ADVERTISEMENT

ವಿಷಾನಿಲ ಸೋರಿಕೆ: 10 ಎಕರೆ ಬೆಳೆ ನಾಶ, ಪಜ್ಞೆ ತಪ್ಪಿದ್ದ ಜಾನುವಾರು, ಘಟಕ ಸ್ಥಗಿತ

500 ಮೀಟರ್‌ ವ್ಯಾಪ್ತಿ ಆವರಿಸಿದ ವಿಷಗಾಳಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:25 IST
Last Updated 17 ಜನವರಿ 2022, 15:25 IST
ಕಾರೇಕಟ್ಟೆ ಗ್ರಾಮದಲ್ಲಿ ರಾಸಾಯನಿಕ ಘಟಕದ ವಿಷಾನಿಲ ಸೋರಿಕೆಯಿಂದ ಹಾನಿಯಾಗಿರುವ ಬೆಳೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು
ಕಾರೇಕಟ್ಟೆ ಗ್ರಾಮದಲ್ಲಿ ರಾಸಾಯನಿಕ ಘಟಕದ ವಿಷಾನಿಲ ಸೋರಿಕೆಯಿಂದ ಹಾನಿಯಾಗಿರುವ ಬೆಳೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು   

ಮಂಡ್ಯ: ತಾಲ್ಲೂಕಿನ ಕಾರೇಕಟ್ಟೆ ಗ್ರಾಮ ಸಮೀಪದ ಖಾಸಗಿ ರಾಸಾಯನಿಕ ಘಟಕದಿಂದ ಸಲ್ಫರಿಕ್‌ ಆ್ಯಸಿಡ್‌ ಅನಿಲ ಬಿಡುಗಡೆಯಾಗಿ ಸುತ್ತಮುತ್ತಲಿನ 10 ಎಕರೆಯಷ್ಟು ಬೆಳೆ ನಾಶವಾಗಿದೆ. ಜಾನುವಾರುಗಳ ಮೇಲೂ ಪರಿಣಾಮ ಬೀರಿದ ಕಾರಣ ಜಿಲ್ಲಾಡಳಿತ ಘಟಕವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ವಿವಿಧ ರಾಸಾಯನಿಕ ತಯಾರಿಸುವ ಉದ್ದೇಶದಿಂದ ಕಳೆದ ಮೂರು ದಿನಗಳ ಹಿಂದಷ್ಟೇ ಕೀರ್ತಿ ರಾಸಾಯನಿಕ ಘಟಕ ಚಟುವಟಿಕೆ ಆರಂಭಿಸಿತ್ತು. ಮಂಗಳವಾರ ಬೆಳಿಗ್ಗೆ ರೈತರು ಜಮೀನಿಗೆ ಭೇಟಿ ನೀಡಿದಾಗ ಅಕ್ಕಪಕ್ಕದ ಜಮೀನಿನ ರಾಗಿ, ಭತ್ತ, ಕಬ್ಬು ಒಣಗಿ ಹೋಗಿರುವುದು ಪತ್ತೆಯಾಗಿದೆ. ತೆಂಗಿನ ಮರಗಳಿಗೂ ತೊಂದರೆಯಾಗಿರುವುದು ಗೊತ್ತಾಗಿದೆ. ಸುತ್ತಮುತ್ತಲಿನ ಜಮೀನನಲ್ಲಿ ರೈತರು ಹಸು ಸಾಕಣೆ ಮಾಡುತ್ತಾರೆ, ವಿಷಾನಿಲ ಸೇವನೆಯಿಂದ ಹಸುಗಳು ಪ್ರಜ್ಞೆ ತಪ್ಪಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಎಚ್ಚೆತ್ತುಕೊಂಡ ರೈತರು ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಾಲ್ಲೂಕು ಪಂಚಾಯಿತಿ ಇಒ, ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬೆಳೆ ಒಣಗಿ ಹೋಗಿರುವುದು ಪತ್ತೆಯಾಗಿದೆ. ನಂತರ ತಹಶೀಲ್ದಾರ್‌ ಚಂದ್ರಶೇಖರ್‌ ಶಂ ಗಾಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ವಿಷಾನಿಲ ಬಿಡುಗಡೆಯಾಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ತಕ್ಷಣ ಘಟಕದ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.

ADVERTISEMENT

‘ವಿಷಾನಿಲ ಗಾಳಿಯಲ್ಲಿ ಹರಡಿರುವ ಕಾರಣ ಸುತ್ತಮುತ್ತಲಿನ 500 ಮೀಟರ್‌ ವ್ಯಾಪ್ತಿಯಲ್ಲಿ ಹಾನಿಯುಂಟಾಗಿದೆ. ಕೆರೆ, ಕಟ್ಟೆಗಳ ನೀರು ಮಲಿನವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಸ್ಪಷ್ಟ ವರದಿ ನೀಡುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ. ಮಾದರಿ ಸಂಗ್ರಹಿಸಲಾಗಿದ್ದು ಬುಧವಾರ ಸ್ಪಷ್ಟ ಮಾಹಿತಿ ಸಿಗಲಿದೆ’ ಎಂದು ತಹಶೀಲ್ದಾರ್‌ ಚಂದ್ರಶೇಖರ್‌ ಶಂ ಗಾಳಿ ತಿಳಿಸಿದರು.

ಗ್ರಾಮಸ್ಥರ ಪ್ರತಿಭಟನೆ: ಬೆಳೆ ಹಾನಿ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಘಟಕದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಾರೇಕಟ್ಟೆ ಗ್ರಾಮದಲ್ಲಿ ಗೊಬ್ಬರ ತಯಾರಿಕೆಗೆ ಅನುಮತಿ ಪಡೆದು, ರಾಸಾಯನಿಕ ತಯಾರಿಕಾ ಮಾಡಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲ ಜಮೀನುಗಳಿಗೆ ರಾಸಾಯನಿಕ ಮಿಶ್ರಿತ ನೀರು ಹರಿದು ಬೆಳೆ ನಾಶವಾಗುತ್ತಿದೆ ಎಂದು ಆರೋಪಿಸಿದರು.

ಘಟಕದಿಂದ ವಿಷಾನಿಲ ಸೋರಿಕೆ ಆಗುತ್ತಿದೆ, ರಾಸಾಯನಿಕ ಮಿಶ್ರಿತ ನೀರು ಭೂಮಿಗೆ ಸೇರ್ಪಡೆಯಾಗುತ್ತಿರುವುದರಿಂದ ಅಂತರ್ಜಲ ಕಲುಷಿತವಾಗಿದೆ, ಇದರಿಂದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ, ಇದಲ್ಲದೇ ರೈತರು ಮತ್ತು ಸುತ್ತಮುತ್ತಲ ಗ್ರಾಮಸ್ಥರಿಗೂ ಆರೋಗ್ಯ ಸಮಸ್ಯೆ ಎದುರಾಗಿದೆ. ಜಾನುವಾರುಗಳಿಗೂ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ರೈತರಿಗೆ ಪರಿಹಾರ ನೀಡಬೇಕು. ರಾಸಾಯನಿಕ ತಯಾರಿಕಾ ಘಟಕಗಳನ್ನು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಬೇಕು. ಕೃಷಿ ಭೂಮಿಯಲ್ಲಿ ಸ್ಥಾಪಿಸಿ ನಿಯಮ ಉಲ್ಲಂಘಿಸಲಾಗಿದೆ. ಘಟಕದ ಮಾಲೀಕರ ಜೊತೆ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿರುವ ಕಾರಣ ಘಟಕಕ್ಕೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರಾದ ಎಂ.ಜಿ.ತಿಮ್ಮೇಗೌಡ, ಸದಸ್ಯ ಪ್ರಕಾಶ್, ಮುಖಂಡರಾದ ದೊಡ್ಡಗರುಡನಹಳ್ಳಿ ಚಂದ್ರು, ಚಿಕ್ಕಣ್ಣ, ಪುಟ್ಟಸ್ವಾಮಿ ಭಾಗವಹಿಸಿದ್ದರು.

***

ಅನುಮತಿ ಪಡೆಯದ ಘಟಕ

ರಾಸಾಯನಿಕ ಘಟಕವು ಹಲವು ನಿಯಮಗಳನ್ನು ಉಲ್ಲಂಘಿಸಿ ಚಟುವಟಿಕೆ ನಡೆಸಿರುವುದು ಬೆಳಕಿಗೆ ಬಂದಿದೆ. ಘಟಕ ಸ್ಥಾಪನೆಗೆ ಕೈಗಾರಿಕಾ ಇಲಾಖೆಯಿಂದ ಆಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆದಿಲ್ಲ.

‘ಕೈಗಾರಿಕಾ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಫ್ಯಾಕ್ಟರೀಸ್‌ ಮತ್ತು ಬಾಯ್ಲರ್ಸ್‌ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಿವಲಿಂಗಯ್ಯ ತಿಳಿಸಿದರು.

***

ಕೆಎಸ್‌ಪಿಸಿಬಿಗೆ ಮಾಹಿತಿಯೇ ಇಲ್ಲ

ಜಿಲ್ಲೆಯ ಯಾವುದೇ ಕಡೆ ರಾಸಾಯನಿಕ ಸೋರಿಕೆಯಾದರೆ ಆ ಕುರಿತು ಅಧ್ಯಯನ ನಡೆಸಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು, ತಜ್ಞರು ತಕ್ಷಣ ಅಲ್ಲಿಗೆ ತೆರಳಿ ಮಾದರಿ ಸಂಗ್ರಹಿಸಬೇಕು. ಆದರೆ, ಮಂಡ್ಯದ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಘಟನೆಯ ಮಾಹಿತಿಯೇ ಇರಲಿಲ್ಲ. ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕೂಡ ಅವರಿಗೆ ನಿರ್ದೇಶನ ನೀಡಿಲ್ಲ.

ಘಟನೆ ಕುರಿತು ಮಾಹಿತಿ ಪಡೆಯಲು  ಕೆಎಸ್‌ಪಿಸಿಬಿ ಜಿಲ್ಲಾ ಪರಿಸರ ಅಧಿಕಾರಿ ಹೇಮಲತಾ ಅವರಿಗೆ  ‘ಪ್ರಜಾವಾಣಿ’ ಕರೆ ಮಾಡಿದಾಗ, ‘ಆ ವಿಷಯವೇ ನಮಗೆ ಗೊತ್ತಿಲ್ಲ, ಆ ಊರು ಎಲ್ಲಿ ಬರುತ್ತದೆ ಎಂಬುದೂ ನಮಗೆ ತಿಳಿದಿಲ್ಲ’ ಎಂದರು.

ಸಾರಾಂಶ

ತಾಲ್ಲೂಕಿನ ಕಾರೇಕಟ್ಟೆ ಗ್ರಾಮ ಸಮೀಪದ ಖಾಸಗಿ ರಾಸಾಯನಿಕ ಘಟಕದಿಂದ ಸಲ್ಪ್ಯೂರಿಕ್‌ ಆಸಿಡ್‌ ಅನಿಲ ಬಿಡುಗಡೆಯಾಗಿ ಸುತ್ತಮುತ್ತಲಿನ 10 ಎಕರೆಯಷ್ಟು ಬೆಳೆ ನಾಶವಾಗಿದೆ. ಜಾನುವಾರುಗಳ ಮೇಲೂ ಪರಿಣಾಮ ಬೀರಿದ ಕಾರಣ ಜಿಲ್ಲಾಡಳಿತ ಘಟಕವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.