ಮಂಡ್ಯ: ‘ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆಧುನಿಕತೆ ಜೀವನಶೈಲಿಯಿಂದ ಉಂಟಾಗುತ್ತಿರುವ ಒತ್ತಡ, ಖಿನ್ನತೆ ನಿಯಂತ್ರಣಕ್ಕೆ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು’ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್ ತಿಳಿಸಿದರು.
ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಂಗಳವಾರ ನಡೆದ ಮಾನಸಿಕ ಆರೋಗ್ಯ ಜಾಗೃತಿ ಜಾಥಾಕ್ಕೆ ಚಾಲನೆ ನಿಡಿ ಅವರು ಮಾತನಾಡಿದರು.
‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 10 ರಷ್ಟು ಜನರಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ವಾಸ್ತವವಾಗಿ ಶೇ 10ರಷ್ಟು ಜನರು ಮಾತ್ರ ಆರೋಗ್ಯವಾಗಿದ್ದಾರೆ ಎಂದರೂ ತಪ್ಪಲ್ಲ. ಅಷ್ಟೊಂದು ಒತ್ತಡದಲ್ಲಿ ಜನರು ಇಂದು ಜೀವಿಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು’ ಎಂದು ಹೇಳಿದರು.
‘ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ಒತ್ತಡ, ಖಿನ್ನತೆಯಿಂದ ಬಳಲುತ್ತಾರೆ. ಇಂಥವರು ಹೆಚ್ಚಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಕ್ರೌರ್ಯಗಳು ನಡೆಯುವುದಕ್ಕೂ ಮಾನಸಿಕ ಖಾಯಿಲೆಗಳೇ ಕಾರಣವಾಗಿವೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೋಗ ಲಕ್ಷಣ ಕಂಡುಬಂದರೂ ಪ್ರತಿ ತಾಲ್ಲೂಕಿನಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಒತ್ತಡ, ಖಿನ್ನತೆ ಭಾವ ಉಂಟಾದರೇ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಸಲಹೆ ಪಡೆಯಬಹುದು’ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶರಾದ ಎಂ.ನಳಿನಿ ಕುಮಾರಿ ಮಾತನಾಡಿ ‘ಪ್ರತೀ 5 ವ್ಯಕ್ತಿಗಳಲ್ಲಿ ಒಬ್ಬರು ಮಾನಸಿಕ ಖಾಯಿಲೆಗಳಿಗೆ ಒಳಗಾಗಿರುತ್ತಾರೆ. ಹೀಗಾಗಿ ಪ್ರತಿಯೊಬ್ಬರು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳುವತ್ತ ಗಮನ ಹರಿಸಬೇಕು. ಉತ್ತಮ ಚಟುವಟಿಕೆಗಳನ್ನು ರೂಢಿಸಿಕೊಳ್ಳುವ ಮೂಲಕ ಮನೋರೋಗ ನಿಯಂತ್ರಣ ಮಾಡಬೇಕು’ ಎಂದರು.
‘ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದ್ದು ಇಂತಹ ಜಾಥಾಗಳನ್ನು ಆಯೋಜಿಸುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ’ ಎಂದರು.
ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಕಾರ್ಯಕ್ರಮದಲ್ಲಿ ಡಾ. ಕೆ.ಪಿ. ಅಶ್ವಥ್, ಡಾ.ಶಶಿಧರ್, ಡಾ. ಜವರೇಗೌಡ ಇದ್ದರು.
‘ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆಧುನಿಕತೆ ಜೀವನಶೈಲಿಯಿಂದ ಉಂಟಾಗುತ್ತಿರುವ ಒತ್ತಡ, ಖಿನ್ನತೆ ನಿಯಂತ್ರಣಕ್ಕೆ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು’ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.