಜಿಲ್ಲಾ ಪರವಾನಗಿ ಪಡೆದಿವೆ. ವಾರಾಂತ್ಯದ ಲಾಕ್‌ಡೌನ್ ಪರಿಣಾಮ ಬಸ್‌ಗಳಿಗೆ ತೆರಿಗೆ ಕಟ್ಟಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ಬಸ್‌ ಮಾಲೀಕರ ಅಳಲು.

ಕಲ್ಯಾಣ ಮಂಟಪಗಳು:

ಮದುವೆ, ಮತ್ತಿತರ ಸಮಾರಂಭಗಳಿಗೆ 50 ಜನರಿಗಷ್ಟೇ ಸೀಮಿತಗೊಳಿಸಿದ ಕಾರಣ ವಾರಾಂತ್ಯಗಳಲ್ಲಿ ದೊಡ್ಡದೊಡ್ಡ ಕಲ್ಯಾಣ ಮಂಟಪ, ಸಮುದಾಯ ಭವನಗಳನ್ನು ಮುಂಗಡ
ಕಾಯ್ದಿರಿಸಿದ ಬಹುತೇಕರು ಈಗ ಒಪ್ಪಂದ ರದ್ದು ಮಾಡಿಕೊಂಡು ಬೇರೆ ಕಡೆ ಸರಳವಾಗಿ ಕಾರ್ಯ ನೆರವೇರಿಸುತ್ತಿದ್ದಾರೆ.

ಲಾಡ್ಜ್‌ಗಳೂ ಖಾಲಿ:

ಜಿಲ್ಲೆಗೆ ಬಂದ ಪ್ರವಾಸಿಗರು ನಗರದ ಪ್ರಮುಖ ಲಾಡ್ಜ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಆ ಸಮಯದಲ್ಲಿ ಎಲ್ಲಾ ವಸತಿನಿಲಯಗಳು ಭರ್ತಿಯಾಗುತ್ತಿದ್ದವು. ಈಗ ಭಣಗುಡುತ್ತಿವೆ.

ಬಾಗಿಲು ಮುಚ್ಚುವ ಭೀತಿ: ಗೋಪಿನಾಥ್‌

ಮಥುರಾ ಪ್ಯಾರಡೈಸ್ ಮಾಲೀಕ ಎನ್‌. ಗೋಪಿನಾಥ್‌ ಅವರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ವಾಣಿಜ್ಯ, ಉದ್ಯಮ ಕ್ಷೇತ್ರ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಂಕ್ಷಿಪ್ತ ಭಾಗ ಇಲ್ಲಿದೆ.

ಉದ್ಯಮ ಸಂಕಷ್ಟಕ್ಕೆ ಲಾಕ್‌ಡೌನ್‌ಗಳಷ್ಟೇ ಕಾರಣವೇ?

ಅಸಹಜ ದರ ಸಮರ ಸೇರಿ ಕೆಲವು ಸಂಗತಿಗಳ ಜತೆಗೆ ಲಾಕ್‌ಡೌನ್‌ ಸೇರಿ ಉದ್ಯಮ, ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡಪೆಟ್ಟು ಕೊಟ್ಟಿದೆ. ಕೆಲವು ಉದ್ಯಮಗಳು ಪತನದತ್ತ ಸಾಗಿವೆ. ಹೋಟೆಲ್‌ ಉದ್ಯಮವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಹಿಂದೆ ಫುಟ್‌ಪಾತ್ ಹೋಟೆಲ್‌ಗಳ ಹೆಚ್ಚಳದ ಪರಿಣಾಮ ದರ ಪೈಪೋಟಿ ಇತ್ತು. ಕೊರೊನಾ ಸಂಕಷ್ಟಗಳ ನಂತರ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಿದೆ. ಮೂರನೇ ಅಲೆಯ ವಾರಾಂತ್ಯದ ಲಾಕ್‌ಡೌನ್‌ ಆರಂಭವಾದ ಎರಡನೇ ವಾರಗಳಲ್ಲಿ ದೇಶದ 700 ಹೋಟೆಲ್‌ಗಳು ಬೀಗ ಜಡಿದಿವೆ.

ಹಿಂದೆಲ್ಲ ವಾಣಿಜ್ಯ, ಉದ್ಯಮ ಕ್ಷೇತ್ರ ಸಾಕಷ್ಟು ಲಾಭ ಮಾಡಿದೆಯಲ್ಲ?

ಹೌದು, ಒಂದು ಕಾಲಘಟ್ಟದಲ್ಲಿ ಉದ್ಯಮ ವಲಯ ಲಾಭದತ್ತ ಸಾಗಿದ ಕಾರಣ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಹರಿದುಬಂತು. ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಜಾರಿಯಾದವು. ಉದ್ಯಮ ವಲಯ ಲಾಭ ಮಾಡದೇ ನಷ್ಟ ಅನುಭವಿಸಿದರೆ ಸರ್ಕಾರಕ್ಕೆ ಆದಾಯ ಬರುವುದಾದರೂ ಹೇಗೆ? ಆದರೆ, ಕೊರೊನಾ ಸಂಕಷ್ಟ ಸಾಕಷ್ಟು ನಷ್ಟ ಮಾಡಿದೆ. ಈಗ ಸರ್ಕಾರವೇ ನೆರವು ನೀಡಬೇಕಿದೆ.

ಸರ್ಕಾರ ಘೋಷಿಸಿದ ಪರಿಹಾರ ತಲುಪಿಲ್ಲವೇ?

ಹೋಟೆಲ್‌, ಸಿನಿಮಾ, ಮಾಲ್‌, ಕಲ್ಯಾಣ ಮಂಟಪ, ಕುಶಲಕರ್ಮಿ, ಅಡುಗೆ ಗುತ್ತಿಗೆದಾರರು ಸೇರಿ ಹಲವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೆಲವು ಉದ್ಯಮಗಳಿಗೆ ನೆರವು ದೊರೆತಿದೆ. ಹೋಟೆಲ್‌ ಉದ್ಯಮ ಸೇರಿ ಹಲವು ವಲಯಗಳಿಗೆ ಸಿಕ್ಕಿಲ್ಲ. ಪ್ರವಾಸೋದ್ಯಮ ಮಾನ್ಯತೆ ಪಡೆದ ವಲಯಗಳಿಗೆ
ಶೇ 50ರಷ್ಟು ಕಂದಾಯ ಮನ್ನಾ, ವಿದ್ಯುತ್ ಮೂಲ ಶುಲ್ಕ ಕಡಿತದ ಪ್ರಯೋಜನದ ಪ್ರಕ್ರಿಯೆ ಆರಂಭವಾಗಿವೆ.

ಕೊರೊನಾ ಸಂಕಷ್ಟದಲ್ಲಿ ಸಂಘದ ಪ್ರಥಮ ಆದ್ಯತೆ ಏನು?

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮೊದಲ ಆದ್ಯತೆ. ಎಷ್ಟೇ ಆರ್ಥಿಕ ನಷ್ಟ ಅನುಭವಿಸಿದರೂ ಸರಿ. ಕೋವಿಡ್‌ ನಿಯಮಗಳನ್ನು ಎಲ್ಲರೂ ಪಾಲಿಸಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಮನವೊಲಿಸುವುದು. ಕೆಲಸ ಮಾಡುವ ಎಲ್ಲರಿಗೂ ಎರಡು ಡೋಸ್‌ ಲಸಿಕೆ ಕೊಡಿಸುವುದು.
ಉದ್ಯಮ–ಸರ್ಕಾರದ ಮಧ್ಯೆ ಸಮನ್ವಯತೆ, ಸರ್ಕಾರದ ಸೌಲಭ್ಯಗಳನ್ನು ಕ್ಷೇತ್ರಕ್ಕೆ ತಲುಪಿಸುವುದು.
ವರ್ತಕರ ಅಹವಾಲುಗಳನ್ನು ಗಮನಕ್ಕೆ ತರುವುದು.

ಉದ್ಯಮಗಳಿಗೆ ಬೆಲೆ ಏರಿಕೆ ಲಾಭವಾಗಿದೆಯಲ್ಲ?

ಸ್ಟೀಲ್‌, ಸಿಮೆಂಟ್ ಸೇರಿ ದೊಡ್ಡ ಉತ್ಪಾದಕರಿಗೆ ಲಾಭವಾಗಿರಬಹುದು. ಐಟಿ, ಬಿಟಿ, ಆರೋಗ್ಯ ವಲಯಕ್ಕೆ ಯಾವುದೇ ಬಿಸಿ ತಟ್ಟಿಲ್ಲ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಕಾರಣ ಸಣ್ಣ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಸಣ್ಣ ಉದ್ದಿಮೆಗಳಿಗೂ ಸರ್ಕಾರದ ನೆರವಿನ ಸಮತೋಲನ ಹಂಚಿಕೆಯಾಗಬೇಕು.

ಜಿಲ್ಲೆಯ ಉದ್ಯಮಕ್ಕೆ ನಿಮ್ಮ ಆದ್ಯತೆ ಏನು?

ಜಿಲ್ಲೆಯ ಪ್ರಮುಖ ಬೆಳೆ ಅಡಿಕೆ. ಅಡಿಕೆಗೆ ಪೂರಕವಾದ ಸಂಶೋಧನೆ, ಅಡಿಕೆಯ ವೈವಿಧ್ಯಮಯ ಉತ್ಪನ್ನಗಳ ತಯಾರಿಕೆ, ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಒಳಗೊಂಡ ‘ಅಡಿಕೆ ಹಬ್‌’ ನಿರ್ಮಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಒಂದು ಜಿಲ್ಲೆ ಒಂದು ಉತ್ಪನ್ನದ ಅಡಿ ಪರಿಗಣಿಸಬೇಕು. ಟ್ರಕ್, ಬಸ್‌ ಟರ್ಮಿನಲ್‌ ಯಾರ್ಡ್‌, ತಾಂತ್ರಿಕ ಕೌಶಲ ಕೇಂದ್ರ ಸ್ಥಾಪನೆ, ಶಿವಮೊಗ್ಗದ ಐದು ಕೈಗಾರಿಕಾ ಪ್ರದೇಶಗಳಲ್ಲೂ ವಿದ್ಯುತ್ ಸರಬರಾಜು ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆ ಇದೆ. ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತಿದೆ. 

ಮಹೀಂದ್ರ ಸರಕು ಸಾಗಣೆ ವಾಹನಗಳು ಹೆಚ್ಚಾಗಿ ರಜಾ ದಿನಗಳಲ್ಲೇ ಸರ್ವಿಸ್‌ಗೆ ಬರುತ್ತವೆ. ವಾರಾಂತ್ಯದ ಲಾಕ್‌ಡೌನ್‌ ಕಾರಣ ವಾಹನಗಳ ದುರಸ್ತಿ ಸಾಧ್ಯವಾಗುತ್ತಿಲ್ಲ. ಕಾರ್ಮಿಕರಿಗೂ ಕೆಲಸವಿಲ್ಲ.

ಹರೀಶ್‌, ಮಾಲೀಕರು, ಶ್ರೀ ಸಾಯಿ ಆಟೊಟೆಕ್‌, ನಿಧಿಗೆ

ಲಾಕ್‌ಡೌನ್‌ ಸಮಯದಲ್ಲಿ ವಿದ್ಯುತ್ ಶುಲ್ಕವೇ ಸಣ್ಣ ಕೈಗಾರಿಕೆಗಳಿಗೆ ಭಾರಿ ಹೊರೆಯಾಗುತ್ತದೆ. ಸರ್ಕಾರ ಕನಿಷ್ಠ ಶುಲ್ಕವನ್ನಾದರೂ ಮನ್ನಾ ಮಡಬೇಕು. ವಿಶೇಷ ಪ್ಯಾಕೇಜ್‌ ನೀಡಬೇಕು.

ಎ.ಜಿ.ಪ್ರೇಮ್‌ಕುಮಾರ್ (ರಾಜಣ್ಣ), ಉಪಾಧ್ಯಕ್ಷರು, ವಿಶ್ವೇಶ್ವರಯ್ಯ ಅಲಾಯ್‌ ಕ್ಯಾಸ್ಟಿಂಗ್, ಮಾಚೇನಹಳ್ಳಿ

5

ಶಿವಮೊಗ್ಗದ ಕೈಗಾರಿಕಾ ಪ್ರದೇಶಗಳು

250

ಜಿಲ್ಲೆಯ ಕಾರ್ಖಾನೆಗಳು 


40 ಸಾವಿರ

ವಿವಿಧ ವಲಯಗಳ ಕಾರ್ಮಿಕರು

ಸಾರಾಂಶ

ಶಿವಮೊಗ್ಗ: ಕೊರೊನಾ ಎರಡು ಅಲೆಗಳಿಗೆ ಸಿಲುಕಿದ್ದ ಜಿಲ್ಲೆಯ ಉದ್ಯಮಿಗಳು, ವ್ಯಾಪಾರಿಗಳು ಚೇತರಿಸಿಕೊಳ್ಳುವ ಸಮಯದಲ್ಲೇ ಮತ್ತೆ ಮೂರನೇ ಅಲೆಯ ನಿರ್ಬಂಧಗಳು ವ್ಯಾಪಾರ, ವಹಿವಾಟಿಗೆ ಪೆಟ್ಟು ನೀಡುತ್ತಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.