ಮೈಸೂರು: ‘ಎಚ್.ಡಿ.ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡವಂತೆ ಮಾತನಾಡುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ಸ್ಥಾನಕ್ಕೆ ಅಗೌರವ ತೋರಿರುವ ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಹಕ್ಕುಚ್ಯುತಿ ಜಾರಿಗೊಳಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕುಮಾರಸ್ವಾಮಿ ಅವರ ಇತ್ತೀಚಿನ ವರ್ತನೆಗೆ ಏನು ಕಾರಣವಿರಬಹುದು ಎಂಬುದನ್ನು ನಿಮ್ಹಾನ್ಸ್‌ನ ಮನೋವೈದ್ಯರಲ್ಲಿ ಕೇಳಿದ್ದೇನೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು, ಬಿಜೆಪಿಯಿಂದ ಸುಪಾರಿ ಪಡೆದಿರಬೇಕು, ಹತಾಶ ಮನೋಭಾವ ಕಾಡುತ್ತಿರಬೇಕು ಮತ್ತು ಜೆಡಿಎಸ್‌ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಚಾರ ಪಡೆದುಕೊಳ್ಳುವ ಉದ್ದೇಶ ಇರಬೇಕು... ಹೀಗೆ ನಾಲ್ಕು ಕಾರಣಗಳನ್ನು ಆ ವೈದ್ಯರು ಪಟ್ಟಿ ಮಾಡಿದ್ದಾರೆ’ ಎಂದರು.
‘ಕುಮಾರಸ್ವಾಮಿ ಅವರೇ, ನೀವು ಸಂಪೂರ್ಣ ಹತಾಶರಾಗಿದ್ದೀರಿ. 2023ರ ಚುನಾವಣೆ ಕೊನೆಯ ಚುನಾವಣೆ ಎಂದಿದ್ದೀರಿ. ಅದನ್ನು ನೀವು ಹೇಳಬೇಕಿಲ್ಲ. ಜನರೇ ನಿಮ್ಮ ಕೊನೆಯ ಚುನಾವಣೆಯನ್ನಾಗಿ ಮಾಡುವರು. ಕಣ್ಣೀರು ಸುರಿಸಿ ಅನುಕಂಪ ಗಿಟ್ಟಿಸುವುದು, ಕಾಂಗ್ರೆಸ್ ಮುಖಂಡರ ತೇಜೋವಧೆ ಮಾಡಿ ಮತ ಗಿಟ್ಟಿಸಬಹುದು ಎಂಬ ಆಸೆ ಬಿಟ್ಟುಬಿಡಿ. ಅಂತಹ ಗಿಮಿಕ್ ಈಗ ನಡೆಯಲ್ಲ. ಜನರು ಬುದ್ಧವಂತರಾಗಿದ್ದಾರೆ’ ಎಂದು ಹರಿಹಾಯ್ದರು.
‘ಜಾತಿಗಳನ್ನು ಒಡೆಯುವುದೇ ನಿಮ್ಮ ಹುನ್ನಾರ. ಒಕ್ಕಲಿಗ ಸಮುದಾಯ ನಿಮ್ಮಿಂದ ದೂರವಾಗುತ್ತಿದೆ. ಕುರುಬ ಮತ್ತು ಒಕ್ಕಲಿಗ ಸಮುದಾಯದ ನಡುವೆ ದೊಡ್ಡ ಕಂದಕ ಸೃಷ್ಟಿಸುವುದು ನಿಮ್ಮ ಹುನ್ನಾರ. ಇಲ್ಲಿಯವರೆಗೆ ಅದನ್ನೇ ಮಾಡಿದ್ದೀರಿ. ಆದರೆ ಒಕ್ಕಲಿಗ ಸಮುದಾಯ ನಿಮ್ಮ ಮಾತನ್ನು ನಂಬಲ್ಲ. ನೀವು 14 ತಿಂಗಳು ಅಧಿಕಾರದಲ್ಲಿದ್ದಾಗ ಒಕ್ಕಲಿಗ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದೀರಾ? ಆ ಸಮುದಾಯವನ್ನು ಬಳಸಿಕೊಂಡು ನೀವು ಸಿಎಂ ಆದರೇ ಹೊರತು, ಅವರಿಗೆ ಏನೂ ಕೊಡಲಿಲ್ಲ. ಮಂಡ್ಯದಲ್ಲಿ ಒಕ್ಕಲಿಗ ಸಮುದಾಯದ 10 ಲಕ್ಷ ಮತಗಳು ಇದ್ದರೂ ನಿಮ್ಮ ಮಗನನ್ನು ಏಕೆ ಗೆಲ್ಲಿಸಲು ಆಗಿಲ್ಲ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ರಾತ್ರಿ ಭೇಟಿ ಮಾಡಲ್ಲ’
ಬಿ.ಎಸ್.ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದೇ ಐ.ಟಿ ದಾಳಿಗೆ ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಯಾರನ್ನಾದರೂ ಭೇಟಿ ಆಗುವುದಾದರೆ ಹಗಲು ಹೊತ್ತಲ್ಲೇ, ಎಲ್ಲರೆದುರಲ್ಲೇ ಆಗುವರು. ರಾತ್ರಿ ಹೊತ್ತಲ್ಲಿ, ಟವೆಲ್ ಹಾಕಿ ಮುಖ ಮುಚ್ಚಿಕೊಂಡು ಭೇಟಿ ಆಗುವುದಿಲ್ಲ. ಕುಮಾರಸ್ವಾಮಿ ಅವರೇ, ನೀವು ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ. ಸುಳ್ಳು ಹೇಳುತ್ತಾ ಕಾಲಹರಣ ಮಾಡಬೇಡಿ’ ಎಂದು ತಿರುಗೇಟು ನೀಡಿದರು.
‘ಎಚ್.ಡಿ.ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡವಂತೆ ಮಾತನಾಡುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ಸ್ಥಾನಕ್ಕೆ ಅಗೌರವ ತೋರಿರುವ ಅವರ ವಿರುದ್ಧ ವಿಧಾನಸಭಾಧ್ಯಕ್ಷರು ಹಕ್ಕುಚ್ಯುತಿ ಜಾರಿಗೊಳಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.