ADVERTISEMENT

ದನಗಳ ಕಿಚ್ಚು ಹಾಯಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 4:22 IST
Last Updated 16 ಜನವರಿ 2022, 4:22 IST
ಚೀರಣಕುಪ್ಪೆ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಸವೇಶ್ವರ ದೇವಸ್ಥಾನದಲ್ಲಿ ಬಸವನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು
ಚೀರಣಕುಪ್ಪೆ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಸವೇಶ್ವರ ದೇವಸ್ಥಾನದಲ್ಲಿ ಬಸವನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಕನಕಪುರ: ಸಂಕ್ರಾಂತಿ ಹಬ್ಬದಲ್ಲಿ ದನಗಳ ಕಿಚ್ಚು ಹಾಯಿಸುವುದೇ ಪ್ರಮುಖವಾದುದು. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಶನಿವಾರ ದನಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು.

ಕೃಷಿಯಲ್ಲಿ ತನ್ನ ಜೀವನಾಡಿಯಾಗಿ ಕೆಲಸ ಮಾಡುತ್ತಾ ಮನುಷ್ಯನ ಅಭಿವೃದ್ಧಿಗೆ ಸಹಕಾರಿಯಾಗುವ ರಾಸುಗಳ ಪೂಜೆ ಮಾಡುವುದು ಮತ್ತು ಜಮೀನಿನಲ್ಲಿ ಬೆಳೆದ ಹೊಸ ಧಾನ್ಯವನ್ನು ಮನೆಗೆ ತುಂಬಿಸಿಕೊಳ್ಳುವ ಪರ್ವಕಾಲವೇ ಸಂಕ್ರಾಂತಿ. 

ಹಿರಿಯರು ಅತ್ಯಂತ ಸಂಭ್ರಮದಿಂದ ಈ ಹಬ್ಬ ಆಚರಣೆ ಮಾಡುತ್ತಾ ಬಂದಿದ್ದಾರೆ. ಮನೆಯಲ್ಲಿ ಸಾಕಿರುವ ಎಲ್ಲಾ ಪ್ರಾಣಿಗಳಿಗೆ ಈ ಹಬ್ಬದಲ್ಲಿ ಮೈತೊಳೆದು ಶೃಂಗರಿಸಲಾಗುತ್ತದೆ. ಸಂಜೆ ಸೂರ್ಯಾಸ್ತವಾದ ಮೇಲೆ ರಾಸುಗಳನ್ನು ಕಿಚ್ಚುಹಾಯಿಸಿ ಮನೆ ತುಂಬಿಸಿಕೊಂಡಿದ್ದು ಎಲ್ಲೆಡೆ ಕಂಡು ಬಂದಿತು.

ವರ್ಷವಿಡೀ ಹೊಲ, ಗದ್ದೆಗಳಲ್ಲಿ ಬೆಳೆದ ರಾಗಿ, ಜೋಳ, ಭತ್ತದ ರಾಶಿಗೆ ರೈತರು ರಾಶಿ ಪೂಜೆ ನೆರವೇರಿಸಿದರು. ಮನೆಯಲ್ಲಿ ಗೃಹಿಣಿಯರು ಹೊಸ ಬೆಳೆಯಿಂದ ಅಡುಗೆ ಮಾಡಿದರೆ, ಮನೆಯಲ್ಲಿನ ಹೆಣ್ಣುಮಕ್ಕಳು ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕೊಬ್ಬರಿ ಮಿಶ್ರಣದೊಂದಿಗೆ ಕಬ್ಬನ್ನು ಮನೆ ಮನೆಗೆ ಹಂಚಿ ಸಂಭ್ರಮಿಸಿದರು.

ಹಬ್ಬದ ಸಂಭ್ರಮ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲೇ ಹೆಚ್ಚಾಗಿ ಕಂಡು ಬಂದಿತು. ಮೇಗಳಬೀದಿ ಮತ್ತು ದೊಡ್ಡಿಬೀದಿಯಲ್ಲಿ ದನಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ವಿಶೇ‍ಷವಾಗಿ ನಡೆಯಿತು.

ನಗರ ಪ್ರದೇಶವಾದರು ಕೆಲವರು ನಾಟಿ ದನಗಳನ್ನು ಸಾಕಿದ್ದು ಅವುಗಳನ್ನು ಮನಮೋಹಕವಾಗಿ ಶೃಂಗರಿಸಿದ್ದರು. ಕಿಚ್ಚು ಹಾಯಿಸುವ ಸ್ಥಳಕ್ಕೆ ಸಂಜೆ 6 ಗಂಟೆಗೆ ಕರೆ ತಂದರು. ಮೇಗಳಬೀದಿಯ ಆಸ್ಪತ್ರೆ ಸರ್ಕಲ್‌ ಮತ್ತು ಕೆಂಕೇರಮ್ಮ ದೇವಸ್ಥಾನದ ಗೂಡಿನ ಮಾರುಕಟ್ಟೆ ಸರ್ಕಲ್‌ನಲ್ಲಿ ದನಗಳನ್ನು ಕಿಚ್ಚು ಹಾಯಿಸಲು ಬೆಂಕಿ ಹಾಕಲಾಯಿತು.

ವಾದ್ಯಗೋಷ್ಠಿಯ ಜತೆಗೆ ಪಟಾಕಿ, ಆಕಾಶದೆತ್ತರಕ್ಕೆ ಚಿಮ್ಮುವ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಇದರ ನಡುವೆ ಜೋರಾಗಿ ಹೊತ್ತಿ ಉರಿಯುವ ಬೆಂಕಿ ದಾಟಲು ಬೆದರಿದ ದನಗಳು ಹರಸಾಹಸಪಟ್ಟವು. ಅವುಗಳ ಜತೆಯಲ್ಲಿ ಬಂದಿದ್ದವರು ಹುಮ್ಮಸ್ಸಿನಿಂದ ದನಗಳ ಕಿಚ್ಚಾಯಿಸಿದರು. ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಸಾರಾಂಶ

ಸಂಕ್ರಾಂತಿ ಹಬ್ಬದಲ್ಲಿ ದನಗಳ ಕಿಚ್ಚು ಹಾಯಿಸುವುದೇ ಪ್ರಮುಖವಾದುದು. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಶನಿವಾರ ದನಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.