ADVERTISEMENT

ಮೈಷುಗರ್‌; ಪೂರ್ವಭಾವಿ ಸಭೆ ಇಂದು

ಅ.18ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಾತುಕತೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 3:42 IST
Last Updated 17 ಅಕ್ಟೋಬರ್ 2021, 3:42 IST

ಮಂಡ್ಯ: ಮೈಷುಗರ್‌ ಆರಂಭಿಸುವ ವಿಷಯವಾಗಿ ಮುಖ್ಯಮಂತ್ರಿ ಅವರು ಅ.18 ರಂದು ಸಭೆ ಕರೆದಿದ್ದು, ಈ ಕಾರಣದಿಂದ ಅ.17ರಂದು ಪೂರ್ವ ಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಹೇಳಿದರು.

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್‌ ಕಾರ್ಖಾನೆ ಆರಂಭಿಸುವಂತೆ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅ.18 ರಂದು ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಈ ಭಾಗವಾಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಅ.17ರಂದು ಜಿಲ್ಲೆಯ ಎಲ್ಲ ಜನಪ್ರತಿ ನಿಧಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಹೋರಾಟಗಾರರು ಮತ್ತು ರೈತ ಮುಖಂಡರ ಸಭೆ ಕರೆದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹತ್ತಾರು ರೈತ ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರು 34 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಅವರು, ನಗರದಲ್ಲಿ ಧರಣಿ ಸ್ಥಳಕ್ಕೆ ಬಂದು ಕಾರ್ಖಾನೆ ಪುನಾರಾರಂಭ ಸಂಬಂಧ ವಿಸ್ತೃತ ಚರ್ಚೆಗಾಗಿ ಬೆಂಗಳೂರಿಗೆ ಹೋರಾಟಗಾರರನ್ನು ಆಹ್ವಾನಿಸಿದ ಬೆನ್ನಲ್ಲೇ ಧರಣಿ ಸ್ಥಳದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.

ADVERTISEMENT

ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕು ಎನ್ನುವು ದಷ್ಟೇ ನಮ್ಮ ಪ್ರಮುಖ ಬೇಡಿಕೆ ಆಗಿದೆ. ಹೀಗಾಗಿ ಕಳೆದೊಂದು ತಿಂಗಳಿಂದ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಜಿಲ್ಲೆಯ ಬಹುತೇಕ ಎಲ್ಲ ಹಾಲಿ, ಮಾಜಿ ಶಾಸಕರು, ಸಚಿವರು, ಜನಪ್ರತಿನಿಧಿಗಳು, ಸಾಹಿತಿಗಳು, ವೃತ್ತಿಪರ ವಲಯಗಳ ಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖಂಡರು ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ಅವರ ಮಾತಿನ ಮೇಲೆ ಭರವಸೆಯಿದ್ದು, ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಲಾ ಗುವುದು ಎಂದು ಸರ್ಕಾರ ಘೋಷಣೆ ಮಾಡಿದರೆ ಧರಣಿ ವಾಪಸ್‌ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಖಾನೆ ಆರಂಭ ಸಂಸದರ ಹೊಣೆ ಅಲ್ಲವೇ?: ಮೈಷುಗರ್ ಕಾರ್ಖಾನೆ ವಿಚಾರವಾಗಿ ಇಷ್ಟೆಲ್ಲಾ ಹೋರಾಟ, ಚರ್ಚೆ ನಡೆಯುತ್ತಿದ್ದರೂ ಸಂಸದೆ ಸುಮ ಲತಾ ಅಂಬರೀಷ್ ಅವರು ಧರಣಿ ಸ್ಥಳಕ್ಕೆ ಬಂದಿಲ್ಲ. ಕಾರ್ಖಾನೆ ಆರಂಭ ಸಂಸದರ ಹೊಣೆಗಾರಿಕೆಯಲ್ಲವೇ? ಮೈಷುಗರ್ ಯಾರೋ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ರಾಜ್ಯದ ಸಂಪತ್ತು. ಹೀಗಾಗಿ ಇದರ ರಕ್ಷಣೆ ಅನಿವಾರ್ಯವಿದ್ದು, ಸಂಸದರು ಅರ್ಥ ಮಾಡಿಕೊಳ್ಳಬೇಕು ಎಂದರು.

ಇದನ್ನೇ ಆಹ್ವಾನ ಅಂದುಕೊಳ್ಳಿ: ಜಿಲ್ಲೆಯ ಯಾವ ಜನಪ್ರತಿನಿಧಿಗಳು, ಮುಖಂಡರಿಗೂ ವೈಯಕ್ತಿಕವಾಗಿ ಆಹ್ವಾನ ನೀಡುತ್ತಿಲ್ಲ. ಇದನ್ನೇ ಆಹ್ವಾನವೆಂದು ತಿಳಿದು ಅ.17ರ ಸಭೆಗೆ ಬರಬೇಕು. ಮುಖ್ಯಮಂತ್ರಿ ಅವರ ಆಹ್ವಾನ, ಮುಂದಿನ ವಿಷಯಗಳ ಬಗ್ಗೆ ಚರ್ಚಿಸಬೇಕು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಬರಬೇಕು ಎಂದು ಮನವಿ ಮಾಡಿದರು.

ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ, ಮುಖಂಡರಾದ ಮುದ್ದೇಗೌಡ, ಸಿ.ಕುಮಾರಿ, ಎಂ.ಬಿ.ಶ್ರೀನಿವಾಸ್, ಮಂಜುನಾಥ್, ಸಿ.ಎಂ.ದ್ಯಾವಪ್ಪ, ಇಂಡುವಾಳು ಚಂದ್ರಶೇಖರ್, ಕೀಲಾರ ಕೃಷ್ಣ ಇದ್ದರು.

ಸಾರಾಂಶ

ಮಂಡ್ಯ: ಮೈಷುಗರ್‌ ಆರಂಭಿಸುವ ವಿಷಯವಾಗಿ ಮುಖ್ಯಮಂತ್ರಿ ಅವರು ಅ.18 ರಂದು ಸಭೆ ಕರೆದಿದ್ದು, ಈ ಕಾರಣದಿಂದ ಅ.17ರಂದು ಪೂರ್ವ ಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.