ಶ್ರೀರಂಗಪಟ್ಟಣ: ತಾತ್ವಿಕ ಭಿನ್ನಾ ಭಿಪ್ರಾಯದಿಂದ ವಿಘಟನೆಗೊಂಡಿ ರುವ ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಶೀಘ್ರ ಒಗ್ಗೂಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೋಷಿತ ವರ್ಗದ ಜನರನ್ನು ಮತ್ತಷ್ಟು ಶೋಷಣೆಗೆ ಈಡು ಮಾಡುತ್ತಿವೆ. ಮತ್ತೆ ಸಾಮಾಜಿಕ, ಆರ್ಥಿಕ ಅಸಮಾನತೆ ಸೃಷ್ಟಿಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಬಂದಿದೆ. ರೈಲು, ವಿಮಾನ ಇತರ ಉದ್ಯಮಗಳನ್ನು ಖಾಸಗೀಕರಣ ಮಾಡಿ ಹಿಂದುಳಿದವರ ಉದ್ಯೋಗ ಕಸಿದುಕೊಳ್ಳಲಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರ ಪ್ರತಿಭಟಿಸುವ ಹಕ್ಕನ್ನೇ ದಮನಿಸಲಾಗು ತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
1978ರ ಭೂ ಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ಕೃಷಿ ಜಮೀನು ಕಾರ್ಪೊರೇಟ್ ಕುಳಗಳ ತೆಕ್ಕೆಗೆ ಸೇರುವಂತೆ ಸಂಚು ರೂಪಿಸಿದೆ. ಭೂ ಮಾಲೀಕರು ತಮ್ಮದೇ ಜಮೀನಿನಲ್ಲಿ ಕೂಲಿಯಾಳುಗಳಾಗಿ ದುಡಿಯುವಂತಾಗುತ್ತದೆ. ದಲಿತರಿಗೆ ಈ ತಿದ್ದುಪಡಿ ಮಾರಕ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ–2020 ಜಾರಿಗೆ ತರುವ ಮೂಲಕ ಮನುವಾದವನ್ನು ಈ ದೇಶದಲ್ಲಿ ಪುನರ್ ಸ್ಥಾಪಿಸಲು ಮುಂದಾಗಿದೆ. ಆರ್‌ಎಸ್‌ಎಸ್ ಸಂಘಟನೆಯ ಗುಪ್ತ ಕಾರ್ಯಸೂಚಿಯನ್ನು ಈ ಶಿಕ್ಷಣ ನೀತಿಯ ಮೂಲಕ ಸರ್ಕಾರ ಅನುಷ್ಠಾ ನಕ್ಕೆ ತರುತ್ತಿದೆ. ಬಾಲ ಕಾರ್ಮಿಕ ಪದ್ಧತಿ, ಜಾತಿ ಆಧಾರಿತ ಕಸುಬು ಅವಲಂಬನೆಗೆ ಇದು ಪ್ರೇರೇಪಿಸಲಿದ್ದು, ಹಿಂದುಳಿದ ಸಮಾಜವನ್ನು ನೂರು ವರ್ಷ ಹಿಂದೆ ತಳ್ಳುವ ಅಂಶ ಇದರಲ್ಲಿವೆ ಎಂದರು.
ಉಪನ್ಯಾಸಕ ಕ್ಯಾತನಹಳ್ಳಿ ಚಂದ್ರಣ್ಣ ಮಾತನಾಡಿದರು. ದಸಂಸ ಮುಖಂಡರಾದ ಗಂಜಾಂ ರವಿಚಂದ್ರ, ಕುಬೇರಪ್ಪ, ತೂಬಿನಕೆರೆ ಪ್ರಸನ್ನ, ಚಿಕ್ಕಬ್ಯಾಡರಹಳ್ಳಿ ದೇವರಾಜು, ಮುಂಡುಗದೊರೆ ಮೋಹನ್, ಶಿವಳ್ಳಿ ಪುಟ್ಟಸ್ವಾಮಿ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ತಾತ್ವಿಕ ಭಿನ್ನಾ ಭಿಪ್ರಾಯದಿಂದ ವಿಘಟನೆಗೊಂಡಿ ರುವ ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳು ಶೀಘ್ರ ಒಗ್ಗೂಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಕರೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.