ಕೊಪ್ಪಳ: ಈ ಭಾಗದ ಸದಾಶಿವ ಪಾಟೀಲ, ಶಂಕರ ಬಿನ್ನಾಳ್, ರಾಮಚಂದ್ರಪ್ಪ ಉಪ್ಪಾರ, ಪರಶುರಾಮ ಬಣ್ಣದ, ಹುಚ್ಚಯ್ಯಸ್ವಾಮಿ ಕಟಿಗಿಹಳ್ಳಿ, ಗೋವಿಂದರಾಜ್ ಬೊಮ್ಲಾಪುರ, ಅಂಬಣ್ಣ ಕೊಪ್ಪರದ, ಹನ್ಮಂತರಾವ್ ಬಂಡಿ ಸೇರಿ ಮುಂತಾದ ಹಿರಿಯರು ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಮಾನಸದಲ್ಲಿ ನೆಲೆಸಿದ್ದಾರೆ.
ಯುವ ಕಲಾವಿದೆ ಅನನ್ಯ ದೇಸಾಯಿ ಇವರ ಆಶೀರ್ವಾದದಿಂದ ಬೆಳೆಯುತ್ತಿದ್ದಾಳೆ.
ಇವರು ಮೂಲತಃ ಯಲಬುರ್ಗಾ ತಾಲ್ಲೂಕಿನ ಜರಗುಂಟಿ ಗ್ರಾಮದವರು. ಜಯತೀರ್ಥ ದೇಸಾಯಿ, ಸಹನಾ ದೇಸಾಯಿ ದಂಪತಿಯ ಹಿರಿಯ ಪುತ್ರಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಂದೂವರೆ ವರ್ಷದವಳಿದ್ದಾಗಲೇ ‘ಉಲ್ಲಾಸದ ಹೂ ಮಳೆ’ ಗೀತೆಯನ್ನು ರಾಗಬದ್ಧವಾಗಿ ಹಾಡುವುದನ್ನು ಕೇಳಿದ ಪಾಲಕರು, ಅವಳ ಸಂಗೀತ ಆಸಕ್ತಿ ಗುರುತಿಸಿದರು.
3ನೇ ತರಗತಿ ಓದುತ್ತಿರುವಾಗ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕೃಪಾಶೀರ್ವಾದದಿಂದ ‘ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ’ದಲ್ಲಿ ಸಂಗೀತಭ್ಯಾಸಕ್ಕೆ ಸೇರಿಸಿದರು. ವಿರೇಶ ಹಿಟ್ನಾಳ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭಿಸಿದರು.
ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡಿ, ಪ್ರಸ್ತುತ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗ ತೆಗೆದುಕೊಂಡು ದ್ವಿತೀಯ ಪಿ.ಯು.ಸಿ.ಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ 92 ಅಂಕ ಪಡೆದು ಉತ್ತೀರ್ಣರಾದದ್ದು ಸಾಮಾನ್ಯ ಸಂಗತಿಯಲ್ಲ. ಸಂಗೀತ ಗುರು ಪಂ.ಕೃಷ್ಣೇಂದ್ರ ವಾಡೀಕರ ಅವರ ಮಾರ್ಗದರ್ಶನದಲ್ಲಿ ಸೀನಿಯರ್ ಪರೀಕ್ಷೆಗೆ ತಯಾರಿಯಲ್ಲಿದ್ದಾರೆ.
ಹಿಂದೂ ಸ್ಥಾನಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಸುಗಮ ಸಂಗೀತ, ಜಾನಪದ, ತತ್ವಪದ, ವಚನ ಗಾಯನ ಹೀಗೆ ಸಂಗೀತದ ಹಲವು ಪ್ರಕಾರಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ‘ಸ್ವರ ಸಂಚಾರ’ ಕಲಾ ತಂಡ ರಚಿಸಿಕೊಂಡು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಎನಿಸಿಕೊಂಡಿದ್ದಾರೆ.
ಸುಮಾರು ಹತ್ತು ವರ್ಷಗಳಿಗೂ ಅಧಿಕ ಕಾಲ 500ಕ್ಕೂ ಹೆಚ್ಚು ಸಂಗೀತ ಕಛೇರಿ ಗಳನ್ನು ನೀಡಿ ಸೈ ಎನಿಸಿಕೊಂಡಿ ದ್ದಾರೆ. ‘ಭಜನ್ ಸಾಮ್ರಾಟ್’ ಜ್ಯೂನಿಯರ್ ಸೀಜನ್-2ರಲ್ಲಿ ಭಾಗವಹಿಸಿ ಫೈನಲ್ ಹಂತದವರೆಗೆ ತಲುಪಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಪ್ರಸಿದ್ಧ ಉತ್ಸವಗಳಲ್ಲಿ ಹಾಡಿ ಭರವಸೆಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ‘ಅನನ್ಯ ದೇಸಾಯಿ’ ಮೂಲಕ ತಮ್ಮ ಸಂಗೀತದ ಸುಧೆ ಹರಿಸುತ್ತಿದ್ದಾರೆ
ಪ್ರತಿಭಾ ಕಾರಂಜಿಯ ಗಾಯನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಮೆಚ್ಚುಗೆ ಗಳಿಸಿದ್ದಾರೆ.
ಈ ಭಾಗದ ಸದಾಶಿವ ಪಾಟೀಲ, ಶಂಕರ ಬಿನ್ನಾಳ್, ರಾಮಚಂದ್ರಪ್ಪ ಉಪ್ಪಾರ, ಪರಶುರಾಮ ಬಣ್ಣದ, ಹುಚ್ಚಯ್ಯಸ್ವಾಮಿ ಕಟಿಗಿಹಳ್ಳಿ, ಗೋವಿಂದರಾಜ್ ಬೊಮ್ಲಾಪುರ, ಅಂಬಣ್ಣ ಕೊಪ್ಪರದ, ಹನ್ಮಂತರಾವ್ ಬಂಡಿ ಸೇರಿ ಮುಂತಾದ ಹಿರಿಯರು ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಮಾನಸದಲ್ಲಿ ನೆಲೆಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.