ಮೈಸೂರು: ‘ದೇಶದಲ್ಲಿ ಕೋವಿಡ್ ನಿಯಂತ್ರಣ ಹಾಗೂ ವಿಶ್ವದ 95ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸುವ ಮೂಲಕ ಪ‍್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಲ್ಲಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅಭಿಪ್ರಾಯಪಟ್ಟರು.
‘ಕೊರೊನಾ ಸೋಂಕಿಗೆ ಕಡಿಮೆ ಅವಧಿಯಲ್ಲಿ ಭಾರತವು ಲಸಿಕೆ ಕಂಡು ಹಿಡಿಯಿತು. ಲಸಿಕೆ ಅಭಿಯಾನ ಆರಂಭವಾಗಿ ಒಂದು ವರ್ಷವಾಗಿದ್ದು, ಇದುವರೆಗೂ 157 ಕೋಟಿ ಡೋಸ್ ನೀಡಲಾಗಿದೆ. ಇದರಿಂದ ಕೋವಿಡ್ ಮೂರನೇ ಅಲೆಯ ತೀವ್ರತೆ ಕಡಿಮೆಯಾಗಿದೆ. ಆರೋಗ್ಯ ಕ್ಷೇತ್ರ ಸುಧಾರಣೆ ಕಂಡಿದೆ. ವಿಶ್ವಸಂಸ್ಥೆಯೇ ಮೂರು ಬಾರಿ ಮೋದಿ ಅವರ ಕಾರ್ಯವನ್ನು ಪ್ರಶಂಸಿಸಿದೆ’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮೋದಿ ಅವರೊಂದಿಗೆ ದೇಶದ ವಿಜ್ಞಾನಿಗಳು, ವೈದ್ಯರು, ಶುಶ್ರೂಷಕರು, ಉದ್ಯಮಿಗಳು, ವಾರಿಯರ್‌ಗಳು ಹೋರಾಡಿದ್ದಾರೆ. ಹೀಗಾಗಿಯೇ ಐದು ಬಲಾಢ್ಯ ದೇಶಗಳು ಮಾಡುವ ಕೆಲಸವನ್ನು ಭಾರತವೊಂದೇ ಮಾಡಿದೆ. ಲಸಿಕೆ ನೀಡಿಕೆಯಿಂದಾಗಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿದೆ. ಆಧಾರ್ ಕಾರ್ಡ್ ಸೇರಿದಂತೆ ಒಂದು ಗುರುತಿನ ಚೀಟಿಯೂ ಇಲ್ಲದ 67 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ’ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ‘ಕೋವಿಡ್ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲ. ಟೂಲ್ ಕಿಟ್ ಮೂಲಕ ಲಸಿಕೆ ಕುರಿತು ಅಪನಂಬಿಕೆಗಳನ್ನು ಮೂಡಿಸಿತು. ಜವಾಬ್ದಾರಿಯುತ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಲಿಲ್ಲ. ಮೇಕೆದಾಟು ಪಾದಯಾತ್ರೆ ಮೂಲಕ ಸೋಂಕನ್ನು ವೇಗವಾಗಿ ಹರಡಿತು’ ಎಂದು ಮಹೇಶ್ ವಾಗ್ದಾಳಿ ನಡೆಸಿದರು.
‘ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪಾದಯಾತ್ರೆ ಮಾಡಬೇಕಿತ್ತು. ಆದರೆ, ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಿಸಿದ್ದಾರೆ’ ಎಂದು ದೂರಿದರು.
‘ದೇಶದಲ್ಲಿ ಕೋವಿಡ್ ನಿರ್ವಹಣೆ ಹಾಗೂ ವಿಶ್ವದ 95ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸುವ ಮೂಲಕ ಪ‍್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಲ್ಲಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅಭಿಪ್ರಾಯಪಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.