ADVERTISEMENT

ಬೋರ್‌ವೆಲ್ ದುರಸ್ತಿಗೆ ಅಧಿಕ ವೆಚ್ಚ: ಆರೋಪ

ಮದ್ದೂರು ಪುರಸಭೆ ಸಾಮಾನ್ಯ ಸಭೆ: ಸದಸ್ಯರಿಂದ ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 5:56 IST
Last Updated 21 ಜನವರಿ 2022, 5:56 IST
ಮದ್ದೂರು ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಹೇಶ್, ಸುಮಿತ್ರಾ ರಮೇಶ್, ಮಂಜುನಾಥ್ ಇದ್ದರು
ಮದ್ದೂರು ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಹೇಶ್, ಸುಮಿತ್ರಾ ರಮೇಶ್, ಮಂಜುನಾಥ್ ಇದ್ದರು   

ಮದ್ದೂರು: ಪಟ್ಟಣ ವ್ಯಾಪ್ತಿಯ ಬೋರ್‌ವೆಲ್ ದುರಸ್ತಿಗಾಗಿ ಹಣ ದುರ್ಬಳಕೆ ಮಾಡಿರುವುದರಿಂದ ಅಧಿಕ ವೆಚ್ಚವಾಗಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರುಗಳು ಅಧಿಕಾರಿಗ ಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.

ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಪುರಸಭೆ ಸದಸ್ಯರಾದ ಮನೋಜ್ ಕುಮಾರ್ (ಪುಟ್ಟು), ಪ್ರಿಯಾಂಕ ಅಪ್ಪುಗೌಡ, ಸಚ್ಚಿನ್, ಸಿದ್ದು, ಕಮಲ್ ನಾಥ್ ಎದ್ದು ನಿಂತು, ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಬೋರ್‌ವೆಲ್ ದುರಸ್ತಿ ಮಾಡಿಸುವ ಸಲುವಾಗಿ ಸುಮಾರು ₹ 10 ಲಕ್ಷ ವೆಚ್ಚ ಮಾಡಲಾಗಿದೆ. ಕೆಲವು ಬೋರ್‌ವೆಲ್‌ಗಳಿಗೆ ₹ 50 ಸಾವಿರ ಬಿಲ್ ಮಾಡಲಾಗಿದೆ. ಕೆಲವು ಬೋರ್‌ವೆಲ್ ದುರಸ್ತಿ ಮಾಡಿ ಒಂದು ತಿಂಗಳ ಬಳಿಕ ಮತ್ತೆ ಬಿಲ್ ಮಾಡಲಾಗಿದೆ ಎಂದು ದೂರಿದರು.

ಅಧಿಕಾರಿಗಳು, ಗುತ್ತಿಗೆದಾರರು ಕರ್ತವ್ಯಲೋಪ ಎಸಗಿದ್ದಾರೆ. ಇದರ ಬಗ್ಗೆ ಸೂಕ್ತ ವಿವರಣೆ ನೀಡದೆ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಮನವೊಲಿಸಲು ಮುಂದಾದರೂ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ದುರಸ್ತಿ ಮಾಡಿದ ಹಳೆಯ ಉಪಕರಣಗಳನ್ನು ಪರಿಶೀಲನೆ ಮಾಡಲು ಪುರಸಭೆಯ ಗೋದಾಮಿನ ಬಾಗಿಲು ತೆರಸಿ, ಹಳೆಯ ಉಪಕರಣಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದರು.

ಅದಕ್ಕೂ ತೃಪ್ತಿಯಾಗದ ಸದಸ್ಯರನ್ನು ಪುರಸಭಾಧ್ಯಕ್ಷ ಸುರೇಶ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಮನವೊಲಿಸಿ, ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಇನ್ನೆರಡು ದಿನಗಳಲ್ಲಿ ವಿವರಣೆ ನೀಡುವುದಾಗಿ ಹೇಳಿದರು. ಬಳಿಕ ಸಭೆ ಮುಂದುವರಿಯಿತು.

ಸದಸ್ಯ ಪ್ರವೀಣ್ ಮಾತನಾಡಿ, ಪುರಸಭೆ ವ್ಯಾಪ್ತಿಯ ನಿವೇಶನದಾರರಿಗೆ ಸೇರಿದ ನಿವೇಶನಕ್ಕೆ ಮಾತ್ರ ಕಂದಾಯ ನಿಗದಿಮಾಡಬೇಕು. ಅದನ್ನು ಬಿಟ್ಟು ಖಾಲಿ ನಿವೇಶನಕ್ಕೂ ಕಂದಾಯ ನಿಗದಿಪಡಿಸಿದರೆ ಸಾರ್ವಜನಿಕರಿಗೆ ಹೊರೆಯಾಗುತ್ತದೆ. ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ವ್ಯಾಪ್ತಿಯ ಹೋಟೆಲ್ ಸೇರಿದಂತೆ ಹಲವಾರು ವಾಣಿಜ್ಯ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ಮೊತ್ತ ಹೆಚ್ಚು ಪಡೆಯಲಾಗುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು, 2 ವರ್ಷಗಳಿಂದ ಕೋವಿಡ್‌ನಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿ ಇದ್ದಾರೆ. ದರವನ್ನು ಕೂಡಲೇ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.

ಪುರಸಭೆ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿಸಮಿತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಮುಖ್ಯಾಧಿಕಾರಿ ಮಂಜುನಾಥ್ ಇದ್ದರು.

ಸಾರಾಂಶ

ಮದ್ದೂರು: ಪಟ್ಟಣ ವ್ಯಾಪ್ತಿಯ ಬೋರ್‌ವೆಲ್ ದುರಸ್ತಿಗಾಗಿ ಹಣ ದುರ್ಬಳಕೆ ಮಾಡಿರುವುದರಿಂದ ಅಧಿಕ ವೆಚ್ಚವಾಗಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರುಗಳು ಅಧಿಕಾರಿಗ ಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.