ADVERTISEMENT

ಪೊಲೀಸರಿಗೆ 2 ಕ್ರಿಸ್ಟಾ, 10 ಬೊಲೆರೊ ಜೀಪ್

ಇಲಾಖೆ ಮನವಿಗೆ ಸ್ಪಂದಿಸಿ ವಾಹನ ಖರೀದಿಗೆ ಹಣ ಬಿಡುಗಡೆ ಮಾಡಿದ್ದ ಕೆಕೆಆರ್‌ಡಿಬಿ

ಮನೋಜ ಕುಮಾರ್ ಗುದ್ದಿ
Published 19 ಜನವರಿ 2022, 6:08 IST
Last Updated 19 ಜನವರಿ 2022, 6:08 IST
ಇಶಾ ಪಂತ್
ಇಶಾ ಪಂತ್   

ಕಲಬುರಗಿ: ಪೊಲೀಸರಿಗೆ ನೀಡಲಾಗಿದ್ದ ಜೀಪ್‌ಗಳು ಹಳೆಯದಾಗಿ ಪದೇ ಪದೇ ದುರಸ್ತಿಗೆ ಬರುತ್ತಿದ್ದುದರಿಂದ ತುರ್ತು ಸಂದರ್ಭದಲ್ಲಿ ತೆರಳಲು ಅಡ್ಡಿಯಾಗಿದ್ದನ್ನು ಗಮನಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯು ಪೊಲೀಸ್ ಅಧಿಕಾರಿಗಳ ಬಳಕೆಗಾಗಿ 10 ಬೊಲೆರೊ ಜೀಪ್‌ಗಳನ್ನು ಖರೀದಿಸಿದೆ.

ತಿಂಗಳಾಂತ್ಯಕ್ಕೆ ಜೀಪ್‌ಗಳು ಪೊಲೀಸ್‌ ಸೇವೆಗೆ ಸೇರ್ಪಡೆಗೊಳ್ಳಲಿವೆ. ಕಲಬುರಗಿ ಪೊಲೀಸ್‌ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿಗಳು ಹಾಗೂ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ಬಳಕೆಗಾಗಿ 2021ರ ಏಪ್ರಿಲ್‌ನಲ್ಲಿ 10 ಸ್ಕಾರ್ಪಿಯೊ ಹಾಗೂ 10 ಮಹಿಂದ್ರಾ ಬೊಲೆರೊ ವಾಹನಗಳನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ 15 ವಾಹನಗಳ ಖರೀದಿಗೆ ಪೊಲೀಸ್ ಇಲಾಖೆಯೇ ಹಣ ಬಿಡುಗಡೆ ಮಾಡಿತ್ತು. ಉಳಿದ ಐದು ವಾಹನಗಳ ಖರೀದಿಗೆ ಅಂದಿನ ಪೊಲೀಸ್‌ ಕಮಿಷನರ್‌ ಸತೀಶಕುಮಾರ್‌ ಅವರ ಮನವಿ ಮೇರೆಗೆ ಕೆಕೆಆರ್‌ಡಿಬಿ ಅನುದಾನ ಬಿಡುಗಡೆ ಮಾಡಿತ್ತು.

ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಮನವಿ ಮೇರೆಗೆ ಕೆಕೆಆರ್‌ಡಿಬಿಯು ಎರಡು ಟೊಯೊಟಾ ಇನ್ನೋವಾ ಕ್ರಿಸ್ಟಾ ಹಾಗೂ 10 ಮಹಿಂದ್ರಾ ಬೊಲೆರೊ ವಾಹನಗಳನ್ನು ಖರೀದಿಸಿದೆ. ಅದರಲ್ಲಿ ಕ್ರಿಸ್ಟಾ ಕಾರುಗಳು ಎಸ್ಪಿ ಕಚೇರಿಗೆ ಹಸ್ತಾಂತರಗೊಂಡಿವೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಸ್ಪಿ ಇಶಾ ಪಂತ್, ‘ಜಿಲ್ಲೆಯ ವಿವಿಧ ಠಾಣೆಗಳಲ್ಲಿನ ಜೀಪ್‌ಗಳು ಸಾಕಷ್ಟು ಹಳೆಯದಾಗಿದ್ದವು. ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಅವಘಡ ಸಂಭವಿಸಿದ ಸ್ಥಳಕ್ಕೆ ತಕ್ಷಣ ಅಧಿಕಾರಿಗಳು ತೆರಳಲು ಸುಸಜ್ಜಿತ ವಾಹನಗಳ ಅಗತ್ಯವಿತ್ತು. ಈ ಬಗ್ಗೆ ಕೆಕೆಆರ್‌ಡಿಬಿಗೆ ಮನವಿ ಮಾಡಿದ್ದೆವು. ಮನವಿಗೆ ಸ್ಪಂದಿಸಿ ಎರಡು ಕ್ರಿಸ್ಟಾ ಕಾರು ಹಾಗೂ 10 ಜೀಪ್‌ಗಳನ್ನು ಖರೀದಿಸಿದ್ದಾರೆ. ಇದರಿಂದ ಪೊಲೀಸ್ ಇಲಾಖೆ ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಬಹುದಾಗಿದೆ’ ಎಂದರು.

ಅಕ್ರಮ ಮರಳು ದಂದೆ ತಡೆಗೆ ತಂಡ: ಜಿಲ್ಲೆಯ ಜೇವರ್ಗಿ, ಅಫಜಲಪುರದ ಭೀಮಾ ನದಿ ಪಾತ್ರ ಹಾಗೂ ಚಿತ್ತಾಪುರ, ಶಹಾಬಾದ್, ಸೇಡಂ ತಾಲ್ಲೂಕಿನ ಕಾಗಿಣಾ ನದಿ ಪಾತ್ರಗಳಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದನ್ನು ಮಟ್ಟ ಹಾಕಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಇಶಾ ಪಂತ್ ತಿಳಿಸಿದರು.

ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಮರಳು ಸಾಗಾಟವನ್ನು ತಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ರಮ ಸಾಗಾಟದ ಬಗ್ಗೆ ನಿರ್ದಿಷ್ಟ ಮಾಹಿತಿ ಇದ್ದರೆ ನನ್ನೊಂದಿಗೆ ಹಂಚಿಕೊಳ್ಳಬಹುದು. ನಾನು ವಿವಿಧ ತಾಲ್ಲೂಕುಗಳು, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸುತ್ತಿದ್ದೇನೆ. ಆಗಲೂ ಈ ಬಗ್ಗೆ ಮಾಹಿತಿ ನೀಡಬಹುದು ಎಂದರು.

‘ಕೋಡ್ಲಾ ಗ್ರಾಮಕ್ಕೆ ಪೊಲೀಸ್ ಠಾಣೆಗೆ ಪ್ರಸ್ತಾವ’

ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ನೂತನ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಗೃಹ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಇಶಾ ಪಂತ್ ತಿಳಿಸಿದರು.

ಮುಂಚೆ ಕುರಕುಂಟಾದಲ್ಲಿ ಠಾಣೆ ಆರಂಭಿಸುವ ಬಗ್ಗೆ ಪ್ರಸ್ತಾವ ಸಲ್ಲಿಸುವ ಚಿಂತನೆ ಇತ್ತು. ಆದರೆ, ಕೋಡ್ಲಾ ಸುತ್ತಮುತ್ತ ಹೆಚ್ಚು ಗ್ರಾಮಗಳು ಇರುವುದರಿಂದ ಕೋಡ್ಲಾದಲ್ಲಿ ಠಾಣೆ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿಗಾಗಿ ಕಾಯುತ್ತಿದ್ದೇವೆ ಎಂದು ಎಸ್ಪಿ ತಿಳಿಸಿದರು.

ಸಾರಾಂಶ

ಪೊಲೀಸರಿಗೆ ನೀಡಲಾಗಿದ್ದ ಜೀಪ್‌ಗಳು ಹಳೆಯದಾಗಿ ಪದೇ ಪದೇ ದುರಸ್ತಿಗೆ ಬರುತ್ತಿದ್ದುದರಿಂದ ತುರ್ತು ಸಂದರ್ಭದಲ್ಲಿ ತೆರಳಲು ಅಡ್ಡಿಯಾಗಿದ್ದನ್ನು ಗಮನಿಸಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯು ಪೊಲೀಸ್ ಅಧಿಕಾರಿಗಳ ಬಳಕೆಗಾಗಿ 10 ಬೊಲೆರೊ ಜೀಪ್‌ಗಳನ್ನು ಖರೀದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.