ಮಂಡ್ಯ: ಕರ್ತವ್ಯಕ್ಕೆ ಅಡ್ಡಿಪಡಿಸಿ ತಾಲ್ಲೂಕು ಕಚೇರಿಯಲ್ಲಿ ಮೇಲಧಿಕಾರಿ ಗಳನ್ನು ಅವಾಚ್ಯವಾಗಿ ನಿಂದಿಸಿದ ಕೆಆರ್‌ಎಸ್ ಪಕ್ಷದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಗುರುವಾರ ಮನವಿ ನೀಡಿದರು.
ಪಾಂಡವಪುರ ತಾಲ್ಲೂಕಿನ ಕಚೇರಿಯಲ್ಲಿ ಜ.18ರಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 9 ಕಾರ್ಯಕರ್ತರು ತಾಲ್ಲೂಕು ಕಚೇರಿಯ ಸಿಬ್ಬಂದಿಯೊಂದಿಗೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾಗ, ವಿಚಾರಿಸಲು ಬಂದ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಏಕ ವಚನದಲ್ಲಿ ಮಾತನಾಡಿ ಗದರಿದ್ದಾರೆ. ಇದು ಖಂಡನೀಯ ಎಂದು ಆರೋಪಿಸಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಬಗ್ಗೆಯೂ ಕೀಳಾಗಿ ನಿಂದಿಸಿದ್ದಾರೆ. ಇದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಅವರನ್ನೂ ನಿಂದಿಸಿದ್ದಾರೆ. ಈ ಕಾರ್ಯಕರ್ತರನ್ನು ಬಂಧಿಸಿದರೆ ಸಾಲದು; ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಕಚೇರಿಹಗೆ ನುಗ್ಗಿ ದಾಂದಲೆ ಮಾಡಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿದರು.
ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿರುವ ಪಕ್ಷದ ಕಾರ್ಯಕರ್ತರು, ಇನ್ನೂ ಕೆಳ ಹಂತದ ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಭಯ ಎಲ್ಲ ಇಲಾಖೆಯಲ್ಲೂ ಇದೆ. ಅಧಿಕಾರಿಗಳ ಮೇಲೆ ಸುಳ್ಳು ದೂರುಗಳನ್ನು ನೀಡಿರುವುದನ್ನು ಕೈಬಿಡಬೇಕು. ಜೊತೆಗೆ ಇದನ್ನು ತಡೆಯುವ ಉದ್ದೇಶದಿಂದ ಕಠಿಣ ಕಾನೂನು ಜಾರಿಯಾಗಬೇಕು. ಸೂಕ್ತ ರಕ್ಷಣೆಯನ್ನು ಪ್ರತಿ ಇಲಾಖೆಯಲ್ಲೂ ಮಾಡಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂಗೌಡ, ತಮ್ಮಣ್ಣಗೌಡ, ದೇವರಾಜು, ಗುಣಶೇಖರ್, ರಮೇಶ್ ಇದ್ದರು.
ಕರ್ತವ್ಯಕ್ಕೆ ಅಡ್ಡಿಪಡಿಸಿ ತಾಲ್ಲೂಕು ಕಚೇರಿಯಲ್ಲಿ ಮೇಲಧಿಕಾರಿ ಗಳನ್ನು ಅವಾಚ್ಯವಾಗಿ ನಿಂದಿಸಿದ ಕೆಆರ್‌ಎಸ್ ಪಕ್ಷದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಗುರುವಾರ ಮನವಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.