ADVERTISEMENT

ಬೀದರ್‌ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳ, ಕಲಬುರಗಿಯಲ್ಲಿ ಅಲ್ಪ ಪ್ರಮಾಣ ಕುಸಿತ

ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಏರಿಳಿತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 19:30 IST
Last Updated 16 ಜನವರಿ 2022, 19:30 IST
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗೊಟ್ಟಂಗೊಟ್ಟದ ಅರಣ್ಯ ವೀಕ್ಷಣಾ ಗೋಪುರದಿಂದ ಕಂಡ ಅರಣ್ಯ ಪ್ರದೇಶ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗೊಟ್ಟಂಗೊಟ್ಟದ ಅರಣ್ಯ ವೀಕ್ಷಣಾ ಗೋಪುರದಿಂದ ಕಂಡ ಅರಣ್ಯ ಪ್ರದೇಶ   

ಕಲಬುರಗಿ: ದೇಶದ ವಿವಿಧ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಎರಡು ವರ್ಷಗಳಲ್ಲಿ ಅರಣ್ಯ ಪ್ರಮಾಣದ ಸ್ಥಿತಿಗತಿ ಬಗ್ಗೆ ವರದಿ ಬಿಡುಗಡೆಯಾಗಿದ್ದು, ಬೀದರ್‌ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದರೆ, ಕಲಬುರಗಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ.

ಜಿಲ್ಲೆಯ ಆರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ ಅವರು ಈ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು, 2019ರಿಂದ ಈಚೆಗೆ ದಟ್ಟ ಅರಣ್ಯ ಪ್ರದೇಶದಲ್ಲಿ ಹೆಚ್ಚಳವಾಗಿಲ್ಲ ಎಂದು ಹೇಳಿದ್ದಾರೆ. 2019ರಲ್ಲಿ ಕಲ್ಯಾಣ ಕರ್ನಾಟಕದಲ್ಲಿ (ಅಖಂಡ ಬಳ್ಳಾರಿ ಜಿಲ್ಲೆ ಹೊರತುಪಡಿಸಿ) 131.96 ಚದರ ಕಿ.ಮೀ. ಇದ್ದ ದಟ್ಟಾರಣ್ಯ ಪ್ರಮಾಣ 2021ಕ್ಕೆ 131.37 ಚದರ ಮೀಟರ್‌ಗೆ ಕುಸಿತ ಕಂಡಿದೆ. ಬಯಲು ಅರಣ್ಯ ಪ್ರಮಾಣವು 2019ರಲ್ಲಿ 508.66 ಚ.ಕಿ.ಮೀ. ಇದ್ದುದು 2021ಕ್ಕೆ 469.57 ಚ.ಕಿ.ಮೀ.ಗೆ ಇಳಿಕೆಯಾಗಿದೆ.

ಕರ್ನಾಟಕದ ಭೂಶಿರ ಬೀದರ್ ಜಿಲ್ಲೆಯ ಅರಣ್ಯ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿ 88.42 ಕಿ.ಮೀ.ನಿಂದ 97.58 ಕಿ.ಮೀ.ಗೆ ಹೆಚ್ಚಳವಾಗಿದೆ. ಕೊಪ್ಪಳ ಜಿಲ್ಲೆಯ ಅರಣ್ಯವೂ ಏರುಗತಿಯಲ್ಲಿದ್ದು, 194.89 ಚ.ಕಿ.ಮೀ. ಇದ್ದುದು 195.05 ಚ.ಕಿ.ಮೀ.ಗೆ ಹೆಚ್ಚಳವಾಗಿದೆ.

ADVERTISEMENT

ಕಲಬುರಗಿ ಜಿಲ್ಲೆಯು 195.05 ಚದರ ಕಿ.ಮೀ.ನಿಂದ 194.89 ಚ.ಕಿ.ಮೀ.ಗೆ ಅಲ್ಪ ಕುಸಿತ ಕಂಡು ಬಂದಿದೆ. ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ 147.64 ಚದರ ಕಿ.ಮೀ.ನಿಂದ 146.91 ಚದರ ಕಿ.ಮೀ.ಗೆ ಕುಸಿದಿದೆ.  ರಾಯಚೂರು ಜಿಲ್ಲೆಯಲ್ಲಿ ಹೆಚ್ಚಳವೂ ಆಗಿಲ್ಲ, ಕುಸಿತವೂ ಆಗಿಲ್ಲ. 44.23 ಚ.ಕಿ.ಮೀ.ನಷ್ಟೇ ಅರಣ್ಯ ಪ್ರದೇಶವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2019ರಲ್ಲಿ ಕಲ್ಯಾಣ ಕರ್ನಾಟಕದ 1.42ರಷ್ಟು ಭೌಗೋಳಿಕ ಪ್ರದೇಶದಲ್ಲಿ ಅರಣ್ಯವಿತ್ತು. ಆ ಪ್ರಮಾಣ ಶೇ 1.31ಕ್ಕೆ ಕುಸಿದಿದೆ. ವಿಜಯಪುರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳು ಒಟ್ಟು ಭೂಪ್ರದೇಶದ ಶೇ 1ಕ್ಕಿಂತಲೂ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿವೆ.

1988ರಲ್ಲಿ ರೂಪಿಸಲಾದ ರಾಷ್ಟ್ರೀಯ ಅರಣ್ಯ ಕಾಯ್ದೆಯ ಅನುಸಾರ ಒಟ್ಟಾರೆ ಭೂಭಾಗದಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರಬೇಕು. ಆದರೆ, ಕೇವಲ ಶೇ 1.31ರಷ್ಟು ಸರಾಸರಿ ಅರಣ್ಯವಿದೆ.

ಸಾರಾಂಶ

ದೇಶದ ವಿವಿಧ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಎರಡು ವರ್ಷಗಳಲ್ಲಿ ಅರಣ್ಯ ಪ್ರಮಾಣದ ಸ್ಥಿತಿಗತಿ ಬಗ್ಗೆ ವರದಿ ಬಿಡುಗಡೆಯಾಗಿದ್ದು, ಬೀದರ್‌ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದರೆ, ಕಲಬುರಗಿ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.