ADVERTISEMENT

ಕೈಗಾರಿಕೆ ಸ್ಥಾಪನೆಯಲ್ಲಿ ತೀರಾ ಹಿಂದುಳಿದ ಜಿಲ್ಲೆ

ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ, ಇರುವ ಕೈಗಾರಿಕೆಗಳಿಗೂ ಉಳಿಗಾಲವಿಲ್ಲ

ಎಂ.ಎನ್.ಯೋಗೇಶ್‌
Published 11 ಅಕ್ಟೋಬರ್ 2021, 2:14 IST
Last Updated 11 ಅಕ್ಟೋಬರ್ 2021, 2:14 IST
ತೂಬಿನಕೆರೆ ಕೈಗಾರಿಕಾ ಪ್ರದೇಶದ ನೋಟ
ತೂಬಿನಕೆರೆ ಕೈಗಾರಿಕಾ ಪ್ರದೇಶದ ನೋಟ   

ಮಂಡ್ಯ: ಮೈಸೂರು– ಬೆಂಗಳೂರು ನಗರಗಳ ನಡುವೆ ಸಣ್ಣ ಹಳ್ಳಿಯಂತಿರುವ ಮಂಡ್ಯದಲ್ಲಿ ಕೈಗಾರಿಕಾ ಪ್ರಗತಿ ತೀರಾ ಹಿಂದುಳಿದಿದೆ. ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇರುವ ಕಾರ್ಖಾನೆಗಳಿಗೂ ಉಳಿಗಾಲ ಇಲ್ಲವಾಗಿದೆ.

ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರಮುಖ ಉತ್ತೇಜನ ನೀಡಲಾಗಿದೆ. ಪಕ್ಕದ ರಾಮನಗರ, ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು ಅಪಾರ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಆದರೆ, ಸಕ್ಕರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯಾವುದೇ ಉತ್ತೇಜನ ಇಲ್ಲದ ಕಾರಣ ಇಲ್ಲಿಯ ಯುವಜನರು ಅನ್ಯಜಿಲ್ಲೆ, ನಗರಗಳತ್ತ ವಲಸೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಉದ್ಯಮಿ ಸ್ನೇಹಿ ವಾತಾವರಣವೂ ಇಲ್ಲದ ಕಾರಣ ಇಲ್ಲಿ ಸ್ಥಾಪನೆಯಾದ ಕೈಗಾರಿಕಾ ಘಟಕಗಳು ಬಲುಬೇಗನೆ ಬಾಗಿಲು ಮುಚ್ಚಿದ ಸಾಕಷ್ಟು ಉದಾಹರಣೆಗಳಿವೆ.

ಅಸಿಟೇಟ್‌ ಕಾರ್ಖಾನೆ ಸೇರಿ ಹಲವು ಐತಿಹಾಸಿಕ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಕೈಗಾರಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ನಗರದ ಹೊರವಲಯದಲ್ಲಿ ಹಲವು ಕೈಗಾರಿಕಾ ಸಮುಚ್ಛಯ ಸ್ಥಾಪನೆ ಮಾಡಿದ್ದರೂ ಅಲ್ಲಿ ನೆರವಿನ ಕೊರತೆಯಿಂದಾಗಿ ಸಮರ್ಪಕ ರೀತಿಯಲ್ಲಿ ಕೈಗಾರಿಕಾ ಘಟಕಗಳನ್ನು ಮುನ್ನಡೆಸಲು ಸಾಧ್ಯವಾಗದೇ ಉದ್ಯಮಿಗಳು ಪರದಾಡುತ್ತಿದ್ದಾರೆ.

ADVERTISEMENT

ಸರ್ಕಾರ ಕೂಡ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸಿದ್ದು ಇಲ್ಲಿಗೆ ಯಾವುದೇ ಪ್ರಮುಖ ಕೈಗಾರಿಕೆಗಳನ್ನು ಮಂಜೂರು ಮಾಡಿಲ್ಲ. ಇಲ್ಲಿಯ ಜನರು, ಸಂಘಟನೆಗಳು, ಜನಪ್ರತಿನಿಧಿಗಳು ಕೂಡ ಈ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ. ಯಾವುದೇ ನಗರ ಪ್ರವೇಶಿಸುವಾಗ ಹೊರವಲಯಗಳಲ್ಲಿ ಬೃಹತ್‌ ಕೈಗಾರಿಕೆಗಳು ಕಾಣ ಸಿಗುತ್ತವೆ. ಆದರೆ, ಮಂಡ್ಯ ಪ್ರವೇಶಿಸುವಾಗ ಹಳ್ಳಿ ಪ್ರವೇಶಿಸಿದಂತಾಗುತ್ತದೆ, ಕೈಗಾರಿಕೆಗಳ ದರ್ಶನವೇ ಸಿಗುವುದಿಲ್ಲ.

ಎಸ್ಟೇಟ್‌ ದುರುಪಯೋಗ: ಜಿಲ್ಲಾ ವ್ಯಾಪ್ತಿಯಲ್ಲಿ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಸಹಕಾರದೊಂದಿಗೆ 4 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ
ಗೊಳಿಸಲಾಗಿದೆ. ಗೆಜ್ಜಲಗೆರೆ, ಹೆಬ್ಬಾಳ ಎರಡನೇ ಹಂತ, ತೂಬಿನಕೆರೆ, ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳಿವೆ. ಆದರೆ, ಮದ್ದೂರು ತಾಲ್ಲೂಕು ಕುದುರಗುಂಡಿ ಬಳಿ ಭೂಮಿ ಮಂಜೂರಾಗಿದ್ದರೂ ಅದನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ.

ಕೈಗಾರಿಕಾ ಉದ್ದೇಶಕ್ಕೆ ಭೂಮಿ ಪಡೆದ ಉದ್ಯಮಿಗಳು ತಮ್ಮ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲ ಉದ್ಯಮಿಗಳು ಕೈಗಾರಿಕೆ ತೆರೆಯುವ ಉದ್ದೇಶದಿಂದ ಭೂಮಿ ಪಡೆದು ಅವುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ ಎಂಬ ದೂರುಗಳೂ ದಾಖಲಾಗಿವೆ. ಈಚೆಗೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವರು, ಕೈಗಾರಿಕಾ ಸ್ಥಳಗಳನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಆಕ್ಷೇಪ ಎತ್ತಿದ್ದರು.

‘ಕೈಗಾರಿಕೆಗಾಗಿ ಭೂಮಿ ಪಡೆದ ಉದ್ಯಮಿಗಳು ಮಂಡ್ಯ ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ವಹಿವಾಟು ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ಶೀಘ್ರವೇ ಪತ್ತೆಹಚ್ಚಿ ಅಂತಹ ಭೂ ಪ್ರದೇಶವನ್ನು
ವಾಪಸ್ ಪಡೆಯಬೇಕು. ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಉದ್ಯಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ
ಬೇಕು. ಜಿಲ್ಲಾ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಬಳಸದೇ ಉಳಿದಿರುವ ಭೂಮಿಯನ್ನು ಗುರುತಿಸಬೇಕು’ ಎಂದು ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಘಟಕ ಸ್ಥಾಪನೆಯಲ್ಲಿ ಪ್ರಗತಿ ಇಲ್ಲ: ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಂಡ್ಯದಲ್ಲಿ ನೋಂದಣಿಯಾಗುವ ಕೈಗಾರಿಕಾ ಘಟಕಗಳ ಸಂಖ್ಯೆ ತೀರಾ ಕಡಿಮೆ ಇದೆ. 2016–17ರಲ್ಲಿ 275 ಘಟಕ ನೋಂದಣಿ ಮಾಡಲಾಗಿತ್ತು. ಪ್ರತಿ ವರ್ಷ ಅವುಗಳ ಸಂಖ್ಯೆ ಕಡಿಮೆಯಾಗಿಯೇ ಮುಂದುವರಿದಿತ್ತು. ಪ್ರತಿ ವರ್ಷ ಘಟಕಗಳ ಸಂಖ್ಯೆ ಸಾವಿರ ಮೀರುತ್ತಿರಲಿಲ್ಲ. 2020–21ನೇ ಸಾಲಿನಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದು, 1,333 ಘಟಕಗಳನ್ನು ನೋಂದಣಿ ಮಾಡಲಾಗಿದೆ. ಇದರಿಂದ ₹ 224 ಕೋಟಿ ಹಣ ತೊಡಗಿಸಲಾಗಿದೆ. 5,926 ಉದ್ಯೋಗ ಸೃಷ್ಟಿ ಮಾಡಲಾಗಿದೆ.

‘ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳಿಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ಬಂಡವಾಳ ಹೂಡಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಶಿವಲಿಂಗಯ್ಯ ಹೇಳಿದರು.

‘ಗ್ರೀನ್‌ ಬೆಲ್ಟ್‌’ ಪ್ರಗತಿಗೆ ಅಡ್ಡಿ: ಜಿಲ್ಲೆಯ ಸುತ್ತಲೂ ನೀರಾವರಿ ಆಧಾರಿಕ ಕೃಷಿ ಪ್ರದೇಶ (ಗ್ರೀನ್‌ ಬೆಲ್ಟ್‌) ಇರುವ ಕಾರಣ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂಬ ಅಭಿಪ್ರಾಯವೂ ಇದೆ. ಕೆಆರ್‌ಎಸ್‌ ಜಲಾಶಯ ಸಮೀಪವಿದ್ದು, ನೀರಿನ ಹರಿವು ಹೆಚ್ಚಾಗಿದ್ದು ಕೈಗಾರೀಕರಣಕ್ಕೆ ತೊಂದರೆಯಾಗಿದೆ ಎಂದು ಕೆಲವರು ಹೇಳುತ್ತಾರೆ.

‘ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕುಗಳಲ್ಲಿ ನೀರಾವರಿಯೇ ಇಲ್ಲ. ಅಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿವೆಯೇ? ಇದು ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳು ಹೇಳುವ ಮಾತಾಗಿದ್ದು ಇಂಥವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲಡೆ ಜಾಗವಿದ್ದು, ಅದನ್ನು ಅಭಿವೃದ್ಧಿಗೊಳಿಸಿ, ಸರ್ಕಾರದಿಂದ ಅನುದಾನ ತರುವುದು ಮುಖ್ಯವಾಗಬೇಕು’ ಎಂದು ಉದ್ಯಮಿ ರಮೇಶ್‌ ಹೇಳಿದರು.

ಕೈಗಾರಿಕೆ ಬೇಡ, ಕಲ್ಲು ಗಣಿ ಬೇಕು!: ‘ಜಿಲ್ಲೆಯ ರಾಜಕಾರಣಿಗಳಿಗೆ ಕೈಗಾರಿಕೆಗಳಿಗಿಂತ, ಕಲ್ಲು ಗಣಿ ಸ್ಥಾಪಿಸುವುದೇ ಮುಖ್ಯವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಶಾಸಕರವರೆಗೆ ಎಲ್ಲರೂ ಕಲ್ಲು ಗಣಿ ಸ್ಥಾಪನೆಗೆ ಪ್ರಮುಖ ಆದ್ಯತೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಕಲ್ಲುಗಣಿಗಳೇ ಅವರಿಗೆ ಆಧಾರವಾಗಿವೆ’ ಎಂದು ಯುವ ಉದ್ಯಮಿಯೊಬ್ಬರು ಆರೋಪಿಸಿದರು.

‘ಕೈಗಾರಿಕೆ ಸ್ಥಾಪನೆಯಾದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಯುವಕರಿಗೆ ಉದ್ಯೋಗ ದೊರೆಯುತ್ತದೆ. ಕಲ್ಲು ಗಣಿಗಳಿಂದ ರಾಜಕಾರಣಿಗಳ ಜೇಬು ತುಂಬುತ್ತದೆ. ಪರಿಸರ ನಾಶವಾಗುತ್ತದೆ. ಇದರಿಂದ ಬಡವರಿಗೆ ಯಾವುದೇ ಉಪಯೋಗವಿಲ್ಲ’ ಎಂದರು.

ಕೆ.ಆರ್‌.ಪೇಟೆಗೆ ಸೀಮಿತವಾದ ಸಚಿವ: ‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಕೆ.ಆರ್‌.ಪೇಟೆ ತಾಲ್ಲೂಕಿಗಷ್ಟೇ ಸಚಿವರಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದರೂ ಜಿಲ್ಲೆಯ ಕೈಗಾರಿಕೆಗಳ ಸ್ಥಿತಿ ಅಭಿವೃದ್ಧಿಗೊಳಿಸುವ ಮನಸ್ಸು ಅವರಿಗಿಲ್ಲ. ಅವರು ಉದ್ಯಮಿಯಾಗಿದ್ದರೂ ಜಿಲ್ಲೆಯ ಉದ್ದಿಮೆಗಳು ಅಭಿವೃದ್ಧಿ ಹೊಂದುತ್ತಿಲ್ಲ’ ಎಂದು ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಬರುವ ಸಣ್ಣ ಪುಟ್ಟ ಯೋಜನೆಗಳನ್ನೂ ಕೆ.ಆರ್‌.ಪೇಟೆ ತಾಲ್ಲೂಕಿಗೆ ಕೊಂಡೊಯ್ಯುತ್ತಿದ್ದಾರೆ. ಸಚಿವರು ದೊಡ್ಡ ಘಟಕಗಳನ್ನು ಮಂಡ್ಯ ಜಿಲ್ಲೆಗೆ ತರಲು ಪ್ರಯತ್ನಿಸಬೇಕು’ ಎಂದು ಒತ್ತಾಯಿಸಿದರು.

ಸಾರಾಂಶ

ಮೈಸೂರು– ಬೆಂಗಳೂರು ನಗರಗಳ ನಡುವೆ ಸಣ್ಣ ಹಳ್ಳಿಯಂತಿರುವ ಮಂಡ್ಯದಲ್ಲಿ ಕೈಗಾರಿಕಾ ಪ್ರಗತಿ ತೀರಾ ಹಿಂದುಳಿದಿದೆ. ಇಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇರುವ ಕಾರ್ಖಾನೆಗಳಿಗೂ ಉಳಿಗಾಲ ಇಲ್ಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.