ಮಳವಳ್ಳಿ: ತಾಲ್ಲೂಕಿನಲ್ಲಿ ಕುರುಬ ಸಮುದಾಯ ಪ್ರಬಲವಾಗಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಪಕ್ಷಭೇದ ಮರೆತು ಸಮುದಾಯದ ಜನರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಸುಬ್ರಮಣ್ಯ ಹೇಳಿದರು.
ಪಟ್ಟಣದ ಭಕ್ತ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣದಲ್ಲಿ ಭಾನುವಾರ ನಡೆದ ತಾಲ್ಲೂಕು ಘಟಕದ ಪುನರ್ ರಚನೆ, ಸಂಘಟನೆ ಹಾಗೂ ಅಭಿವೃದ್ಧಿ ವಿಚಾರ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದಾಯದ ಹೆಸರಿನಲ್ಲಿ ಎಷ್ಟೇ ಸಂಘಗಳು ಇದ್ದರೂ ಎಲ್ಲವೂ ಒಂದೇ ಎನ್ನುವ ಭಾವನೆ ಮೂಡಬೇಕು. ತಾಲ್ಲೂಕು ಸಂಘದ ಪುನರ್ ಸ್ಥಾಪನೆಗೆ ಇರುವ ಅಡೆತಡೆಗಳನ್ನು ಸ್ಥಳೀಯರೇ ಬಗೆಹರಿಸಬೇಕು ಎಂದರು.
ಪಟ್ಟಣದಲ್ಲಿನ ಭಕ್ತ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ವಸತಿ ನಿಲಯದ ಅಭಿವೃದ್ಧಿ ಕಾರ್ಯವು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಸಮುದಾಯದ ಮುಖಂಡರು ಅಭಿವೃದ್ಧಿಗೆ ಮುಂದಾಗಿ ರುವುದು ಶ್ಲಾಘನೀಯ. ವಿದ್ಯಾರ್ಥಿ ನಿಲಯದ ಅಭಿವೃದ್ಧಿ ಜತೆಗೆ ಬೇಕಾದ ಆರ್ಥಿಕ ಸಹಾಯವನ್ನು ರಾಜ್ಯ ಸಂಘ ಮಾಡುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಸುರೇಶ್ ಮಾತನಾಡಿ, 50 ವರ್ಷಗಳಿಂದ ಸಂಘದ ಲೆಕ್ಕಪರಿಶೋಧನೆ ವರದಿ ನೀಡಿಲ್ಲ. ಮರುನೋಂದಣಿಯೂ ಆಗಿಲ್ಲ. ತಾಲ್ಲೂಕಿನ ಹಲವರು ಲೋಕಾಯುಕ್ತಕ್ಕೆ ದೂರು ನೀಡಿರುವುದು ಇದಕ್ಕೆ ಕಾರಣ. ಕೆಲವರ ಜತೆ ಮಾತುಕತೆ ನಡಸಿ ಸಮಸ್ಯೆ ಬಗೆಹರಿಸಿದ್ದು, ಇನ್ನೂ ಒಂದು ಪ್ರಕರಣ ಬಾಕಿಯಿದೆ. ಅವರು ಪ್ರಕರಣದಿಂದ ಹಿಂದೆ ಸರಿದರೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ತಾಲ್ಲೂಕು ಸಂಘಕ್ಕೆ ಹೊಸ ಆಡಳಿತ ಮಂಡಳಿ ರಚನೆ ಮಾಡಬೇಕು. ಎಲ್ಲ ಹೋಬಳಿಗಳಿಂದಲೂ 21 ಸದಸ್ಯರನ್ನು ಆಯ್ಕೆ ಮಾಡುವ ಉದ್ದೇಶ ಇದ್ದು, ಮುಂದಿನ ಜನವರಿಯಲ್ಲಿ ಹೊಸ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಪುರಸಭೆ ಮಾಜಿ ಸದಸ್ಯ ರಾಜು ₹ 25 ಸಾವಿರ, ಸಾಹಳ್ಳಿ ಶಿವಕುಮಾರ್ ₹ 5 ಸಾವಿರ, ಕನಕ ನೌಕರರ ಸಂಘದಿಂದ ₹ 25 ಸಾವಿರ, ಹಲವರು ಸಮುದಾಯದ ಅಭಿವೃದ್ಧಿಗೆ ಧನಸಹಾಯ ನೀಡಿದರು.
ತಾ.ಪಂ.ಮಾಜಿ ಅಧ್ಯಕ್ಷ ಸೋಮಶೇಖರ್ ಅವರು ಶಂಕುಸ್ಥಾಪನೆಯ ದಿನ ಒಂದು ಲಕ್ಷ ರೂಪಾಯಿ ನೀಡುವುದಾಗಿ ಹಾಗೂ ಸಂಘದ ಅಭಿವೃದ್ಧಿಗೆ ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟಬಸವಯ್ಯ 5 ಗುಂಟೆ ಜಾಗ ನೀಡುವುದಾಗಿ ಘೋಷಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಸಾಹಳ್ಳಿ ಶಿವಕುಮಾರ್, ಶ್ರೀಧರ್, ರಾಜು ಸೇರಿದಂತೆ ಹಲವರು ಮಳವಳ್ಳಿ ಪಟ್ಟಣದ ಕನಕಭವನ ಶಂಕುಸ್ಥಾಪನೆ ಮುನ್ನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್.ಸುರೇಶ್ ಅವರು ಸ್ಥಳೀಯ ಶಾಸಕರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಸಮುದಾಯ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು ಎಂದು ಆರೋಪಿಸಿ ಈ ಬಗ್ಗೆ ಅಧ್ಯಕ್ಷರು ಉತ್ತರ ನೀಡಬೇಕು ಎಂದರು. ಈ ವೇಳೆ ಗದ್ದಲದ ವಾತಾವರಣ ಉಂಟಾಗಿತ್ತು.
ಜಿಲ್ಲಾ ಅಧ್ಯಕ್ಷ ಎಂ.ಎಲ್.ಸುರೇಶ್ ಅವರು ಸ್ಪಷ್ಟನೆ ನೀಡಿದ ನಂತರ ಕಾರ್ಯಕ್ರಮ ನಡೆಯಿತು.
ಹೊಸಕೋಟೆ ನಗರಸಭೆ ಆಯುಕ್ತ ರಮೇಶ್, ರಾಜ್ಯ ಘಟಕದ ಉಪಾಧ್ಯಕ್ಷ ಪುಟ್ಟಬಸವಯ್ಯ, ಖಂಜಾಚಿ ದೇವರಾಜುಸುಬ್ಬರಾಯ, ಸಹಕಾರ್ಯದರ್ಶಿ ಎಂ.ಡಿ.ಉಮೇಶ್, ಸಂಘಟನಾ ಕಾರ್ಯದರ್ಶಿ ಸಾವಿತ್ರಮ್ಮ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಶ್ರೀನಿವಾಸ್, ಬಿ.ಕೆ.ರೇವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್, ಖಜಾಂಚಿ ಎಸ್.ಎನ್.ರಾಜು, ಸಹ ಕಾರ್ಯದರ್ಶಿ ಗೌರಮ್ಮ, ಸಂಘಟನಾ ಕಾರ್ಯದರ್ಶಿ ಎಂ.ಲೋಕೇಶ್, ಮುಖಂಡರಾದ ಕೆ.ಸಿ.ಮಂಜುನಾಥ್, ಬೀರೇಶ್, ಸಿದ್ದರಾಮು, ಬಿ.ಎಂ.ಮಂಜುನಾಥ್, ಕೃಷ್ಣ, ಶಿವಮಲ್ಲ, ಮೀನಾಕ್ಷಮ್ಮ, ಮೀನಾಕ್ಷಿ, ಶಿವಣ್ಣ, ಕೆ.ಎಲ್.ಲಿಂಗರಾಜು, ಮಹೇಶ್, ಎಲ್.ಕೆ.ಪ್ರಸನ್ನಕುಮಾರ್ ಇದ್ದರು.
ಮಳವಳ್ಳಿ: ತಾಲ್ಲೂಕಿನಲ್ಲಿ ಕುರುಬ ಸಮುದಾಯ ಪ್ರಬಲವಾಗಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಪಕ್ಷಭೇದ ಮರೆತು ಸಮುದಾಯದ ಜನರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಸುಬ್ರಮಣ್ಯ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.