ADVERTISEMENT

ಭೂಕಂಪ ಪಿಡಿತರಿಗೆ ಸಿಗದ ಕಿಟ್; ಕಾಳಜಿ ಕೇಂದ್ರಕ್ಕೆ ಸೀಮಿತ !

ಜಗನ್ನಾಥ ಡಿ.ಶೇರಿಕಾರ
Published 17 ಅಕ್ಟೋಬರ್ 2021, 4:53 IST
Last Updated 17 ಅಕ್ಟೋಬರ್ 2021, 4:53 IST
ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ ದಿನಸಿ ಕಿಟ್ ಪಡೆಯಲು ಕಾದು ಕುಳಿತ ಮಹಿಳೆಯರು
ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ ದಿನಸಿ ಕಿಟ್ ಪಡೆಯಲು ಕಾದು ಕುಳಿತ ಮಹಿಳೆಯರು   

ಚಿಂಚೋಳಿ: ತಾಲ್ಲೂಕಿನ ಭೂಕಂಪನ ಪೀಡಿತ ಗ್ರಾಮಗಳ ಜನರಿಗೆ ಅವಶ್ಯಕ ವಸ್ತುಗಳ ಕಿಟ್‌ಗಳು ಇನ್ನೂ ವಿತರಿಸಿಲ್ಲ. ಕೆಲವೆಡೆ ಕಾಳಜಿ ಕೇಂದ್ರಗಳನ್ನು ತೆರೆದಿದ್ದಾರೆ. ಆದರೆ, ಜನರಿಗೆ ಬೇಕದ ಜೀವನಾವಶ್ಯಕ ವಸ್ತುಗಳನ್ನು ಹಂಚಲು ವಿಳಂಬ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.

ಗಡಿಕೇಶ್ವಾರ ಗ್ರಾಮಸ್ಥರಿಗೆ ಅವಶ್ಯಕ ವಸ್ತುಗಳ ಕಿಟ್ ವಿತರಿಸುತ್ತೇವೆ ಬನ್ನಿ ಎಂದು ಕಳೆದ ಬುಧವಾರವೇ ಕರೆದಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೇರಿದ್ದರು. ಕಾಳಜಿ ಕೇಂದ್ರದಲ್ಲಿ ಊಟ ಮಾಡಿ ಜತೆಗೆ ಕಿಟ್ ಪಡೆಯಲು ಪಡಿತರ ಚೀಟಿಯೊಂದಿಗೆ ಬಂದಿದ್ದ ಮಹಿಳೆಯರು, ಬರಿಗೈಲಿ ವಾಪಸ್ಸಾದರು.

ಅ.8ರಿಂದ ಇಲ್ಲಿ ಭೂಕಂಪ ಸಂಭವಿಸುತ್ತಿದ್ದು, ಇದಕ್ಕೂ ಮುಂಚೆ ಇಲ್ಲಿ ಲಘು ಕಂಪನಗಳು ಹಾಗೂ ಭೂಮಿಯಿಂದ ನಿರಂತರ ಸದ್ದು ಕೇಳಿ ಬರುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಜನರು ಊರು ಬಿಟ್ಟು ಹೋಗಿದ್ದಾರೆ.

ADVERTISEMENT

ಮೂರು ದಿನಗಳಿಂದ ಕಾಳಜಿ ಕೇಂದ್ರ ತೆರೆಯಲಾಗಿದೆ. ಜನರು ಕಾಳಜಿ ಕೇಂದ್ರದಲ್ಲಿಯೇ ಊಟ ಮಾಡಿ ಮನೆಯತ್ತ ಹೊರಡುತ್ತಿದ್ದಾರೆ. ಆದರೆ ಇಲ್ಲಿ ನಿರ್ಮಿಸಿದ ತಾತ್ಕಾಲಿಕ ಶೆಡ್‌ನಲ್ಲಿ ಮಲಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಲಧಿಕಾರಿಗಳ ನಿರ್ದೆಶನದಂತೆ ಗಡಿಕೇಶ್ವಾರದಲ್ಲಿ ಜನರಿಗೆ ವಿತರಿಸಲು 1000 ಕಿಟ್ ತಂದು ಇರಿಸಲಾಗಿದೆ. ಈಗ ವಿತರಣೆ ನಡೆಸಬೇಕಿದೆ ಎಂದು ತಹಶೀಲ್ದಾರ್ ಅಂಜುಮ್‌ ತಬಸ್ಸುಮ್ ತಿಳಿಸಿದರು.

ಗಡಿಕೇಶ್ವಾರ ಗ್ರಾಮದಲ್ಲಿ ಬಹುತೇಕ ಜನ ಖಾಲಿ ಮಾಡಿದ್ದಾರೆ. ಉಳಿದವರಿಗೆ ಕಾಳಜಿ ಕೇಂದ್ರ ನೆರವಾಗುತ್ತಿದೆ. ಆದರೆ ಕಿಟ್ ವಿತರಿಸಿದರೆ ಜನರಿಗೆ ಸರ್ಕಾರದ ಮೇಲೆ ಮತ್ತಷ್ಟು ವಿಶ್ವಾಸ ಮೂಡಲಿದೆ. ಈಗಾಗಲೇ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದ್ದು, ಜನರು ಧೈರ್ಯವಾಗಿರಬೇಕು. ತುರ್ತು ಸಂದರ್ಭ ಎದುರಾದರೆ ಅಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನ ಸನ್ನದ್ಧವಾಗಿರಿಸಲಾಗಿದೆ.

ಗಡಿಕೇಶ್ವಾರದಲ್ಲಿ ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಇಲ್ಲಿ ಭೂಕಂಪನ ಸಂಭವಿಸಿವೆ. ಹಲಚೇರಾ, ಕೊರವಿ, ಕೊಡದೂರು, ಕುಪನೂರ, ಗಡಿಕೇಶ್ವಾರ ಗ್ರಾಮಗಳಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನಕ್ಕೆ ಮುಂದಾಗಿದೆ.

ಈಗಾಗಲೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಭೂಕಂಪ ತಜ್ಞರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ಭಾನುವಾರ ಹೈದರಾಬಾದಿನ ರಾಷ್ಟ್ರೀಯ ಭೌಗೋಳಿಕ ಸಂಶೋದನಾ ಸಂಸ್ಥೆಯ ವಿಜ್ಞಾನಿ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಭೂಕಂಪ ತಜ್ಞರು ಮತ್ತೆ ಬಂದು ಅಧ್ಯಯನ ನಡೆಸಲಿದ್ದಾರೆ.

ಸಾರಾಂಶ

ಭೂಕಂಪ ಪಿಡಿತರಿಗೆ ದೊರೆಯದ ಅವಶ್ಯಕ ವಸ್ತುಗಳ ಕಿಟ್;ಕಾಳಜಿ ಕೇಂದ್ರಕ್ಕೆ ಸೀಮಿತ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.