ಕೆಜಿಎಫ್: ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ವಯಸ್ಸಾದ ತಂದೆ ತಾಯಿಗಳನ್ನು ಮನೆಯಲ್ಲಿಟ್ಟುಕೊಂಡು ಪೋಷಿಸುತ್ತಿದ್ದೇವೆ. ಈಗ ಏಕಾಏಕಿ ವಿಜಯನಗರಕ್ಕೆ ಹೋಗಿ ಎಂದರೆ ಕಷ್ಟ. ನಮಗ್ಯಾಕೆ ಈ ಶಿಕ್ಷೆ ಎಂದು ಪೊಲೀಸ್ ಕುಟುಂಬಗಳ ಸದಸ್ಯರು ಪ್ರಶ್ನಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ಮೌನವಾಗಿ ಕೇಳಿಸಿಕೊಂಡರು.
ಕೆಜಿಎಫ್ ಪೊಲೀಸ್ ಜಿಲ್ಲೆಯನ್ನು ವಿಜಯನಗರ ಜಿಲ್ಲೆಗೆ ವಿಲೀನ ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಕುಟುಂಬಗಳ ನೂರಾರು ಮಹಿಳೆಯರು ಮತ್ತು ಮಕ್ಕಳು ಸೋಮವಾರ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ವಸತಿಗೃಹದಿಂದ ನಡಿಗೆಯಲ್ಲಿ ಬಂದರು. ಕೊಂಚ ಕಾಲ ಎಸ್‌ಪಿ ಕಚೇರಿ ಆವರಣದಲ್ಲಿ ಕುಳಿತು ಮೌನವಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ ಮಹಿಳೆಯರು ತಮ್ಮ ನೋವನ್ನು ಹಂಚಿಕೊಂಡರು.
70 ವರ್ಷಗಳಿಂದ ಎಸ್‌ಪಿ ಕಚೇರಿ ಇಲ್ಲಿಯೇ ಇದೆ. ಕೋಲಾರ, ಮುಳಬಾಗಲು, ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ತಾಲ್ಲೂಕುಗಳ ಮೂಲದ ಸಿಬ್ಬಂದಿ ಇಲ್ಲಿ ಇದ್ದಾರೆ. ಸುಮಾರು 200 ಕುಟುಂಬಗಳು ಇವೆ. ಈಗಾಗಲೇ ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ಈಗ ಅವರನ್ನು ವಿಜಯನಗರ ಜಿಲ್ಲೆಗೆ ಕರೆದುಕೊಂಡು ಹೋಗಿ ಎಂದರೆ ಹೇಗೆ ಹೋಗುವುದು. ಬರುವ ಸಂಬಳದಲ್ಲಿ ಮತ್ತೊಮ್ಮೆ ಶಾಲೆಗೆ ಹೇಗೆ ಸೇರಿಸುವುದು. ಆರ್ಥಿಕ ನಷ್ಟವನ್ನು ಭರಿಸುವುದು ಅಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡರು.
ಯಾವುದೇ ಕಾರಣದಿಂದ ಜಿಲ್ಲೆಯನ್ನು ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡಬಾರದು. ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಬೇಕು ಎಂದು ಮಹಿಳೆಯರು ಮನವಿ ಪತ್ರ ಸಲ್ಲಿಸಿದರು.
ಮಹಿಳೆಯರ ಬೇಡಿಕೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್, ಈವರೆಗೆ ವಿಲೀನಗೊಳಿಸುವ ಬಗ್ಗೆ ಕೇಂದ್ರ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ಅಧಿಕೃತವಲ್ಲ. ವಿಲೀನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನನಗೆ ಇಲ್ಲ. ನನಗಿಂತ ಹಿರಿಯ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಡಿವೈಎಸ್ಪಿ ಮುರಳೀಧರ್ ಇದ್ದರು
ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ವಯಸ್ಸಾದ ತಂದೆ ತಾಯಿಗಳನ್ನು ಮನೆಯಲ್ಲಿಟ್ಟುಕೊಂಡು ಪೋಷಿಸುತ್ತಿದ್ದೇವೆ. ಈಗ ಏಕಾಏಕಿ ವಿಜಯನಗರಕ್ಕೆ ಹೋಗಿ ಎಂದರೆ ಕಷ್ಟ. ನಮಗ್ಯಾಕೆ ಈ ಶಿಕ್ಷೆ ಎಂದು ಪೊಲೀಸ್ ಕುಟುಂಬಗಳ ಸದಸ್ಯರು ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.