ADVERTISEMENT

ಸಾಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ

ಮಕ್ಕಳ ಮೇಲೆ ದಾಳಿ: ಆತಂಕದಲ್ಲಿ ನಿವಾಸಿಗಳು

ಎಂ.ರಾಘವೇಂದ್ರ
Published 13 ಅಕ್ಟೋಬರ್ 2021, 5:52 IST
Last Updated 13 ಅಕ್ಟೋಬರ್ 2021, 5:52 IST
ಸಾಗರದಲ್ಲಿ ಬೀದಿ ನಾಯಿ ಕಚ್ಚಿದ ಪರಿಣಾಮ ಗಾಯಗೊಂಡಿರುವ ಬಾಲಕಿ
ಸಾಗರದಲ್ಲಿ ಬೀದಿ ನಾಯಿ ಕಚ್ಚಿದ ಪರಿಣಾಮ ಗಾಯಗೊಂಡಿರುವ ಬಾಲಕಿ   

ಸಾಗರ: ನಗರವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿರುವುದು ನಾಗರಿಕರಲ್ಲಿ ಆತಂಕ ತಂದಿದೆ. ಬೀದಿ ನಾಯಿಗಳು ಗುಂಪು ಗುಂಪಾಗಿ ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಈಚೆಗೆ ಗಾಂಧಿನಗರ, ರಾಮನಗರ ಸೇರಿ ಕೆಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಗಾಯಗೊಂಡಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರುವಂತಾಗಿದೆ. ಈ ಕಾರಣ ಬೀದಿ ನಾಯಿಗಳನ್ನು ನಿಯಂತ್ರಿಸಲು ಸ್ಥಳೀಯ ಆಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಈ ಮೊದಲು ಬೀದಿ ನಾಯಿಗಳುವಿಪರೀತವಾದಾಗ ಅವುಗಳನ್ನು ಕೊಲ್ಲುವ ಮೂಲಕ ನಿಯಂತ್ರಣಕ್ಕೆ ತರಲಾಗುತ್ತಿತ್ತು. ಆದರೆ ನಾಯಿಗಳನ್ನು ಈ ರೀತಿ ಕೊಲ್ಲುವಂತಿಲ್ಲ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಸ್ಥಳೀಯ ಆಡಳಿತಕ್ಕೆ ನಾಯಿಗಳ ನಿಯಂತ್ರಣಕ್ಕೆ ತೊಡಕಾಗಿರುವ ಅಂಶ.

ADVERTISEMENT

ಈಗಿನ ನಿಯಮಗಳ ಪ್ರಕಾರ ಬೀದಿ ನಾಯಿಗಳನ್ನು ನಿಯಂತ್ರಿಸಲು ಅವುಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಬೇಕು. ಹೀಗೆ ಚಿಕಿತ್ಸೆ ನೀಡಿದ ನಂತರ ಯಾವ ಸ್ಥಳದಲ್ಲಿ ನಾಯಿಗಳನ್ನು ಹಿಡಿಯಲಾಗಿತ್ತೋ ಅದೇ ಸ್ಥಳದಲ್ಲಿ ಬಿಡಬೇಕು. ಪಶು ವೈದ್ಯರು ಶಿಫಾರಸು ಮಾಡಿದರೆ ಮಾತ್ರ ರೇಬಿಸ್ ನಂತರ ಸಾಂಕ್ರಾಮಿಕ ರೋಗ ತಗುಲಿದ ನಾಯಿಗಳಿಗೆ ದಯಾಮರಣ ಕಲ್ಪಿಸುವ ಅವಕಾಶವಿದೆ.

ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣು ನಾಯಿ ಮರಿಗಳನ್ನು ನಗರ ಪ್ರದೇಶಕ್ಕೆ ತಂದು ಬಿಡುತ್ತಿರುವುದು ಹಾಗೂ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡುವುದು ಸುಲಭದ ಕೆಲಸ ಅಲ್ಲ. ಇದೂ ‌ನಾಯಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಈ ಹಿಂದೆ ನಗರಸಭೆ ನಾಯಿಗಳ ನಿಯಂತ್ರಣಕ್ಕೆ ಮುಂದಾದಾಗ ಪ್ರಾಣಿ ದಯಾ ಸಂಘದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಮಕ್ಕಳನ್ನು ಗಾಸಿಗೊಳಿಸುತ್ತಿರುವ ಪ್ರಕರಣ ಹೆಚ್ಚುತ್ತಿರುವುದರಿಂದ ಇಲ್ಲಿನ ನಗರಸಭೆ ನಾಯಿಗಳ ನಿಯಂತ್ರಣಕ್ಕೆಂದು ಸಮಿತಿಯೊಂದನ್ನು ರಚಿಸಿದೆ.

ಈ ಸಮಿತಿಯಲ್ಲಿ ಪಶು ವೈದ್ಯರು, ಕೆನಲ್ ಕ್ಲಬ್, ಪ್ರಾಣಿ ದಯಾ ಸಂಘದ ಪದಾಧಿಕಾರಿಗಳು ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದಾರೆ. ಶೀಘ್ರ ಈ ಸಮಿತಿ ಸಭೆ ಸೇರಿ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಟೆಂಡರ್ ಕರೆಯಲು ನಿಯಮಾನುಸಾರ ಕ್ರಮ ಕೈಗೊಳ್ಳಲು ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಬೇಕೇ ಹೊರತು ಕೊಲ್ಲುವಂತಿಲ್ಲ. ನಗರವ್ಯಾಪ್ತಿಯಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸ್ಥಳೀಯ ಆಡಳಿತ ನಿಯಂತ್ರಿಸಬೇಕು.

ಡಾ.ಶ್ರೀಪಾದರಾವ್ ಎನ್. ಎಚ್., ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ

ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸುವ ಸಂಬಂಧ ಶೀಘ್ರ ಟೆಂಡರ್ ಕರೆಯಲಾಗುವುದು. ಶಸ್ತ್ರ ಚಿಕಿತ್ಸೆ ಮಾಡಿಸಿದ ನಂತರ ನಾಯಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇದೆ. ಈ ಸಂಬಂಧ ಈಗಾಗಲೇ ತಜ್ಞರ ಸಮಿತಿ ರಚಿಸಲಾಗಿದೆ.

- ಮಧುರಾ ಶಿವಾನಂದ್, ಅಧ್ಯಕ್ಷೆ, ನಗರಸಭೆ

ಸಾರಾಂಶ

ಸಾಗರ: ನಗರವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿರುವುದು ನಾಗರಿಕರಲ್ಲಿ ಆತಂಕ ತಂದಿದೆ. ಬೀದಿ ನಾಯಿಗಳು ಗುಂಪು ಗುಂಪಾಗಿ ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.