ADVERTISEMENT

ಕಲಬುರ್ಗಿ: ಸದ್ದಿಲ್ಲದೇ ಬೆಳೆಯುತ್ತಿದೆ ವೃದ್ಧಾಶ್ರಮದ ಸಂಸ್ಕೃತಿ

ಜಿಲ್ಲೆಯಲ್ಲಿಯೂ ಸದ್ದಿಲ್ಲದೇ ಬೆಳೆಯುತ್ತಿದೆ ವೃದ್ಧಾಶ್ರಮದ ಸಂಸ್ಕೃತಿ: ಒಬ್ಬೊಬ್ಬರ ಕಥೆ, ಕೊನೆಗಾಣದ ವ್ಯಥೆ

ಎಲ್‌.ಮಂಜುನಾಥ್‌.ಸಾಸಲು, ದೊಡ್ಡಬಳ್ಳಾಪುರ ತಾ.
Published 17 ಅಕ್ಟೋಬರ್ 2021, 20:15 IST
Last Updated 17 ಅಕ್ಟೋಬರ್ 2021, 20:15 IST
ಕಲಬುರಗಿಯ ಸೈಯದ್‌ ಚಿಂಚೋಳಿ ರಸ್ತೆಯಲ್ಲಿನ ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರಿಕರು
ಕಲಬುರಗಿಯ ಸೈಯದ್‌ ಚಿಂಚೋಳಿ ರಸ್ತೆಯಲ್ಲಿನ ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರಿಕರು   

ಕಲಬುರಗಿ: ‘ಬದುಕಿನಲ್ಲಿ ನಾವು ಅಂದ್ಕೊಂಡಿದ್ದು ಯಾವುದೂ ನಡೆಯಲ್ಲ. ಅದು ಬಂದಂತೆ ಸ್ವೀಕರಿಸಬೇಕು. ಮಕ್ಕಳು ದೊಡ್ಡವರಾದ ಬಳಿಕ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭಾವನೆಯಿಂದ ನಾವು ಎಲ್ಲವನ್ನೂ ತ್ಯಾಗ ಮಾಡಿ, ಅವರ ಬದುಕಿಗೆ ನೆರವಾಗುತ್ತೇವೆ. ಅವರೀಗ ದೊಡ್ಡವರಾಗಿ, ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ, ನಾನು ಇಂದು ಉಳಿದ ಜೀವನವನ್ನು ಇಲ್ಲಿ ಕಳೆಯುತ್ತಿದ್ದೇನೆ‘.

‘ಈ ಇಳಿ ವಯಸ್ಸಿನಲ್ಲಿ ನಮಗೆ ಬೇಕಿರುವುದು ಆಸರೆ. ಮಕ್ಕಳ, ಮೊಮ್ಮಕ್ಕಳ ಪ್ರೀತಿಯ ಮಾತು. ಆದರೆ, ಇದ್ಯಾವುದೂ ನಮಗೆ ಸಿಗಲಿಲ್ಲ. ಬದುಕೇ ಬೇಡವೆಂದು ಆತ್ಮಹತ್ಯೆಗೆ ಮುಂದಾದೆ. ಕೆಲವರು ನನ್ನನ್ನು ರಕ್ಷಿಸಿ ಇಲ್ಲಿಗೆ ತಂದು ಬಿಟ್ಟರು’.

ಹೀಗೆ ಇಂತಹ ನೋವಿನ ಮಾತುಗಳನ್ನು ಹೇಳಿಕೊಂಡಿದ್ದು ನಗರದ ಸೈಯದ್‌ ಚಿಂಚೋಳಿ ರಸ್ತೆಯಲ್ಲಿನ ವೃದ್ಧಾಶ್ರಮದಲ್ಲಿ ಇರುವ ಕೆಲ ಹಿರಿಯ ನಾಗರಿಕರು. ಅವರನ್ನು ಮಾತನಾಡಿದರೆ ಸಾಕು, ನೋವಿನ ಕತೆಗಳು ಅನಾವರಣಗೊಳ್ಳುತ್ತವೆ.

ADVERTISEMENT

ದೊಡ್ಡ ದೊಡ್ಡ ನಗರಗಳಲ್ಲಿ ಸೀಮಿತವಾಗಿದ್ದ ವೃದ್ಧಾಶ್ರಮದ ಸಂಸ್ಕೃತಿಯು ಜಿಲ್ಲೆಯಲ್ಲೂ ಸದ್ದಿಲ್ಲದೇ ಬೆಳೆಯುತ್ತಿದೆ. ಇದಕ್ಕೆ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘವು ನಡೆಸುತ್ತಿರುವ ವೃದ್ಧಾಶ್ರಮವೇ ಸಾಕ್ಷಿ.

ಪ್ರಸ್ತುತ ಈ ವೃದ್ಧಾಶ್ರಮದಲ್ಲಿ 27 ಮಂದಿ ವಯೋವೃದ್ಧರು ಆಶ್ರಯ ಪ‍ಡೆದಿದ್ದು, ಅವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಅಧಿಕಾರಿಗಳು ಇನ್ನೂ ಎರಡು ವೃದ್ಧಾಶ್ರಮ ತೆರೆಯಲು ಅನುಮತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ಇಲ್ಲಿನ ವೃದ್ಧಾಶ್ರಮದಲ್ಲಿನ ಬಹುತೇಕ ಹಿರಿಯರ ಮಕ್ಕಳು ಉತ್ತಮ ಸ್ಥಿತಿಯಲ್ಲಿಯೇ ಇದ್ದಾರೆ ಎಂಬುದು ಆಶ್ರಮ ನೋಡಿಕೊಳ್ಳುತ್ತಿರುವ ಸಂಘದವರ ಮಾತು.

ಹಿರಿಯ ನಾಗರಿಕರು ಆರ್ಥಿಕ, ದೈಹಿಕ, ಮಾನಸಿಕವಾಗಿ ತಮ್ಮ ಹಿತರಕ್ಷಣೆ ಮಾಡಿಕೊಳ್ಳಲು ಮತ್ತು ಸರ್ಕಾರದ ಸೌಲಭ್ಯ ಪಡೆಯಲು ಕಾನೂನಿನಲ್ಲಿ ಹಲವು ಹಕ್ಕುಗಳಿವೆ. ಇವುಗಳ ಅನುಷ್ಠಾನಕ್ಕಾಗಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೂ ಇದೆ.

ಆದರೆ, ಸರ್ಕಾರದ ಇಂತಹ ಕಾರ್ಯಕ್ರಮಗಳ ಹೊರತಾಗಿ ಹಿರಿಯರ ಬದುಕಿನಲ್ಲಿ ಎದ್ದು ಕಾಣುವಂತಹ ಸುಧಾರಣೆಯಾಗಿಲ್ಲ ಎನ್ನುವುದು ಇಲ್ಲಿನ ವೃದ್ಧಾಶ್ರಮದಲ್ಲಿನ ಹಿರಿಯರನ್ನು ನೋಡಿದರೆ ತಿಳಿಯುತ್ತದೆ.

‘ಸರ್ಕಾರ ನೀಡುವ ಅಲ್ಪ ಅನುದಾನ ಹಾಗೂ ಸಂಘಸಂಸ್ಥೆಗಳು, ದಾನಿಗಳು ನೀಡುವ ದೇಣಿಗೆಯಿಂದ ಇಲ್ಲಿನ ಹಿರಿಯರಿಗೆ ನಿತ್ಯ ಉಪಾಹಾರ, ಊಟ, ಬಟ್ಟೆ ಹಾಗೂ ಬದುಕಿನ ಕನಿಷ್ಠ ಸೌಕರ್ಯ ಒದಗಿಸಲಾಗುತ್ತದೆ. ಆದರೆ, ಇದು ಸಾಲುವುದಿಲ್ಲ‘ ಎಂದು ಆಶ್ರಮ ನೋಡಿಕೊಳ್ಳುತ್ತಿರುವ ಸಂಘದ ಕಾರ್ಯದರ್ಶಿ ಜಲಜಾಕ್ಷಿ ಎಸ್‌. ಕೋರೆ ಹೇಳುತ್ತಾರೆ.

ಹೆಚ್ಚುತ್ತಿದೆ ಆಶ್ರಯ ಬಯಸುವವರ ಸಂಖ್ಯೆ:

‘1995ರಲ್ಲಿ ಖಾಸಗಿ ಕಟ್ಟಡದಲ್ಲಿ ವೃದ್ಧಾಶ್ರಮ ಆರಂಭಿಸಲಾಯಿತು. ಆಗ ಇಲ್ಲಿಗೆ ಬರುವವರ ಸಂಖ್ಯೆ ತುಂಬಾ ವಿರಳವಾಗಿತ್ತು. ಆದರೆ, 2017ರ ನಂತರ ಇಲ್ಲಿಗೆ ಬರುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದೆ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದವರು, ಮನೆಯಿಂದ ಹೊರಗೆ ದೂಡಲ್ಪಟ್ಟವರು. ಕೆಲವರು ಮಕ್ಕಳ ಮಾತಿನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟವರನ್ನೂ ರಕ್ಷಿಸಿ ಇಲ್ಲಿಗೆ ತಂದು ಪೋಷಣೆ ಮಾಡಲಾಗುತ್ತಿದೆ. ಪ್ರಸ್ತುತ 27 ಹಿರಿಯ ನಾಗರಿಕರು ಇದ್ದಾರೆ‘ ಎನ್ನುತ್ತಾರೆ ಜಲಜಾಕ್ಷಿ ಎಸ್‌. ಕೋರೆ.

ಒಬ್ಬರ ಪೋಷಣೆಗೆ ₹ 27.50 ಪೈಸೆ!

‘ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಆಶ್ರಮದಲ್ಲಿನ ಒಬ್ಬರಿಗೆ ನಿತ್ಯ ಉಪಾಹಾರ, ಊಟದ ವೆಚ್ಚಕ್ಕೆ ₹ 27.50 ಪೈಸೆ ನೀಡುತ್ತದೆ. ಜಿಲ್ಲಾ ಪಂಚಾಯಿತಿಯಿಂದ ವಾರ್ಷಿಕ ₹ 8 ಲಕ್ಷ ಅನುದಾನ ನೀಡಲಾಗುತ್ತಿದೆ. ಇದರಲ್ಲಿಯೇ ನಾವು ಆಶ್ರಮದಲ್ಲಿನ 27 ಜನರಿಗೆ ನಿತ್ಯ ಬೆಳಿಗ್ಗೆ ಊಪಾಹಾರ, ಕಾಫಿ, ಚಹಾ ಹಾಗೂ ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿದಂತೆ ಅವರ ಬದುಕಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ನೀಡಬೇಕು. ಇಲಾಖೆಯು ಆಶ್ರಮದ ಬಾಡಿಗೆ ₹ 5 ಸಾವಿರ ನೀಡುತ್ತದೆ. ಇದು ಸಾಲಲ್ಲ‘ ಎಂದು ತಿಳಿಸಿದರು.

‌ಎರಡು ವೃದ್ಧಾಶ್ರಮ ತೆರೆಯಲು ಪ್ರಸ್ತಾವ

'ಹಿರಿಯ ನಾಗರಿಕರ ಹಿತರಕ್ಷಣೆ, ಪೋಷಣೆಗೆ ಸಂಬಂಧಿಸಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿದೆ. ಇನ್ನೂ ಕೆಲ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ' ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಸಾದಿಕ್‌ ಹುಸೇನ್‌ ಖಾನ್‌ ಹೇಳುತ್ತಾರೆ.

‘ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಎನ್‌ಜಿಒ ಆಶ್ರಯದಲ್ಲಿ ಸರ್ಕಾರದ ಅನುದಾನದ ಮೂಲಕ ಸೈಯದ್‌ ಚಿಂಚೋಳಿ ರಸ್ತೆಯಲ್ಲಿ ಒಂದು ವೃದ್ಧಾಶ್ರಮ ಹಾಗೂ ನಗರದ ರಾಘವೇಂದ್ರ ಕಾಲೊನಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಸಂಘ (ಎನ್‌ಜಿಒ) ಆಶ್ರಯದಲ್ಲಿ ಒಂದು ಹಗಲು ಯೋಗಕ್ಷೇಮ ಕೇಂದ್ರವನ್ನು ನಡೆಸಲಾಗುತ್ತಿದೆ. ಇಲ್ಲಿಗೆ ಬರುವ ಹಿರಿಯ ನಾಗರಿಕರಿಗೆ ಅಗತ್ಯ ಉಪಾಹಾರ, ಊಟ ಸೇರಿದಂತೆ ಅಗತ್ಯ ಸೌಲಭ್ಯವನ್ನು ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.
‘ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಮತ್ತು ಅವರ ಮಾನಸಿಕ ಒತ್ತಡಗಳ ನಿವಾರಣೆಗಾಗಿ ಮನರಂಜನೆ, ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅವರು ನೆಮ್ಮದಿಯಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ’ ಎನ್ನುತ್ತಾರೆ ಅವರು.
‘ಪ್ರಸ್ತುತ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘವು ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಹೆಚ್ಚಿನ ಹಿರಿಯರಿದ್ದು, ಜಾಗ ಸಾಲುತ್ತಿಲ್ಲ. ಹೀಗಾಗಿ ಇನ್ನೂ ಎರಡು ವೃದ್ಧಾಶ್ರಮಗಳನ್ನು ತೆರೆಯಲು ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅವು ಮಂಜೂರಾತಿ ಹಂತದಲ್ಲಿವೆ’ ಎನ್ನುತ್ತಾರೆ ಸಾಧಿಕ್‌ ಹುಸೇನ್‌ ಖಾನ್‌.
 
ಸೌಲಭ್ಯಗಳು ಹಲವು...

‘ಜಿಲ್ಲೆಯಲ್ಲಿ ಪ್ರಸ್ತುತ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 2,49,856 ಜನರಿದ್ದಾರೆ. ಅರ್ಹ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡುವ ಮೂಲಕ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ಸೌಲಭ್ಯ ನೀಡಲಾಗಿದೆ. ಅಗತ್ಯ ಇರುವವರಿಗೆ ಗಾಲಿ ಕುರ್ಚಿ, ವಾಕಿಂಗ್‌ ಸ್ಟಿಕ್‌ ಸೇರಿದಂತೆ ಅಗತ್ಯ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ‘ ಎಂದು ಹುಸೇನ್‌ ಖಾನ್‌ ಮಾಹಿತಿ ನೀಡಿದರು.
‘ಜಿಲ್ಲೆಯಲ್ಲಿ ಪ್ರಸ್ತುತ 2,05,688 ಹಿರಿಯ ನಾಗರಿಕರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಹಿರಿಯ ನಾಗರಿಕರ ರಕ್ಷಣೆಗಾಗಿ ಪ್ರತ್ಯೇಕ ನ್ಯಾಯಮಂಡಳಿ ತೆರೆಯಲಾಗಿದೆ. ಇದರ ಜೊತೆಗೆ ಹಿರಿಯ ನಾಗರಿಕರ ದಿನಾಚರಣೆ ವೇಳೆ ಇಲಾಖೆ ವತಿಯಿಂದ ಅವರಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ವಿಜೇತರಾಗದವರಿಗೆ ಬಹುಮಾನ ನೀಡಲಾಗುತ್ತದೆ‘ ಎನ್ನುತ್ತಾರೆ ಅವರು.
 
ಸಹಾಯವಾಣಿ 1090
ಹಿರಿಯ ನಾಗರಿಕರ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ಉಚಿತ ಕರೆಯ 1090 ಸಹಾಯವಾಣಿಯನ್ನು ಆರಂಭಿಸಿದ್ದು, ತೊಂದರೆಗೆ ಒಳಗಾದವರು, ಅಗತ್ಯ ಇರುವವರು ಈ ಸಂಖ್ಯೆಗೆ ಕರೆ ಮಾಡಿ, ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯವರು ನಿಮ್ಮ ಸಹಾಯಕ್ಕೆ ಧಾವಿಸುತ್ತಾರೆ. ಜೊತೆಗೆ ಅ.1ರಿಂದ ರಾಷ್ಟ್ರೀಯ ಹಿರಿಯ ನಾಗರಿಕರ ಉಚಿತ ಟ್ರೋಲ್‌ ಫ್ರೀ ಸಂಖ್ಯೆ– 14567 ಆರಂಭಿಸಲಾಗಿದ್ದು, ಇದರ ಉಪಯೋಗವನ್ನೂ ಪಡೆದುಕೊಳ್ಳಬಹುದು.
 
ಯೋಗಕ್ಷೇಮ ಕೇಂದ್ರದಲ್ಲಿ 300 ಜನರು
‘ನಾವು ಹಿರಿಯ ನಾಗರಿಕರ ಸೇವಾ ಸಂಘವನ್ನು ಆರಂಭಿಸಿದ್ದು, ಆ ಮೂಲಕ ಖಾಸಗಿಯಾಗಿ ಇಲ್ಲಿನ ಹಿಂದಿ ಪ್ರಚಾರ ಸಭಾ ಬಳಿ ‘ಕಲಬುರಗಿ ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಡಿಯಲ್ಲಿ ಹಿರಿಯರ ಹಗಲು ಯೋಗಕ್ಷೇಮ ಕೇಂದ್ರ’ವನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಕೇಂದ್ರದಲ್ಲಿ ಪ್ರಸ್ತುತ 300 ಜನ ಹಿರಿಯ ನಾಗರಿಕರಿದ್ದಾರೆ. ಅವರ ಬೇಸರ ಕಳೆಯಲು ಆಗಾಗ ಒಳಾಂಗಣ ಕ್ರೀಡೆ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಸದಸ್ಯರಾಗಲು ಇಚ್ಛಿಸುವವರು ಮೊ: 9448122195 ಸಂಪರ್ಕಿಸಬಹುದು‘ ಎಂದು ನಗರದ ಹಿರಿಯ ನಾಗರಿಕರ ಸೇವಾ ಸಂಘದ ಕಾರ್ಯದರ್ಶಿ ಪ್ರತಾಪ್‌ ಸಿಂಗ್‌ ತಿವಾರಿ ಹೇಳುತ್ತಾರೆ.

‘ನಗರದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದ್ದು, ಹೆಚ್ಚಿನ ಹಗಲು ಸೇವಾ ಕೇಂದ್ರಗಳ ಅಗತ್ಯವಿದೆ. ಇಲಾಖೆಯ ಅಧಿಕಾರಿಗಳು ಸರ್ಕಾರದ ವತಿಯಿಂದಲೇ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಹಗಲು ಯೋಗಕ್ಷೇಮ ಕೇಂದ್ರಗಳನ್ನು ತೆರೆಯಬೇಕು‘ ಎನ್ನುತ್ತಾರೆ ಅವರು.
 
ನ್ಯಾಯಾಲಯದಲ್ಲಿ ಪ್ರಕರಣ
‘ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ–ತಾಯಿಯನ್ನು ಮನೆಯಿಂದ ಹೊರಗೆ ಹಾಕಲಾಗುತ್ತಿದೆ. ಇಂತಹ ಹಲವು ಪ್ರಕರಣಗಳು ಈಗಾಗಲೇ ಕೌಟುಂಬಿಕ/ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಕೆಲ ಪೋಷಕರು ಬೇರೆ ಮನೆ ಮಾಡಿಕೊಂಡು ಇದ್ದಾರೆ. ಇನ್ನೂ ಕೆಲವರು ವೃದ್ಧಾಶ್ರಮಗಳಲ್ಲಿದ್ದಾರೆ. ಅವರಿಗೆ ಕಾನೂನಿನ ಮೂಲಕ ಪರಿಹಾರವನ್ನು ಕೊಡಿಸಲಾಗುವುದು. ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ ಇಂತಹ ಐದು ಪ್ರಕರಣಗಳಿವೆ‘ ಎಂದು ನಗರದ ಹಿರಿಯ ವಕೀಲೆ ಸರಸಿಜಾ ರಾಜನ್‌ ಹೇಳುತ್ತಾರೆ.

ನನಗೆ ಮಕ್ಕಳಿದ್ದಾರೆ. ನೋಡಿಕೊಳ್ಳುತ್ತಿಲ್ಲ. ಸರ್ಕಾರದ ಮಾಸಾಶನ ನನಗೆ ಸಿಗುತ್ತಿಲ್ಲ. ಬದುಕು ಸಾಗಿಸುವುದು ಕಷ್ಟವಾಗಿದೆ. ಬೇರೆ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದೇನೆ
- ಸಿದ್ದಮ್ಮ ಮಾಳಪ್ಪ ಪೂಜಾರಿ, ಬಳೂರ್ಗಿ ಗ್ರಾಮ. ಅಫಜಲಪುರ (ತಾ.,)
 
ಕಲಬುರಗಿಯ ರಾಘವೇಂದ್ರ ಕಾಲೊನಿಯಲ್ಲಿ ಸರ್ಕಾರದ ಅನುದಾನದಿಂದ ಹಗಲು ಸೇವಾ ಕೇಂದ್ರ ನಡೆಸುತ್ತಿದ್ದೇವೆ. ಪ್ರಸ್ತುತ 150 ಜನ ಹಿರಿಯ ನಾಗರಿಕ ಸದಸ್ಯರಿದ್ದಾರೆ. ಆದರೆ, ಕೋವಿಡ್‌ ಕಾರಣದಿಂದಾಗಿ 2 ವರ್ಷಗಳಿಂದ ತಾತ್ಕಾಲಿಕವಾಗಿ ಕೇಂದ್ರದ ಸೌಲಭ್ಯ ನಿಲ್ಲಿಸಲಾಗಿದೆ
- ಗುರಮ್ಮ ಸಿದ್ದಾರೆಡ್ಡಿ, ಅಧ್ಯಕ್ಷೆ, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಸಂಘ (ಎನ್‌ಜಿಒ
 
ವೃದ್ಧಾಶ್ರಮದಲ್ಲಿ ಎಲ್ಲಾ ಧರ್ಮ, ಜಾತಿಯವರು ಇದ್ದಾರೆ. ಯಾರಾದರೂ ಮೃತರಾದರೆ, ಅವರ ಜಾತಿ/ಧರ್ಮದ ವಿಧಿ–ವಿಧಾನದಂತೆ ಅಂತ್ಯಕ್ರಿಯೆ ಮಾಡುತ್ತೇವೆ. ಒಬ್ಬರ ಅಂತ್ಯಕ್ರಿಯೆಗೆ ಕನಿಷ್ಠ ₹ 10 ಸಾವಿರ ಖರ್ಚಾಗುತ್ತದೆ. ದಾನಿಗಳ ಸಹಕರಿಸುತ್ತಾರೆ
- ಜಲಜಾಕ್ಷಿ ಎಸ್‌. ಕೋರೆ, ಕಾರ್ಯದರ್ಶಿ, ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘ

ಸಾರಾಂಶ

ಕಲಬುರಗಿ: ‘ಬದುಕಿನಲ್ಲಿ ನಾವು ಅಂದ್ಕೊಂಡಿದ್ದು ಯಾವುದೂ ನಡೆಯಲ್ಲ. ಅದು ಬಂದಂತೆ ಸ್ವೀಕರಿಸಬೇಕು. ಮಕ್ಕಳು ದೊಡ್ಡವರಾದ ಬಳಿಕ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಭಾವನೆಯಿಂದ ನಾವು ಎಲ್ಲವನ್ನೂ ತ್ಯಾಗ ಮಾಡಿ, ಅವರ ಬದುಕಿಗೆ ನೆರವಾಗುತ್ತೇವೆ. ಅವರೀಗ ದೊಡ್ಡವರಾಗಿ, ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ, ನಾನು ಇಂದು ಉಳಿದ ಜೀವನವನ್ನು ಇಲ್ಲಿ ಕಳೆಯುತ್ತಿದ್ದೇನೆ‘.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.