ಕೆರಗೋಡು: ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯು ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ಸಮೀಪದ ಗಂಟಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಜನರ ಸಮಸ್ಯೆ ಪರಿಹರಿಸುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಪಹಣಿಯಲ್ಲಿನ ದೋಷ ಸರಿಪಡಿಸುವುದು, ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ವಹಿಸುವುದು, ಗ್ರಾಮದ ಅರ್ಹರಿಗೆ ಪಿಂಚಣಿ ಸೌಲಭ್ಯದ ಪರಿಶೀಲನೆ ಹಾಗೂ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲೇ ಆದೇಶ ನೀಡಲಾಗುತ್ತಿದೆ ಎಂದರು.
ಗಂಟಗೌಡನಹಳ್ಳಿ ಗ್ರಾಮದ ಕಟ್ಟೆ ಒತ್ತುವರಿ ಜಾಗ ತೆರವು, ಸರ್ವೇ ನಂ 118/1 ರಲ್ಲಿ ಒತ್ತುವರಿಯಾಗಿದ್ದ 20 ಗುಂಟೆ ಜಾಗ ತೆರವು ಮಾಡಿ ಸಾರ್ವಜನಿಕ ಸ್ಮಶಾನಕ್ಕೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಘನತ್ಯಾಜ್ಯ ವಿಲೇವಾರಿ ಘಟಕದ ಜಾಗಕ್ಕೆ ಬದಲಿ ನಿವೇಶನ ನೀಡಲು ಸರ್ವೆ ಮಾಡಲಾಯಿತು. ಚೋಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಶ್ವತಿ, ಸರ್ವೇ ನಂಬರ್ 90ರಲ್ಲಿ 9 ಎಕರೆ ಜಾಗ ಅಳತೆ ಮಾಡಿ ಜಿಲ್ಲೆಗೆ ಒಂದು ಎಲ್ ಎಲ್ ಆರ್, ಡಿಎಲ್‌ಗೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆ ವಶಕ್ಕೆ ನೀಡಲು ಕ್ರಮ ವಹಿಸಲಾಯಿತು.
ಎಲ್ಲ ಇಲಾಖೆಗಳಿಂದ ಸುಮಾರು 450 ಅರ್ಜಿ ಸ್ವೀಕರಿಸಿ, 150ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಅರ್ಹ ಫಲಾನುಭವಿಗಳು ಹಾಗೂ ರೈತರಿಗೆ ಸಂವಾದ, ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅನ್ನಪ್ರಾಶನ, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ, ಮತದಾರರ ಗುರುತಿನ ಚೀಟಿ, ರೈತರಿಗೆ ಕೃಷಿ ಪರಿಕರಗಳ ವಿತರಣೆ, ಮಂಜೂರಾತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಿದರು.
ಅಂಗನವಾಡಿ ಮತ್ತು ಶಾಲಾ ಆವರಣವನ್ನು ಸ್ವಚ್ಛತೆ ಮಾಡುವ ಮೂಲಕ, ಸಸಿ ನೆಡುವ ಮೂಲಕ ಜಿಲ್ಲಾ, ಉಪವಿಭಾಗ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದರು.
ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಗ್ರೇಡ್ 2 ತಹಶೀಲ್ದಾರ್ ವಸಂತಕುಮಾರ್, ಉಪ ತಹಶೀಲ್ದಾರ್ ಡಿ.ತಮ್ಮಣ್ಣಗೌಡ, ಭಾಸ್ಕರ್, ಮೂಗೂರೇಗೌಡ, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ವೀಣಾ, ಮುಖಂಡರಾದ ಶಿವಕುಮಾರ್ ಆರಾಧ್ಯ, ಸುರೇಶ್ ಇದ್ದರು.
ಕೆರಗೋಡು: ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯು ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.