ಕೋಲಾರ: ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿ ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು.
‘ಧಾರ್ಮಿಕ ಸ್ವಾತಂತ್ರ್ಯವೆಂದರೆ ದೇಶದ ಪ್ರಜೆಗಳು ತಮಗೆ ಇಷ್ಟ ಬಂದ ಮತ, ಧರ್ಮ ಅನುಸರಿಸಬಹುದು. ಯಾವುದೇ ಧರ್ಮದ ವಿಚಾರಗಳನ್ನು ಪ್ರಚಾರ ಮಾಡಬಹುದು. ಇದು ಪ್ರಜೆಗಳ ಮೂಲಭುತ ಹಕ್ಕು. ಆದರೆ, ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು ಕಸಿಯುವ ಸಂವಿಧಾನ ವಿರೋಧಿ ಕ್ರಮ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಂಡಿಸಿದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯು ದೌರ್ಜನ್ಯಕಾರಿ ಸರ್ವಾಧಿಕಾರದ ಕ್ರಮ. ಇದು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರೋಧಿಯಾಗಿದೆ. ದೇಶವನ್ನು ಜಾತಿ ತಾರತಮ್ಯ, ಅಸಮಾನತೆಯ ಆಧಾರದ ಮನುವಾದಿ ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಹುನ್ನಾರ ನಡೆದಿದೆ’ ಎಂದು ಸಿಪಿಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಕಿಡಿಕಾರಿದರು.
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆಯು ಆಳುವ ವರ್ಗವು ಬಯಸಿದಾಗಲೆಲ್ಲಾ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ವಂಚಕ ಜಾತಿ ಪದ್ಧತಿ ಮುನ್ನಡೆಸಲು ನೆರವಾಗುವ ದುರುದ್ದೇಶದಿಂದ ಕೂಡಿದೆ. ಕೋಮುವಾದ, ಜಾತಿ ದ್ವೇಷ ಮುಂದುವರಿಸವು ಮತ್ತು ದುಡಿಯುವ ಜನತೆಯನ್ನು ವಿಭಜಿಸಿ ಆಳಲು, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ಸಂಚು ನಡೆದಿದೆ’ ಎಂದು ದೂರಿದರು.
‘ಈಗಾಗಲೇ ಮತಾಂತರಗೊಂಡಿರುವ ವ್ಯಕ್ತಿಗಳು, ಅಂತಹ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳು ಮತ್ತು ಅದರ ಮುಖಂಡರ ಮೇಲೆ ದಾಳಿ ನಡೆಸಲು ಹೊಸ ಕಾಯ್ದೆ ಕುಮ್ಮಕ್ಕು ನೀಡುತ್ತದೆ. ಕುಟುಂಬದ ಸದಸ್ಯರು, ಸಹವರ್ತಿಗಳು, ಸಹೋದ್ಯೋಗಿಗಳು ಬಲವಂತದ ಮತಾಂತರವೆಂದು ದೂರು ನೀಡಲು ಹೊಸ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಮತಾಂಧ ಪುಂಡರು ಈ ಕಾಯ್ದೆ ದುರುಪಯೋಗ ಪಡಿಸಿಕೊಳ್ಳುತ್ತಾರೆ’ ಎಂದು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಎಂ.ವಿಜಯಕೃಷ್ಣ ಆತಂಕ ವ್ಯಕ್ತಪಡಿಸಿದರು.
ಅಂಕಿತ ಹಾಕಬಾರದು: ‘ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆ ಸೋಗಿನಲ್ಲಿ ಪರೋಕ್ಷವಾಗಿ, ಜಾತಿ ತಾರತಮ್ಯ, ಅಸ್ಪೃಶ್ಯತೆ ಆಚರಣೆ ಪೋಷಿಸಲು ಮತ್ತು ವಂಚಕ ಜಾತಿ ಪದ್ಧತಿಯಲ್ಲಿ ಶೋಷಿತರು ಸಿಲುಕಿ ನರಳುವಂತೆ ಮಾಡುವ ಸಂಚು ನಡೆದಿದೆ. ಹೊಸ ಕಾಯ್ದೆಯು ಅಂತರ್ಜಾತಿ ಮತ್ತು ಅಂತಧರ್ಮೀಯ ವೈವಾಹಿಕ ಹಕ್ಕನ್ನು ನಿರ್ಬಂಧಿಸುತ್ತದೆ’ ಎಂದು ಪ್ರತಿಭಟನಾಕಾರರ ಕಳವಳ ವ್ಯಕ್ತಪಡಿಸಿದರು.
‘ಯಾವುದೇ ಧರ್ಮದ ಜನ ಮತ್ತೊಂದು ಧರ್ಮಕ್ಕೆ ಬದಲಾಗುತ್ತಾರೆ ಎಂದಾದರೆ ಆ ಧರ್ಮದ ಧಾರ್ಮಿಕ ಮುಖಂಡರು, ಪ್ರತಿಪಾದಕರು ತಮ್ಮ ಮತಗಳಲ್ಲಿರುವ ಲೋಪದೋಷ, ಸಮಸ್ಯೆ ನಿವಾರಿಸಬೇಕು. ಧರ್ಮವನ್ನೇ ಹೀಯಾಳಿಸುವುದು ಸರಿಯಲ್ಲ. ಸರ್ವಾಧಿಕಾರಿ ಕಾನೂನುಗಳ ಮೂಲಕ ಜಾರಿಗೆ ತರುವುದು ನ್ಯಾಯವಲ್ಲ. ರಾಜ್ಯಪಾಲರು ಈ ಕಾಯ್ದೆಗೆ ಅಂಕಿತ ಹಾಕಬಾರದು. ಸರ್ಕಾರ ಈ ಜನವಿರೋಧಿ ಕಾಯ್ದೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಸಿಪಿಎಂ ತಾಲ್ಲೂಕು ಸಮಿತಿ ಸದಸ್ಯರಾದ ಎನ್.ಎನ್.ಶ್ರೀರಾಮ್, ಸುಶೀಲಾ, ವಿ.ನಾರಾಯಣರೆಡ್ಡಿ, ಎನ್.ಯಲ್ಲಪ್ಪ, ನಾಗೇಶ್, ವಿ.ವೆಂಕಟೇಶಪ್ಪ, ಕೆ.ವಿ.ಮಂಜುನಾಥ್, ಗಂಗಮ್ಮ, ಭೀಮರಾಜ್ ಪಾಲ್ಗೊಂಡರು.
ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿ ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.