ಕೋಲಾರ: ‘ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಬಣ್ಣಿಸಿದರು.
ಇಲ್ಲಿ ಶುಕ್ರವಾರ ನಡೆದ ಶಿವಕುಮಾರ ಸ್ವಾಮೀಜಿಗಳ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿಯು ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಶ್ರೀಗಳು ಜಾತಿ, ಧರ್ಮ ಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು. ಅನ್ನ, ವಸತಿ, ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದರು’ ಎಂದು ಸ್ಮರಿಸಿದರು.
‘ಬಸವಣ್ಣರ ಸಿದ್ಧಾಂತ, ತತ್ವಾದರ್ಶಗಳನ್ನು ಮಠದಲ್ಲಿ ಸಾಕಾರಗೊಳಿಸಿದ ಸ್ವಾಮೀಜಿಗಳು 12ನೇ ಶತಮಾನದ ಕಲ್ಯಾಣದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮತ್ತು ದಾಸೋಹ ವೈಭವವನ್ನು ಮತ್ತೆ ನೋಡುವ ಭಾಗ್ಯ ಕರುಣಿಸಿದವರು. ಶ್ರೀಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಕರ್ಯ ಕಲ್ಪಿಸಿದರು’ ಎಂದು ಹೇಳಿದರು.
‘ಬಸವಣ್ಣರು ಸಾಮಾಜಿಕ ಕ್ರಾಂತಿ ಮಾಡಿದ ರೀತಿಯಲ್ಲಿ ಅಕ್ಷರ ಕ್ರಾಂತಿಗಾಗಿ ಬದುಕನ್ನೇ ಮುಡುಪಾಗಿಟ್ಟ ಶಿವಕುಮಾರ ಸ್ವಾಮೀಜಿಗಳು ಎಂದೆಂದಿಗೂ ಅಮರ. ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಅವರು 111 ವರ್ಷಗಳ ತುಂಬು ಜೀವನ ನಡೆಸಿದರು. ಹಸಿದು ಬಂದ ಅತಿಥಿಗಳಿಗೆ ದಾಸೋಹ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ’ ಎಂದರು.
ಅಪರೂಪದ ತಪಸ್ವಿ: ‘ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ’ ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
‘ಜಾತಿ ಹೆಸರಿನಲ್ಲಿ ಮಠ ಹೊಂದಿರುವ ಮಠಾಧೀಶರಿಗೆ ಕತ್ತಲೆಯಲ್ಲಿರುವವರನ್ನು ಬೆಳಕಿಗೆ ತರುವುದು, ಹಸಿದವರಿಗೆ ಅನ್ನ ನೀಡುವುದು, ಬಾಯಾರಿದವರಿಗೆ ನೀರುಣಿಸುವ ಮೂಲಕ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವುದೇ ಮಾನವ ಧರ್ಮವೆಂದು ಸಾರಿದ ಶ್ರೀಗಳು ಧರ್ಮ ಗುರುಗಳಿಗೆ ಮೇಲ್ಪಂಕ್ತಿ ಹಾಕಿದರು’ ಎಂದು ಅಭಿಪ್ರಾಯಪಟ್ಟರು.
ಜಾತ್ಯಾತೀತತೆಗೆ ಬುನಾದಿ: ‘ಜಾತಿಗಳಿಗಿಂತ ಗುಣ ಧರ್ಮವೇ ಮುಖ್ಯವೆಂದು ಪರಿಗಣಿಸಿದ್ದ ಶಿವಕುಮಾರ ಸ್ವಾಮೀಜಿಗಳು ಎಂದಿಗೂ ಜಾತೀಯತೆ ಬಗ್ಗೆ ಪ್ರಸ್ತಾಪಿಸಲಿಲ್ಲ. ಸಮಾಜದಲ್ಲಿ ಜಾತ್ಯಾತೀತತೆ ಬೆಳೆಸಲು ಮಠದ ಮೂಲಕ ಬುನಾದಿ ಹಾಕಿಕೊಟ್ಟರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಕೆ.ಎನ್.ಪರಮೇಶ್ ನುಡಿದರು.
ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್, ಮುಖಂಡರಾದ ಸಚ್ಚಿದಾನಂದ, ಬಸವರಾಜ್ ಚಿಲಕಾಂತಮಠ್, ಶಿವಕುಮಾರ್, ಕೆ.ಬಿ.ಬೈಲಪ್ಪ, ಶ್ರೀನಿವಾಸ್, ಪುನೀತ್, ವೆಂಕಟಕೃಷ್ಣ, ಬಿ.ಎಸ್.ಪ್ರಸಾದ್, ಸುಬ್ಬರಾಯಪ್ಪ. ನಾರಾಯಣಪ್ಪ, ಮಹೇಶ್, ಬಿ.ಸುರೇಶ್, ಬಿ.ಉಮೇಶ್ ಪಾಲ್ಗೊಂಡರು.
‘ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಬಣ್ಣಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.