ADVERTISEMENT

ರಾಯಚೂರು: ಸರ್ಕಾರದ ಮಾರ್ಗಸೂಚಿ ತಪ್ಪದೇ ಪಾಲಿಸಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 15:20 IST
Last Updated 20 ಜನವರಿ 2022, 15:20 IST
 ಮಲ್ಲಿಕಾರ್ಜುನಗೌಡ ಹೇಳಿಕೆ
 ಮಲ್ಲಿಕಾರ್ಜುನಗೌಡ ಹೇಳಿಕೆ   

ರಾಯಚೂರು: ಕೋವಿಡ್ ಇಡೀ ವಿಶ್ವವನ್ನೇ ಬಾಧಿಸುತ್ತಿದ್ದು, ಅನೇಕ ಜನರು ಸಾವಿಗೀಡಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ಕೋವಿಡ್-19ರ ಲಸಿಕೆ ಪಡೆದುಕೊಂಡರೆ ಕೊರೊನಾ ನಿಯಂತ್ರಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ನಗರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಪ್ರಚಾರ ನಡೆಸುತ್ತಿದೆ. ಪ್ರತಿಯೊಬ್ಬರು ತಪ್ಪದೇ ಲಸಿಕೆ ಪಡೆದುಕೊಳ್ಳಿ ಹಾಗೂ ಸರ್ಕಾರದ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

‘ಕೋವಿಡ್ ಮಹಾಮಾರಿಯು ಎಲ್ಲರ ದಿನನಿತ್ಯದ ಜೀವನವನ್ನು ಹಾಳು ಮಾಡುತ್ತಿದ್ದು, ಒಂದು ಹಾಗೂ ಎರಡು ಅಲೆ ಬಂದಾಗ ಕೆಲವೊಂದು ಕ್ರಮವನ್ನು ಪಾಲಿಸಿಕೊಂಡು ಬಂದಿದ್ದೇವೆ. ಅವುಗಳನ್ನು ಇನ್ನಷ್ಟು ಎಚ್ಚರಿಕೆಯಿಂದ ಪಾಲಿಸುವುದು ಸೂಕ್ತ. ನಾನು ಸಹ ಎರಡನೇ ಅಲೆಯಲ್ಲಿ ಕೋವಿಡ್‌ಗೆ ತುತ್ತಾಗಿ ಸಾವಿನ ಮನೆಯನ್ನು ತಟ್ಟಿ ಬಂದಿದ್ದೇನೆ. ನನಗೆ ಜಿಲ್ಲೆಯ ವೈದ್ಯರು ಉತ್ತಮ ಚಿಕಿತ್ಸೆಯನ್ನು ನೀಡಿ ಮತ್ತೆ ಸಮಾಜದ ಕಾರ್ಯವನ್ನು ಮಾಡಲು ಧೈರ್ಯ ಸ್ಥೈರ್ಯವನ್ನು ತುಂಬಿ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

‘ಇತ್ತೀಚಿಗೆ ನಮ್ಮ ಉಚ್ಚ ನ್ಯಾಯಾಲಯ ನೀಡಿದ ಮಾರ್ಗಸೂಚಿಯ ಪ್ರಕಾರ ನ್ಯಾಯಾಲಯದಲ್ಲಿ ಯಾವುದೇ ಕಕ್ಷಿದಾರರಿಗೆ ಒಳಗಡೆ ಪ್ರವೇಶ ನೀಡುತ್ತಿಲ್ಲ. ಸಾಕ್ಷಿಗಳನ್ನು ಸಹ ನಾವು ಪಡೆಯುತ್ತಿಲ್ಲ. ಜನಸಂದಣಿ ಜಾಸ್ತಿ ಆದಷ್ಟು ಕೊರೊನಾ ಹರಡುವಿಕೆ ಜಾಸ್ತಿಯಾಗುವ ಸಾಧ್ಯತೆ ಇರುವುದರಿಂದ ಇದನ್ನು ತಡೆಗಟ್ಟುವ ಸಲುವಾಗಿ ನಾವು ಜನರನ್ನು ರಕ್ಷಣೆ ಮಾಡಿ, ನ್ಯಾಯಾಲಯದಲ್ಲಿರುವ ಕೇಸುಗಳ ತದನಂತರದಲ್ಲಿ ಇತ್ಯರ್ಥಪಡಿಸಬಹುದು ಎಂಬ ಉದ್ದೇಶದಿಂದ ನಾವು ಸಾಕ್ಷಿಗಳನ್ನು ಪಡೆಯುವುದನ್ನು ತಡೆಹಿಡಿದಿದ್ದೇವೆ ಎಂದರು.

‘ನ್ಯಾಯಾಲಯದಿಂದ ಯಾವುದೇ ವಿಸಿ ಕೇಸ್ ಆಗಲಿ ಮತ್ತು ಎಲ್‌ಐಸಿ ಕೇಸ್‌ಗಳಲ್ಲಿ ತಮಗೆ ಕೊಡಬೇಕಾದಂತ ಹಣವನ್ನು ನಮ್ಮ ನ್ಯಾಯಾಲಯದಲ್ಲಿ ಜಮಾ ಆಗಿದ್ದರೆ ಅವುಗಳನ್ನು ತಕ್ಷಣವೇ ಕೊಡಬೇಕು ಎಂದು ನಮ್ಮ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ ಬುಧವಾರ ನಿರ್ದೇಶನ ನೀಡಲಾಗಿದೆ. ಕಕ್ಷಿದಾರರು ತಮ್ಮ ಹಣದ ಬಗ್ಗೆ ಯಾವುದೇ ರೀತಿಯ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಮತ್ತು ಯಾವುದೇ ದೂರುಗಳಿದ್ದರೆ ನಿಮ್ಮ ವಕೀಲರ ಮೂಲಕ ತಿಳಿಸಿದಲ್ಲಿ ಅಂತಹ ಕೇಸ್‌ಗಳಿಗೆ ಆದ್ಯತೆ ನೀಡಿ ಅವುಗಳನ್ನು ಇತ್ಯರ್ಥ ಪಡಿಸುತ್ತೇವೆ’ ಎಂದು ಹೇಳಿದರು.

ಜಿಲ್ಲೆಯ ಕೋವಿಡ್ ಸ್ಥಿತಿಗತಿ, ಸಿದ್ಧತೆ ಹಾಗೂ ಇನ್ನಿತರ ವಿಷಯಗಳ ಕುರಿತು ಸುಧೀರ್ಘವಾಗಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ನ್ಯಾಯಾಧೀಶರು, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವೀಡ್-19ರ ಸಂಬಂಧಿಸಿದಂತ ಔಷಧಿಗಳನ್ನು ಖುದ್ದಾಗಿ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಅಂಥ ವ್ಯಕ್ತಿಯನ್ನು ಹೊಂ ಕ್ವಾರೆಂಟೈನ್ ಮಾಡಿ ಮನೆಯಲ್ಲೇ ಚಿಕಿತ್ಸೆ ಕೊಡುವುದು ಉತ್ತಮ. ಹೆಚ್ಚಿನ ರೀತಿಯಲ್ಲಿ ಆಕ್ಸಿಜನ್ ಶುದ್ಧವಾಗಿಟ್ಟುಕೊಳ್ಳುವುದು ಒಳ್ಳೆಯದು ಮತ್ತು ಆಸ್ಪತ್ರೆಯಲ್ಲಿ ಬೆಡ್‌ಗಳ ಕುರಿತು ಚರ್ಚೆ ಮಾಡಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಜನ ಆರ್.ಎ. ಸೇರಿದಂತೆ ಇತರರು ಇದ್ದರು.

ಸಾರಾಂಶ

ಕೋವಿಡ್ ಇಡೀ ವಿಶ್ವವನ್ನೇ ಬಾಧಿಸುತ್ತಿದ್ದು, ಅನೇಕ ಜನರು ಸಾವಿಗೀಡಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರು ಸ್ವಪ್ರೇರಣೆಯಿಂದ ಕೋವಿಡ್-19ರ ಲಸಿಕೆ ಪಡೆದುಕೊಂಡರೆ ಕೊರೊನಾ ನಿಯಂತ್ರಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.