ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಶೀಘ್ರ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಂ.ಸಂತೋಷ್ ಆಗ್ರಹಿಸಿದರು.
ಶ್ರೀರಂಗಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಜಲಾಶಯದಲ್ಲಿ 122 ಅಡಿಗಳಷ್ಟು ನೀರಿನ ಸಂಗ್ರಹ ಇದೆ. ಬೇಸಿಗೆ ಬೆಳೆ ಮತ್ತು ನಿಂತಿರುವ ಬೆಳೆ ಉಳಿಸಿಕೊಳ್ಳಲು ಸಾಕಾಗುವಷ್ಟು ನೀರು ಲಭ್ಯವಿದೆ. ಬೇಸಿಗೆ ಬೆಳೆಗೆ ಬಿತ್ತನೆ ಆರಂಭಿಸಲು ಇದು ಸಕಾಲ. ಆದರೆ, ಬೆಳೆಗೆ ನೀರು ಕೊಡುವ ಕುರಿತು ಜಿಲ್ಲಾಡಳಿತ ಇದುವರೆಗೆ ತೀರ್ಮಾನ ಪ್ರಕಟಿಸಿಲ್ಲ. ಹಾಗಾಗಿ ರೈತರಲ್ಲಿ ಆತಂಕ ಉಂಟಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಸಭೆ ಕರೆದು ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಬೇಕು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಬಾರಿ ಬೇಸಿಗೆಯಲ್ಲಿ ತಡವಾಗಿ ನಾಲೆಗಳಿಗೆ ನೀರು ಹರಿಸಿದ ಕಾರಣ ಸಾಕಷ್ಟು ರೈತರು ಬೆಳೆ ಹಾಕದೆ ನಷ್ಟ ಅನುಭವಿಸಿದ್ದಾರೆ. ನೀರು ಹರಿಸುವುದನ್ನು ತಡ ಮಾಡಿದರೆ ತಾಲ್ಲೂಕು ಕಚೇರಿ ರೈತರ ಜತೆಗೂಡಿ ಧರಣಿ ಆರಂಭಿಸಲಾಗುವುದು ಎಂದು ಎಂ.ಸಂತೋಷ್ ಎಚ್ಚರಿಸಿದರು.
ಜೆಡಿಎಸ್ ರೈತ ದಳದ ಅಧ್ಯಕ್ಷ ದೊಡ್ಡಪಾಳ್ಯ ಡಿ.ಎಂ.ರವಿ ಮಾತನಾಡಿ, ರೈತರಿಗೆ ರಸಗೊಬ್ಬರ ಸರಿಯಾಗಿ ಸಿಗುತ್ತಿಲ್ಲ. ಬಿತ್ತನೆ ಬೀಜ ಕೂಡ ದೊರೆಯುತ್ತಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡಿದ ರೈತರಿಗೆ ಇದುವರೆಗೆ ಹಣ ಕೊಟ್ಟಿಲ್ಲ. ಸಹಕಾರ ಸಂಘಗಳಲ್ಲಿ ಸಾಲ ಪಡೆದಿರುವ ರೈತರಿಗೆ ಸಾಲ ಮರುಪಾವತಿಗೆ ಒತ್ತಾಯಿಸಲಾ
ಗುತ್ತಿದೆ ಎಂದು ಸಮಸ್ಯೆ ತೋಡಿಕೊಂಡರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಜಿಲ್ಲಾ ಘಟಕದ ಉಪಾಧ್ಯಕ್ಷ ಕಿರಂಗೂರು ಕುಮಾರಸ್ವಾಮಿ ಮಾತನಾಡಿದರು.
ಚಂದಗಾಲು ರಮೇಶ್ ಸಭೆಯಲ್ಲಿ ಭಾಗವಹಿಸಿದ್ದರು.
ಕೆಆರ್‌ಎಸ್ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಶೀಘ್ರ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಂ.ಸಂತೋಷ್ ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.