ADVERTISEMENT

ಕಲಬುರಗಿ ನಗರದ ಶಹಾಬಜಾರ್‌‌ನಲ್ಲಿ ನಿಷೇಧಾಜ್ಞೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:21 IST
Last Updated 21 ಜನವರಿ 2022, 16:21 IST
ಕಲಬುರಗಿಯ ಶಹಾಬಜಾರ್‌ ನಾಕಾದಲ್ಲಿ ಪೊಲೀಸ್‌ ಬ್ಯಾರಿಕೇಡ್‌ ಅಳವಡಿಸಿ ವೃತ್ತಕ್ಕೆ ರಕ್ಷಣೆ ನೀಡಲಾಗಿದೆ
ಕಲಬುರಗಿಯ ಶಹಾಬಜಾರ್‌ ನಾಕಾದಲ್ಲಿ ಪೊಲೀಸ್‌ ಬ್ಯಾರಿಕೇಡ್‌ ಅಳವಡಿಸಿ ವೃತ್ತಕ್ಕೆ ರಕ್ಷಣೆ ನೀಡಲಾಗಿದೆ   

ಕಲಬುರಗಿ: ನಗರದ ಶಹಾಬಜಾರ್‌ ನಾಕಾದಲ್ಲಿ ಕಟೌಟ್‌ ಹಾಕುವ ಸಂಬಂಧವಾಗಿ ಎರಡು ಸಮಾಜಗಳ ಮಧ್ಯೆ ವಿವಾದ ಉಂಟಾದ ಹಿನ್ನೆಲೆಯಲ್ಲಿ, ಜ. 20ರ ರಾತ್ರಿ 8ರಿಂದ ಹೊರಡಿಸಲಾದ ನಿಷೇಧಾಜ್ಞೆಯು ಜ. 22ರ ರಾತ್ರಿ 100ರವರೆಗೂ ಮುಂದುವರಿಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆಯಿಂದಲೂ ಈ ಪ್ರದೇಶದಲ್ಲಿ ಪೊಲೀಸ್‌ ಬಿಗಿ ಬಂದೊಬಸ್ತ್‌ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಹಾಗೂ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಮೂರು ದಾರಿಗಳು ಸಂದಿಸುವ ಈ ನಾಕಾದಲ್ಲಿ ಕಟ್ಟಿರುವ ಕಟ್ಟೆಯ ಸುತ್ತ ಬ್ಯಾರಿಕೇಡ್‌ಗಳನ್ನು ಇಟ್ಟು ಯಾರೂ ಸುಳಿಯದಂತೆ ಭದ್ರತೆ ಒದಗಿಸಲಾಗಿದೆ.

ಏತನ್ಮಧ್ಯೆ ಶುಕ್ರವಾರ ಕೂಡ ಕೋಲಿ ಸಮಾಜ ಹಾಗೂ ರಜಪೂತ ಸಮಾಜದ ಕೆಲ ಮುಖಂಡರು ಸ್ಥಳಕ್ಕೆ ತರಳಿ ಶ್ರೀರಾಮ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅವರ ಕಟೌಟ್‌ಗಳಿಗೆ ಮಾಲಾರ್ಪಣೆ ಮಾಡಿದರು.

ADVERTISEMENT

ಇಲ್ಲಿನ ಶಹಾಬಜಾರ್‌ ನಾಕಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರ ಹಾಗೂ ಶ್ರೀರಾಮನ ಭಾವಚಿತ್ರಗಳನ್ನು ಇರಿಸುವುದಕ್ಕೆ ಸಂಬಂಧಿಸಿದಂತೆ ಕೋಲಿ ಸಮಾಜ ಹಾಗೂ ರಜಪೂರ ಸಮಾಜದ ಗುಂಪುಗಳ ಮಧ್ಯೆ ಗುರುವಾರ ವಾಗ್ವಾದ ನಡೆದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಧಿಸಿದ್ದಾರೆ.

ಶಹಾಬಜಾರ್‌ ಬಸ್‍ನಿಲ್ದಾಣದಿಂದ ಲಾಲ ಹನುಮಾನ್‌ ಗುಡಿಯವರೆಗೆ, ಪ್ರಕಾಶ ಚಿತ್ರಮಂದಿರವರೆಗೆ, ಶಹಾಬಜಾರ್‌ ಬಸ್‍ನಿಲ್ದಾಣದಿಂದ ಲಾಲಗೆರಿ ಕ್ರಾಸ್, ಸರ್ಕಾರಿ ಶಾಲೆ, ಸುಭಾಷ ಗಲ್ಲಿ, ಶೆಟ್ಟಿ ಚಿತ್ರಮಂದಿರ, ಶಹಾಬಜಾರ್‌ ಸಂಪೂರ್ಣ ಪ್ರದೇಶ, ಮಲಂಗ ಹೋಟೆಲ್, ಖಾದ್ರಿ ಚೌಕ್ ಹಾಗೂ ಆಳಂದ ರಿಂಗ್ ರಸ್ತೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ. ಎರಡೂ ಸಮಾಜದ ಮುಖಂಡರ ಸಭೆ ಕರೆದು ಶೀಘ್ರವೇ ವಿವಾದ ಬಗೆಹರಿಸಲಾಗುವುದು. ಅಲ್ಲಿಯವರೆಗೆ ಯಾರೂ ಕಾನೂನು ಮೀರಬಾರದು ಎಂದು ಡಾ.ರವಿಕುಮಾರ ಕೋರಿದ್ದಾರೆ.

ಮೊದಲಿನಿಂದಲೂ ಇಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಗಿದೆ. ಆ ಚಿತ್ರ ಹಳೆಯದಾಗಿದೆ. ಜ. 21ರಂದು ಚೌಡಯ್ಯ ಅವರ ಜಯಂತಿಯ ಅಂಗವಾಗಿ ಹೊಸ ಭಾವಚಿತ್ರ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ ಎಂಬುದು ಕೋಲಿ ಸಮಾಜದ ಮುಖಂಡರ ವಾದ. ಅದೇ ರೀತಿ, ‘ಈ ಭಾಗದಲ್ಲಿ ಶ್ರೀರಾಮನ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರಾಮನ ಕಟೌಟ್‌ ನಿಲ್ಲಿಸಬೇಕು’ ಎಂಬುದು ರಜಪೂತ ಸಮಾಜದ ಮುಖಂಡರ ಆಗ್ರಹವಾಗಿದೆ.

ಸಾರಾಂಶ

ಕಲಬುರಗಿ ನಗರದ ಶಹಾಬಜಾರ್‌ ನಾಕಾದಲ್ಲಿ ಕಟೌಟ್‌ ಹಾಕುವ ಸಂಬಂಧವಾಗಿ ಎರಡು ಸಮಾಜಗಳ ಮಧ್ಯೆ ವಿವಾದ ಉಂಟಾದ ಹಿನ್ನೆಲೆಯಲ್ಲಿ, ಜ. 20ರ ರಾತ್ರಿ 8ರಿಂದ ಹೊರಡಿಸಲಾದ ನಿಷೇಧಾಜ್ಞೆಯು ಜ. 22ರ ರಾತ್ರಿ 100ರವರೆಗೂ ಮುಂದುವರಿಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.