ಭದ್ರಾವತಿ: ಬೌದ್ಧಧರ್ಮ ಪ್ರಕೃತಿ ನಿಯಮಕ್ಕೆ ಶರಣಾಗಿ ಬದುಕು ನಡೆಸುವುದನ್ನು ಕಲಿಸುವ ಜತೆಗೆ ವೈಜ್ಞಾನಿಕ ಸತ್ಯ ಸಾರುತ್ತದೆ ಎಂದು ಕೊಳ್ಳೇಗಾಲ ಚೇತವನ ಬುದ್ಧವಿಹಾರದ ಸುಗತಪಾಲ ಭಂತೇಜ ಹೇಳಿದರು.
ಹೊಸನಂಜಾಪುರ ಗ್ರಾಮದಲ್ಲಿ ಗುರುವಾರ ಸುಂಬದ್ಧ ಧಮ್ಮಾಂಕುರ ಟ್ರಸ್ಟ್ ನೇತೃತ್ವದಲ್ಲಿ ನಡೆದ ಬೌದ್ಧವಿಹಾರ ಮಂದಿರ ನಿರ್ಮಾಣ ಅಡಿಗಲ್ಲು ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ರಾಗ, ದ್ವೇಷ, ಮೋಹದಿಂದ ಹೊರಗೆ ಬಂದು ಸಾತ್ವಿಕ ಜೀವನ ನಡೆಸುವ ಪದ್ಧತಿಯನ್ನು ಕಲಿಸುವ ಬೌದ್ಧಧರ್ಮ ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಪ್ರಪಂಚದ ಮೊದಲ ಗುರು ಆಗಿರುವ ಬುದ್ಧ ಬದುಕಿನ ಸರ್ವಸ್ವ ತ್ಯಾಗ ಮಾಡುವ ಮೂಲಕ ಸಾಮಾಜಿಕ ಶಾಂತಿಯ ಸಂದೇಶ ಸಾರಿದ್ದಾರೆ. ಇಂದು ವಿಶ್ವದ ಹಲವು ದೇಶದಲ್ಲಿ ಇದು ಮುಂದುವರಿದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಬಿ.ಕೆ. ಸಂಗಮೇಶ್ವರ ಮಾತನಾಡಿ, ‘ಭಗವಾನ್ ಬುದ್ಧನ ವಿಚಾರಗಳು ಪ್ರಸ್ತುತ ಆಶಾಂತಿಯ ಸಮಾಜಕ್ಕೆ ಬದಲಾವಣೆಯ ಶಕ್ತಿ ಇದ್ದಂತೆ. ಇಂತಹ ಒಂದು ಧರ್ಮದ ಕೆಲಸವನ್ನು ನಮ್ಮ ಕ್ಷೇತ್ರದಲ್ಲಿ ಆರಂಭಿಸಿರುವುದಕ್ಕೆ ಹೆಮ್ಮೆ ಎನಿಸಿದೆ’ ಎಂದರು.
ಬೌದ್ಧವಿಹಾರ ಹಾಗೂ ಧ್ಯಾನಮಂದಿರ ನಿರ್ಮಾಣ ಕಾರ್ಯಕ್ಕೆ ಅಗತ್ಯ ನೆರವು ನೀಡಲು ಶಾಸಕರ ನಿಧಿ ಹಾಗೂ ನಗರಸಭೆ ನಿಧಿಯಿಂದ ₹ 50 ಲಕ್ಷ ನೆರವು ನೀಡುವುದಾಗಿ ತಿಳಿಸಿದರು.
ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ.ರಾಚಪ್ಪ ಮಾತನಾಡಿ, ‘ಬೌದ್ಧ ವಿಹಾರ ನಿರ್ಮಿಸುವ ಮೂಲಕ ಎಲ್ಲಾ ಜಾತಿಯ ಬಡವರಿಗೆ ಜ್ಞಾನ, ಅಧ್ಯಾತ್ಮ ಹಾಗೂ ಬದುಕಿನ ಕಲೆಯ ಶಿಕ್ಷಣ ಕೊಡಲು ಪ್ರಯತ್ನಿಸಲಾಗುವುದು’ ಎಂದರು.
‘ಸಮಾಜದಲ್ಲಿ ಯಾವುದೇ ಜಾತಿ, ಧರ್ಮ, ಪಂಥ ಹಾಗೂ ಸಮುದಾಯ ಇರಲಿ ಅವರೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಿಸುವ ಕೆಲಸವನ್ನು ಟ್ರಸ್ಟ್ ನೇತೃತ್ವದಲ್ಲಿ ಮಾಡಲಾಗುವುದು. ಇದೇ ನಮ್ಮ ಗುರಿ’ ಎಂದರು.
ಟ್ರಸ್ಟ್ ಕಾರ್ಯದರ್ಶಿ ಹಾಗೂ ಭೂಮಿ ಕೊಡುಗೆ ನೀಡಿರುವ ಶ್ರೀನಿವಾಸ್, ಧಮ್ಮಾಚಾರಿ ಚಾಂದಿಮಾ, ಲಕ್ಷ್ಮಣ್, ಸಂಘಪಾಲೋ, ಪೌರಾಯುಕ್ತ ಪರಮೇಶ್ವರ್ ಇದ್ದರು. ಏಳು ಮಂದಿ ಬೌದ್ಧಧರ್ಮ ಸ್ವೀಕಾರ ಮಾಡಿದರು. ಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು. ಚಿನ್ನಯ್ಯ ಸ್ವಾಗತಿಸಿದರು. ಎಂ.ಕೆ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ, ಭದ್ರಾವತಿ ಸತ್ಯ ಮನವಿ ಸಲ್ಲಿಸಿದರು. ಪ್ರಜಾಪ್ರತಿನಿಧಿ ಸುರೇಶ್ ವಂದಿಸಿದರು.
ಭದ್ರಾವತಿ: ಬೌದ್ಧಧರ್ಮ ಪ್ರಕೃತಿ ನಿಯಮಕ್ಕೆ ಶರಣಾಗಿ ಬದುಕು ನಡೆಸುವುದನ್ನು ಕಲಿಸುವ ಜತೆಗೆ ವೈಜ್ಞಾನಿಕ ಸತ್ಯ ಸಾರುತ್ತದೆ ಎಂದು ಕೊಳ್ಳೇಗಾಲ ಚೇತವನ ಬುದ್ಧವಿಹಾರದ ಸುಗತಪಾಲ ಭಂತೇಜ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.