ADVERTISEMENT

ಕಲಬುರಗಿ: ಬಿಲ್ ಪಾವತಿಸದ 128 ಗ್ರಾ.ಪಂ. ಫೋನ್ ಸಂಪರ್ಕ ಕಡಿತ!

ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದ ದಿಶಾ ಸಮಿತಿ ಸಭೆಯಲ್ಲಿ ಮಾಹಿತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 15:23 IST
Last Updated 17 ಜನವರಿ 2022, 15:23 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಿಶಾ ಸಮಿತಿ ಸಭೆಯಲ್ಲಿ ಸಚಿವ ಭಗವಂತ ಖೂಬಾ ಮಾತನಾಡಿದರು. ಶಾಸಕ‌ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಸಂಸದ ಡಾ.ಉಮೇಶ ಜಾಧವ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಇದ್ದರು–ಪ್ರಜಾವಾಣಿ ಚಿತ್ರ
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಿಶಾ ಸಮಿತಿ ಸಭೆಯಲ್ಲಿ ಸಚಿವ ಭಗವಂತ ಖೂಬಾ ಮಾತನಾಡಿದರು. ಶಾಸಕ‌ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಸಂಸದ ಡಾ.ಉಮೇಶ ಜಾಧವ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಇದ್ದರು–ಪ್ರಜಾವಾಣಿ ಚಿತ್ರ   

ಕಲಬುರಗಿ: ಸಕಾಲಕ್ಕೆ ದೂರವಾಣಿ ಬಿಲ್ ಪಾವಸದ ಜಿಲ್ಲೆಯ 128 ಗ್ರಾಮ ಪಂಚಾಯಿತಿ ಕಚೇರಿಗಳ ಸಂಪರ್ಕವನ್ನು ಕಡಿತ ಮಾಡಿರುವುದಾಗಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹೇಳುತ್ತಿದ್ದಂತೆಯೇ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ (ದಿಶಾ) ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆಯಿತು.

ಸಚಿವ ಭಗವಂತ ಖೂಬಾ ಮಾತನಾಡಿ, ‘ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂದರೆ ಇಂಟರ್ನೆಟ್ ಅತ್ಯಗತ್ಯ. ದೂರವಾಣಿ ಸಂಪರ್ಕವೇ ಕಡಿತಗೊಂಡರೆ ಎಲ್ಲ ಮಾಹಿತಿಯೂ ಅಲ್ಲಿಯೇ ಉಳಿದಂತಾಗುತ್ತವೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ’ ಎಂದರು.

ADVERTISEMENT

ಇದಕ್ಕೆ ದನಿಗೂಡಿಸಿದ ಸಂಸದ ಡಾ. ಉಮೇಶ ಜಾಧವ್, ಯಾಗಾಪುರ, ಕುಂಚಾವರಂನಂತಹ ಕುಗ್ರಾಮಗಳು, ನಾಲವಾರದಂತಹ ದೊಡ್ಡ ಗ್ರಾಮಗಳಲ್ಲಿಯೂ ಬಿಲ್ ಪಾವತಿಸಿದ್ದಕ್ಕೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡರೆ ಹೇಗೆ? ಕೂಡಲೇ ಬಿಲ್ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ‘ಪಂಚಾಯಿತಿ ಕಚೇರಿಗಳಿಗೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿರುವುದರ ಬಗ್ಗೆ ಪಟ್ಟಿ ತರಿಸಿಕೊಂಡಿದ್ದು, ಕೂಡಲೇ ಬಾಕಿ ಇರುವ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಜಲಜೀವನ ಮಿಷನ್: 2023ರ ಒಳಗಾಗಿ ಜಲಜೀವನ ಮಿಷನ್ ಅಡಿ ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಖೂಬಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಒಂದು ಮನೆಗೆ ನೀರು ಪೂರೈಕೆ ಇಲ್ಲವಾದರೂ ಪ್ರಗತಿ ಸೊನ್ನೆಯಾದಂತೆ. ‌ಹೀಗಾಗಿ, ಎಲ್ಲ ಮನೆಗಳಿಗೂ ನೀರು ಪೂರೈಕೆಯಾಗುವಂತೆ ಗಮನ ಹರಿಸಬೇಕು. ಜಲಜೀವನ ಮಿಷನ್ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಇದರ ಮೇಲ್ವಿಚಾರಣೆ ವಹಿಸಿದ್ದಾರೆ. ಆದ್ದರಿಂದ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು’ ಎಂದರು.

ಕುಡಿಯುವ ನೀರಿನ ಯೋಜನೆಗಳ ಬಗ್ಗೆ ನಿತ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೇಲ್ವಿಚಾರಣೆ ‌ನಡೆಸಬೇಕು ಎಂದು ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚಿಸಿದರು.

ಅಕ್ರಮ ಸಾಗಾಟ ತಡೆಯಿರಿ: ಜನರಿಗೆ ವಿತರಿಸಲೆಂದು ಕೇಂದ್ರ ಸರ್ಕಾರವು ನೀಡಿದ ಪಡಿತರ ಅಕ್ಕಿಯು ಅಕ್ರಮವಾಗಿ ಕಾಳಸಂತೆಕೋರರ ಪಾಲಾಗುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ಸಚಿವರು ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ ಅವರಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಂತಗೌಡ, ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 22 ಎಫ್‌ಐಆರ್‌ ದಾಖಲಿಸಿದ್ದು, 23 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದ್ದೇವೆ ಎಂದರು.

ತಡವರಿಸಿದ ಅಧಿಕಾರಿ

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ನಿರ್ವಹಿಸುತ್ತಿರುವ ಕ್ಷೇಮ ಕೇಂದ್ರಗಳ ಸಂಖ್ಯೆ ಎಷ್ಟು ಎಂದು ಸಚಿವ ಭಗವಂತ ಖೂಬಾ ಅವರು ಕೇಳಿದಾಗ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ್‌ ಉತ್ತರ ಹೇಳಲು ತಡವರಿಸಿದರು.

ಜಿಲ್ಲೆಯಲ್ಲಿ 249 ಕ್ಷೇಮ ಕೇಂದ್ರಗಳಿವೆ ಎನ್ನುತ್ತಿದ್ದಂತೆಯೇ ಸಿಟ್ಟಿಗೆದ್ದ ಸಚಿವರು, ಕಲಬುರಗಿ ಜಿಲ್ಲೆಗಿಂತ ಚಿಕ್ಕದಾದ ಬೀದರ್‌ ಜಿಲ್ಲೆಯಲ್ಲಿಯೇ 256 ಕೇಂದ್ರಗಳಿವೆ. ತಪ್ಪು ಮಾಹಿತಿ ಕೊಡಬೇಡಿ ಎಂದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್‌ ಶಶಿ, ಜಿಲ್ಲೆಯಲ್ಲಿ 700ಕ್ಕೂ ಅಧಿಕ ಕ್ಷೇಮ ಕೇಂದ್ರಗಳಿವೆ. ಆ ಪೈಕಿ 500ಕ್ಕೂ ಅಧಿಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ರಕ್ತದೊತ್ತಡ, ಮಧುಮೇಹ, ಜ್ವರದಂತಹ ಕಾಯಿಲೆಗಳ ತಪಾಸಣೆ ನಡೆಯುತ್ತಿದೆ ಎಂದು ಹೇಳಿದರು.

ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?

ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಮಾಡುತ್ತಿರುವುದನ್ನು ನೋಡಿದರೆ ಲೋಕೋಪಯೋಗಿ ಇಲಾಖೆಯನ್ನು ಖಾಸಗಿ ಕಂಪನಿ ಎಂದು ತಿಳಿದುಕೊಂಡಿದ್ದೀರಾ ಎಂದು ಡಾ. ಉಮೇಶ ಜಾಧವ್ ತರಾಟೆಗೆ ತೆಗೆದುಕೊಂಡರು.

ಚಿತ್ತಾಪುರ ತಾಲ್ಲೂಕಿನ ಯಾಗಾಪುರದಲ್ಲಿ ಆಗಿರುವ ಟೆಂಡರ್ ಯಾಕೆ ರದ್ದು ಮಾಡಿದಿರಿ? ಟೆಂಡರ್ ಮೊತ್ತಕ್ಕಿಂತ ಕಡಿಮೆ ಹೋದ ಮಾತ್ರಕ್ಕೆ ರದ್ದು ಮಾಡುವುದಾದರೆ ಇದ್ಯಾವ ನ್ಯಾಯ? ಹೆಚ್ಚುವರಿ ಮೊತ್ತದ ಕಾಮಗಾರಿಯೇ ಮಾಡಬೇಕೆಂಬ ನಿಯಮ‌ ಬಂದಿದೆಯಾ? ಟೆಂಡರ್ ಇಲ್ಲದೆಯೇ ಕಾಮಗಾರಿ ನಡೆಯುತ್ತಿವೆ. ಟೆಂಡರ್ ಆಗಿ ಹಲವು ತಿಂಗಳಾದರೂ ಕಾಮಗಾರಿ ಶುರು ಆಗುತ್ತಿಲ್ಲ ಏಕೆ ಎಂದು ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಶಾಸಕ ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾಧಿಕಾರಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು ಇದ್ದರು.

ನ್ಯಾಯಬೆಲೆ ಅಂಗಡಿಯಲ್ಲೂ ಆಯುಷ್ಮಾನ್ ಕಾರ್ಡ್

ಜಿಲ್ಲೆಯ 28 ಲಕ್ಷ ಜನಸಂಖ್ಯೆಯ ಪೈಕಿ 4.62 ಲಕ್ಷ ಜನರಿಗೆ ಮಾತ್ರ ಆಯುಷ್ಮಾನ್ ಕಾರ್ಡ್ ದೊರಕಿರುವ ಬಗ್ಗೆ ಸಚಿವ ಭಗವಂತ ಖೂಬಾ ಅವರು ಅತೃಪ್ತಿ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಬಡರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಲು ಈ ಯೋಜನೆ ಜಾರಿಗೊಳಿಸಿದೆ. ಆದರೆ, ಎಲ್ಲರಿಗೂ ಕಾರ್ಡ್‌ ಕೊಡುವ ಪ್ರಕ್ರಿಯೆಯಲ್ಲಿ ಜಿಲ್ಲೆ ಬಹಳ ಹಿಂದುಳಿದಿದೆ. ಸಾಮಾನ್ಯ ಸೇವಾ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳನ್ನು ನ್ಯಾಯಬೆಲೆ ಅಂಗಡಿಗಳೊಂದಿಗೆ ಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.

‘ವಸತಿ ನಿಲಯ ಸಮಸ್ಯೆ ಬಗೆಹರಿಸಿ’

ಕಲಬುರಗಿ ನಗರದಲ್ಲಿ ವಸತಿ ವ್ಯವಸ್ಥೆ ಮಾಡಿಸಿಕೊಡಿ ಎಂದು ನಿತ್ಯ ಹಲವು ವಿದ್ಯಾರ್ಥಿನಿಯರು ಕರೆ ಮಾಡುತ್ತಾರೆ. ನಾನೂ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡುತ್ತೇನೆ. ಆದರೆ, ಹೊಸ ವಸತಿ ನಿಲಯಗಳ ಮಂಜೂರಾತಿ ಇಲ್ಲದ್ದರಿಂದ ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸುವುದು ಸವಾಲಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಸಚಿವರ ಎದುರು ಪ್ರಸ್ತಾಪಿಸಿದರು.

‘ತಾವು ಕೇಂದ್ರ ಸಚಿವರಾಗಿದ್ದೀರಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಪ್ತರಾಗಿದ್ದು, ಅಗತ್ಯವಿರುವಷ್ಟು ವಸತಿ ನಿಲಯಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಿಕೊಡಿ’ ಎಂದು ಬೇಡಿಕೆ ಇಟ್ಟರು.

‘ವಸತಿ ನಿಲಯಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ನೀಡಲಾಗಿದೆ. ಅದಕ್ಕೆ ಪರ್ಯಾಯವಾಗಿ ಕಲಬುರಗಿ ಪಿ ಅಂಡ್‌ ಟಿ ಕ್ವಾರ್ಟರ್ಸ್‌ಗಳನ್ನೇ ವಸತಿ ನಿಲಯಗಳನ್ನಾಗಿ ಮಾರ್ಪಡಿಸುವ ಬಗ್ಗೆ ಏನಾದರೂ ಯೋಜನೆ ರೂಪಿಸಿ’ ಎಂದು ಸಂಸದ ಡಾ. ಜಾಧವ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಸಲಹೆ ನೀಡಿದರು.

‘ಸನ್ನತಿ ಅಭಿವೃದ್ಧಿಗೆ ಡಿಪಿಆರ್‌’

ಐತಿಹಾಸಿಕ ಬೌದ್ಧ ಸ್ತೂಪ ಇರುವ ಸನ್ನತಿಯ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇದನ್ನು ಸೇರ್ಪಡೆ ಮಾಡುವ ಬಗ್ಗೆಯೂ ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ಕೆಂಪೇಗೌಡ ತಿಳಿಸಿದರು.

ಸಚಿವರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ‘ಈಗಾಗಲೇ ಅಶೋಕನ ಶಿಲ್ಪಕ್ಕೆ ಗಾಜಿನ ಹೊದಿಕೆಯನ್ನು ಅಳವಡಿಸಲಾಗಿದೆ. ಸ್ತೂಪದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ, ಗಾಳಿಗೆ ಸ್ತೂಪ ಹಾಗೂ ಶಿಲಾ ಶಾಸನಗಳು ಹಾಳಾಗದಂತೆ ರಕ್ಷಿಸಲು ₹ 1.76 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಆದರೆ, ಕೆಲ ನ್ಯೂನತೆಗಳು ಇರುವುದರಿಂದ ಮತ್ತೊಂದು ಪ್ರಸ್ತಾವವನ್ನು ತಯಾರಿಸಿ ತಿಂಗಳಾಂತ್ಯಕ್ಕೆ ಸಲ್ಲಿಸಲಾಗುವುದು’ ಎಂದರು.

ಸಾರಾಂಶ

ಸಕಾಲಕ್ಕೆ ದೂರವಾಣಿ ಬಿಲ್ ಪಾವಸದ ಜಿಲ್ಲೆಯ 128 ಗ್ರಾಮ ಪಂಚಾಯಿತಿ ಕಚೇರಿಗಳ ಸಂಪರ್ಕವನ್ನು ಕಡಿತ ಮಾಡಿರುವುದಾಗಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಹೇಳುತ್ತಿದ್ದಂತೆಯೇ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.