ADVERTISEMENT

ರಸ್ತೆ ಬಂದ್‌ ಮಾಡಿ ಪ್ರತಿಭಟನೆ; ಶಾಸಕ ತೆಲ್ಕೂರ ವಿರುದ್ಧ ಕ್ರಮಕ್ಕೆ ಒತ್ತಾಯ

ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸುವ ಮೂಲಕ ಜನರಿಗೆ ತೊಂದರೆ: ಡಾ. ಶರಣಪ್ರಕಾಶ ಆರೋಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 14:43 IST
Last Updated 17 ಅಕ್ಟೋಬರ್ 2021, 14:43 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಕಲಬುರಗಿ: ಸೇಡಂ ತಾಲ್ಲೂಕಿನ ಮುಧೋಳ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಆನಂದರಾವ್ ಅಮಾನತು ಖಂಡಿಸಿ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ನೇತೃತ್ವದಲ್ಲಿ ಯಾವುದೇ ಅನುಮತಿ ಪಡೆಯದೇ ಬಿಜೆಪಿ ಕಾರ್ಯಕರ್ತರು ರಾಜ್ಯ ಹೆದ್ದಾರಿ 10ರ ಮೇಲೆ ಶನಿವಾರ ದಿಢೀರ್‌ ರಸ್ತೆತಡೆ ನಡೆಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತ ಪಕ್ಷದ ಶಾಸಕರಾಗಿ ಹೀಗೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದು ಸರಿಯಲ್ಲ. ಕೂಡಲೇ ಪೊಲೀಸರು ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಯಾರು ರಸ್ತೆ ತಡೆ ನಡೆಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದರು.

ಸುಮಾರು ಏಳು ಗಂಟೆಯವರೆಗೆ ರಸ್ತೆ ತಡೆ ನಡೆಸಿದ್ದರಿಂದ ಕಲಬುರಗಿ, ಚಿಂಚೋಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯೊಬ್ಬರು ಹೀಗೆ ಕಾನೂನೂ ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ADVERTISEMENT

‘ಅಮಾನತು ಆಗಿರುವ ಆನಂದರಾವ್ ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಎರಡು ಇಸ್ಪೀಟ್‌ ಕ್ಲಬ್‌ಗಳನ್ನು ಇವರೇ ನಡೆಸುತ್ತಿರುವ ಬಗ್ಗೆ ಹಾಗೂ ಉಸುಕಿನ ಲಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳಿವೆ. ಹಿಂದೆಯೂ ರಿಬ್ಬನಪಲ್ಲಿ ಗ್ರಾಮದಲ್ಲಿ ಯುವತಿ ಅತ್ಯಾಚಾರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಬಂದಾಗಲೂ ತಕ್ಷಣ ಪ್ರಕರಣ ದಾಖಲಿಸದೇ ಸತಾಯಿಸುತ್ತಿದ್ದರು. ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತ ರವಿ ಅಲಿಯಾಸ್ ರಾಘುವಿಗೆ ಭೀಕರವಾಗಿ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ರವಿ ಠಾಣೆಗೆ ಬಂದು ದೂರು ನೀಡಲು ಮುಂದಾದಾಗಲೂ ತಕ್ಷಣ ಎಫ್‌ಐಆರ್‌ ದಾಖಲಿಸುವ ಬದಲು ಥಳಿಸಿದ ವ್ಯಕ್ತಿಗೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಅಕ್ಷಮ್ಯ. ಹಾಗಾಗಿಯೇ ನಾವು ಅಮಾನತಿಗೆ ಆಗ್ರಹಿಸಿದ್ದೆವು. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದ ಐಜಿಪಿ, ಎಸ್ಪಿ ಅವರು ಆನಂದರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ’ ಎಂದರು.

‘ಆ ಅಧಿಕಾರಿ ತಪ್ಪೇ ಮಾಡಿಲ್ಲ ಎನ್ನುವುದಿದ್ದರೆ ಅಮಾನತು ಏಕೆ ಆಗುತ್ತಿದ್ದರು? ಅವರ ವಿರುದ್ಧ ತಕ್ಷಣ ಇಲಾಖಾ ವಿಚಾರಣೆ ನಡೆಸಬೇಕು’ ಎಂದೂ ಡಾ. ಶರಣಪ್ರಕಾಶ ಒತ್ತಾಯಿಸಿದರು.

ಶೆಡ್‌ ನಿರ್ಮಿಸಿಕೊಡಿ: ಸತತ ಭೂಕಂಪನದಿಂದ ತೊಂದರೆಗೊಳಗಾದ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ತಕ್ಷಣ ಎಲ್ಲರಿಗೂ ಶೆಡ್‌ಗಳನ್ನು ನಿರ್ಮಿಸಿಕೊಡಬೇಕು. ಗ್ರಾಮದಿಂದ 10 ಕಿ.ಮೀ. ಸುತ್ತಲಿನ ಗ್ರಾಮಗಳಿಗೂ ತೊಂದರೆ ಇದ್ದು, ಅವುಗಳನ್ನೂ ಸ್ಥಳಾಂತರಿಸಬೇಕು. ಇಲ್ಲವೇ ಭೂಕಂಪ ನಿರೋಧಕ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ ಇದ್ದರು.

‘ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ?’

ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ ಸಂಭವಿಸಿ ಗ್ರಾಮಸ್ಥರು ಊರು ಖಾಲಿ ಮಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಎಲ್ಲಿದ್ದಾರೆ ಎಂದು ಡಾ. ಶರಣಪ್ರಕಾಶ ಪಾಟೀಲ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಯಾವ ಸಮಸ್ಯೆಯಾದರೂ ಸ್ಪಂದಿಸದ ಇಂತಹ ಉಸ್ತುವಾರಿಗಳು ನಮಗೆ ಬೇಕೇ ಎಂದ ಅವರು, ‘ಸಿದ್ದರಾಮಯ್ಯ ಅವರು ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿದ ಬಳಿಕವಷ್ಟೇ ಸಂಸದ ಡಾ. ಉಮೇಶ ಜಾಧವ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿ ಗ್ರಾಮಕ್ಕೆ ದೌಡಾಯಿಸಿದರು.

‘ಸಿದ್ದರಾಮಯ್ಯ ಅವರು ಸದನದಲ್ಲಿ ಪ್ರಶ್ನಿಸಬಹುದು ಎಂಬ ಭೀತಿಯಿಂದ ಕಂದಾಯ ಸಚಿವ ಆರ್. ಅಶೋಕ ಅವರು ಇದೇ 18ರಂದು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಸಚಿವರ ಭೇಟಿಯನ್ನು ಸ್ವಾಗತಿಸುತ್ತೇನೆ. ತಕ್ಷಣ ಅಲ್ಲಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದರು.

ಸಾರಾಂಶ

ಸೇಡಂ ತಾಲ್ಲೂಕಿನ ಮುಧೋಳ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಆನಂದರಾವ್ ಅಮಾನತು ಖಂಡಿಸಿ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ನೇತೃತ್ವದಲ್ಲಿ ಯಾವುದೇ ಅನುಮತಿ ಪಡೆಯದೇ ಬಿಜೆಪಿ ಕಾರ್ಯಕರ್ತರು ರಾಜ್ಯ ಹೆದ್ದಾರಿ 10ರ ಮೇಲೆ ಶನಿವಾರ ದಿಢೀರ್‌ ರಸ್ತೆತಡೆ ನಡೆಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.